ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಸರ್ಕಾರಿ ಶಾಲೆ ಹೆಣ್ಮಕ್ಕಳಿಗೆ ಬಯಲೇ ಶೌಚಾಲಯ!

ಔರಾದ್ ತಾಲ್ಲೂಕಿನ ಎಕಂಬಾ ಶಾಲೆಯಲ್ಲಿ ಸೌಲಭ್ಯ ಕೊರತೆ
ಮನ್ಮಥಪ್ಪ ಸ್ವಾಮಿ
Published 8 ಡಿಸೆಂಬರ್ 2023, 6:09 IST
Last Updated 8 ಡಿಸೆಂಬರ್ 2023, 6:09 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಎಕಂಬಾ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವಿವಿಧ ಮೂಲ ಹಾಗೂ ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಔರಾದ್ ತಾಲ್ಲೂಕು ಕೇಂದ್ರದಿಂದ 5 ಕಿ.ಮೀ. ದೂರದಲ್ಲಿರುವ ಈ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಸೌಲಭ್ಯದ ಕೊರತೆಯಿಂದ ಒಲ್ಲದ ಮನಸ್ಸಿನಿಂದಲೇ ಶಾಲೆಗೆ ಬಂದು ಹೋಗುತ್ತಿದ್ದಾರೆ. 8 ರಿಂದ 10ನೇ ತರಗತಿ ವರೆಗಿನ 222 ವಿದ್ಯಾರ್ಥಿಗಳ ಪೈಕಿ 147 ವಿದ್ಯಾರ್ಥಿನಿಯರಿದ್ದಾರೆ. ಆತಂಕ ಪಡುವ ಸಂಗತಿ ಎಂದರೆ ಈ ವಿದ್ಯಾರ್ಥಿನಿಯರಿಗೆ ಶೌಚಾಲಯ ಸೌಲಭ್ಯವಿಲ್ಲ. ಇವರು ಶೌಚಕ್ಕೆ ಶಾಲೆ ಅಕ್ಕ-ಪಕ್ಕದ ಗಿಡಮರ, ಮುಳ್ಳಿನ ಪೊದೆ ಅವಲಂಬಿಸಿದ್ದಾರೆ.

ಈ ಶಾಲೆಗೆ ಎಕಂಬಾ ಗ್ರಾಮ ಹಾಗೂ ಸುತ್ತಮುತ್ತಲಿನ ಐದಾರು ಕಿ.ಮೀ. ದೂರದ ಡೊಂಗರಗಾಂವ, ಹುಲ್ಯಾಳ, ಜಮಾಲಪುರ, ದುಡಕನಾಳ ಹಾಗೂ ವಿವಿಧ ತಾಂಡಾಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಬರುವ ಈ ವಿದ್ಯಾರ್ಥಿನಿಯರಿಗೆ ತಿರುಗಿ ಮನೆಗೆ ಹೋಗಲು ಸಂಜೆ ಆಗುತ್ತದೆ. ಅಷ್ಟೊತ್ತು ಅವರು ಶೌಚಾಲಯ ಬಳಸದೆ ಇದ್ದರೆ ಏನಾಗುತ್ತದೆ ಎಂಬುದನ್ನು ನೀವೇ ಉಹಿಸಿ ಎಂದು ಶಾಲೆ ಶಿಕ್ಷಕರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

‘ಶಾಲೆಯಲ್ಲಿ ಶೌಚಾಲಯ ಇಲ್ಲದೆ ನಮಗೆ ಸಮಸ್ಯೆಯಾಗುತ್ತಿದೆ. ಬಯಲಲ್ಲಿ ಹೋಗಬೇಕಾದರೆ ಜನ ಇರುತ್ತಾರೆ. ಹುಡುಗರು ಆಟವಾಡುತ್ತಿರುತ್ತಾರೆ. ಕೆಲ ಬಾರಿ ಸಂಜೆ ಮನೆಗೆ ಹೋಗುವ ತನಕ ಕಾಯಬೇಕಾಗುತ್ತದೆ. ಈ ಕಾರಣ ಜಾಸ್ತಿ ನೀರು ಕುಡಿಯಲು ಯೋಚಿಸಬೇಕಾಗಿದೆ’ ಎಂದು  ವಿದ್ಯಾರ್ಥಿನಿಯರು ಗೋಳು ಹೇಳಿಕೊಂಡಿದ್ದಾರೆ.

ನಮ್ಮ ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಇರುವುದು ನಿಜ. ಸಿಆರ್‌ಸಿ ಕಟ್ಟಡದಲ್ಲಿ ಒಂದು ಶೌಚಾಲಯ ವ್ಯವಸ್ಥೆ ಇದ್ದರೂ ಅದನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳೆಲ್ಲ ಬಳಸುವುದು ಕಷ್ಟ. ಹಳೆ ಶೌಚಾಲಯ ರಿಪೇರಿ ಮಾಡಿಕೊಂಡುವಂತೆ ಸಂಬಂಧಿತರಿಗೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ಮುಖ್ಯ ಶಿಕ್ಷಕ ಧುಳಪ್ಪ ಗಳಗೆ ತಿಳಿಸಿದ್ದಾರೆ.

ನಮ್ಮ ಶಾಲೆ ಜಮೀನು ವಿವಾದಲ್ಲಿದೆ. ಜಮೀನು ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೊಸ ಕಟ್ಟಡ ಕಟ್ಟುವಂತಿಲ್ಲ. ಈ ಕಾರಣ ವರ್ಗ ಕೋಣೆಗಳ ಕೊರತೆಯಾಗಿದೆ. ಒಂದೊಂದು ತರಗತಿಯಲ್ಲಿ 75-80 ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಬೇಕಾಗಿದೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಔರಾದ್‌ ತಾಲ್ಲೂಕಿನ ಎಕಂಬಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿನಿಯರು ಹೊರಗಡೆ ಪರೀಕ್ಷೆ ಬರೆಯುತ್ತಿರುವುದು
ಔರಾದ್‌ ತಾಲ್ಲೂಕಿನ ಎಕಂಬಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿನಿಯರು ಹೊರಗಡೆ ಪರೀಕ್ಷೆ ಬರೆಯುತ್ತಿರುವುದು
ಶಾಲೆ ಜಮೀನು ವಿವಾದದಲ್ಲಿದೆ. ಅದನ್ನು ಪರಿಹರಿಸಲು ಪ್ರಯತ್ತಿಸುತ್ತಿದ್ದೇವೆ. ಸದ್ಯ ಹಳೆ ಶೌಚಾಲಯ ರಿಪೇರಿ ಮಾಡಿ ಉಪಯೋಗಿಸಲು ಸೂಚಿಸಲಾಗಿದೆ.
-ಮಹಮ್ಮದ್ ಮಕ್ಸೂದ್, ಕ್ಷೇತ್ರ ಶಿಕ್ಷಣಾಧಿಕಾರಿ ಔರಾದ್
ನಮ್ಮ ಊರಿನ ಶಾಲೆ ಸ್ಥಿತಿ ಗಂಭೀರವಾಗಿದೆ. ಇಲ್ಲಿ ನೂರಾರು ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಯಾರೂ ಇದನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. 
-ಸತೀಶ್ ವಾಸರೆ ಜಿಲ್ಲಾಧ್ಯಕ್ಷ ಸಂಭಾಜಿ ಬ್ರಿಗೇಡರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT