ಸೋಮವಾರ, ಜನವರಿ 18, 2021
21 °C
ಸಂಸದ, ಶಾಸಕ, ವಿಧಾನಪರಿಷತ್‌ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿ

ಜನಪ್ರತಿನಿಧಿಗಳಿಗಿಲ್ಲ ಪೂರ್ಣ ಅನುದಾನ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆ ಆಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಜನಪ್ರತಿನಿಧಿಗಳಿಗೆ ನಿಗದಿತ ಅನುದಾನವೂ ಬಿಡುಗಡೆಯಾಗಿಲ್ಲ.

ಚುನಾಯಿತ ಪ್ರತಿನಿಧಿಗಳು ಅನುದಾನವನ್ನು ಪೂರ್ಣ ಬಳಕೆ ಮಾಡಿಕೊಳ್ಳಲು ಕಾಮಗಾರಿಗಳನ್ನು ಉಲ್ಲೇಖಿಸಿ ಸರ್ಕಾರಕ್ಕೆ ಪ್ರಸ್ತಾವ ಕಳಿಸಿದರೂ ಹಣ ಬಂದಿಲ್ಲ. ಇದೇ ಕಾರಣಕ್ಕೆ ಕೆಲ ಕಾಮಗಾರಿಗಳು ಪೂರ್ಣಗೊಂಡಿಲ್ಲ.

ಸಂಸದರ ನಿಧಿ: ಸಂಸದ ಭಗವಂತ ಖೂಬಾ ಅವರ 2018–2019ನೇ ಸಾಲಿನ ₹ 5 ಕೋಟಿ ಅನುದಾನ ಪೈಕಿ ₹ 2.45 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇದರಲ್ಲಿ ಶೇಕಡ 25ರಷ್ಟು ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಶೇಕಡ 75 ರಷ್ಟು ಕಾಮಗಾರಿಗಳಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. 131 ಕಾಮಗಾರಿಗಳಲ್ಲಿ 28 ಕಾಮಗಾರಿಗಳು ಮುಗಿದಿವೆ.

2019–2020ನೇ ಸಾಲಿನ ಅನುದಾನದಲ್ಲಿ ₹ 5 ಕೋಟಿ ಪೈಕಿ ₹ 2.50 ಕೋಟಿ ಬಿಡುಗಡೆಯಾಗಿದೆ. 213 ಕಾಮಗಾರಿಗಳಲ್ಲಿ ಕೇವಲ 62 ಕಾಮಗಾರಿಗಳು ಪೂರ್ಣಗೊಂಡಿವೆ. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಅನುದಾನ ಇನ್ನೂ ಬಿಡುಗಡೆ ಮಾಡಿಲ್ಲ.

ಶಾಸಕರ ನಿಧಿ:

ಬೀದರ್‌ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ 2018ರಿಂದ 2020ರ ವರೆಗೆ ₹ 12 ಕೋಟಿ ಪೈಕಿ ₹ 9 ಕೋಟಿ ಅನುದಾನ ಬಂದಿದೆ. ಪ್ರತಿ ಶಾಸಕರಿಗೆ ₹ 1.50 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಎರಡು ವರ್ಷಗಳಿಂದ ಬಾಕಿ ಅನುದಾನವನ್ನೂ ಬಿಡುಗಡೆ ಮಾಡಿಲ್ಲ.
2018–2019,2019–2020ರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಪ್ರತಿನಿಧಿಸುತ್ತಿರುವ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ₹ 72.80 ಲಕ್ಷ, ಕಾಂಗ್ರೆಸ್‌ನ ರಹೀಂ ಖಾನ್‌ ಅವರ ಬೀದರ್‌ ಕ್ಷೇತ್ರದಲ್ಲಿ ₹ 2.44 ಕೋಟಿ, ಕಾಂಗ್ರೆಸ್‌ನ ರಾಜಶೇಖರ್ ಪಾಟೀಲರ ಹುಮನಾಬಾದ್ ಕ್ಷೇತ್ರದಲ್ಲಿ ₹ 55.05 ಲಕ್ಷ, ಬಸವಕಲ್ಯಾಣ ಕ್ಷೇತ್ರದಲ್ಲಿ ₹ 96.58 ಲಕ್ಷ, ಕಾಂಗ್ರೆಸ್‌ನ ಈಶ್ವರ ಖಂಡ್ರೆ ಅವರ ಭಾಲ್ಕಿ ಕ್ಷೇತ್ರದಲ್ಲಿ ₹ 1.24 ಕೋಟಿ ಹಾಗೂ ಬಿಜೆಪಿಯ ಪ್ರಭು ಚವಾಣ್ ಪ್ರತಿನಿಧಿಸುತ್ತಿರುವ ಔರಾದ್‌ ಕ್ಷೇತ್ರದಲ್ಲಿ ₹ 1.18 ಕೋಟಿ ವೆಚ್ಚ ಮಾಡಲಾಗಿದೆ.

ಬೀದರ್‌, ಬೀದರ್‌ ದಕ್ಷಿಣ, ಹುಮನಾಬಾದ್, ಭಾಲ್ಕಿ ಕ್ಷೇತ್ರದಲ್ಲಿ ಶಾಲಾ ಕಾಲೇಜುಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಕೊಟ್ಟಿರುವ ಮಾಹಿತಿ ಲಭ್ಯವಿಲ್ಲ. ಔರಾದ್‌ ಹಾಗೂ ಬಸವಕಲ್ಯಾಣ ಕ್ಷೇತ್ರದಲ್ಲಿ ಮಾತ್ರ ಎರಡೂ ಅನುದಾನ ಬಳಸಿಕೊಳ್ಳಲಾಗಿದೆ.
 

ವಿಧಾನ ಪರಿಷತ್‌ ಸದಸ್ಯರ ನಿಧಿ

2018 ರಿಂದ 2020ರ ಅವಧಿಯಲ್ಲಿ ವಿಧಾನ ಪರಿಷತ್‌ ಸದಸ್ಯರಾದ ವಿಜಯಸಿಂಗ್, ರಘುನಾಥರಾವ್ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ ಅವರ ಒಟ್ಟು ₹ 12 ಕೋಟಿ ಅನುದಾನದಲ್ಲಿ ₹ 6 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದೆ.
ಹೆಚ್ಚುವರಿ ಅನುದಾನವೂ ಒಳಗೊಂಡಂತೆ ರಘುನಾಥರಾವ್ ಮಲ್ಕಾಪುರೆ ₹ 2.61 ಕೋಟಿ ಹಾಗೂ ಅರವಿಂದಕುಮಾರ ಅರಳಿ ₹ 2.32 ಕೋಟಿ ಅನುದಾನ ವಿನಿಯೋಗಿಸಿದ್ದಾರೆ. ವಿಜಯಸಿಂಗ್‌ ₹ 1.42 ಕೋಟಿ ಹಾಗೂ ಚಂದ್ರಶೇಖರ ಪಾಟೀಲ ₹ 92.23 ಲಕ್ಷ ಅಭಿವೃದ್ಧಿ ಕಾರ್ಯಕ್ಕೆ ಬಳಸಿದ್ದಾರೆ.

ಔರಾದ್ ವಿಧಾನಸಭಾ ಕ್ಷೇತ್ರ

ಹೊಳಸಮುದ್ರದಲ್ಲಿ ಶಾಲಾ ಕೊಠಡಿ ನಿರ್ಮಾಣ

ಕಮಲನಗರ: ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಔರಾದ್‌ ವಿಧಾನಸಭಾ ಕ್ಷೇತ್ರದ ಕಮಲನಗರ ತಾಲ್ಲೂಕಿನ ಗಡಿ ಗ್ರಾಮಗಳ ಸರ್ಕಾರಿ ಶಾಲೆಗಳ ಕೊಠಡಿ, ಕಂಪ್ಯೂಟರ್ ಹಾಗೂ ಪ್ರಯೋಗ ಶಾಲೆ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಇದಕ್ಕಾಗಿ 2018-19ನೇ ಸಾಲಿನಲ್ಲಿ, 2019-20ನೇ ಸಾಲಿನಲ್ಲಿ ಒಟ್ಟು ₹ 48 ಲಕ್ಷ ಅನುದಾನ ಒದಗಿಸಿದ್ದಾರೆ.

ಕಮಲನಗರ ತಾಲ್ಲೂಕಿನ ಹೊಳಸಮುದ್ರ ಸರ್ಕಾರಿ ಪ್ರೌಢ ಶಾಲೆಯಲ್ಲಿ ₹ 14.47 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಕೊಠಡಿ
ಹಾಗೂ ಖತಗಾಂವದಲ್ಲಿ ಪ್ರಯೋಗಾಲಯ ಕೊಠಡಿ ನಿರ್ಮಿಸಲಾಗಿದೆ.

'ನಮ್ಮ ಶಾಲೆಯಲ್ಲಿ 4 ಕೊಠಡಿಗಳ ಪೈಕಿ ಎರಡು ಶಿಥಿಲಗೊಂಡಿವೆ. ಶಾಸಕರು ಕಂಪ್ಯೂಟರ್ ಹಾಗೂ ಪ್ರಯೋಗಾಲಯಕ್ಕೆ ಎರಡು ಕೊಠಡಿ ನಿರ್ಮಿಸಿ ಕೊಟ್ಟಿದ್ದು ಅನುಕೂಲವಾಗಿದೆ’ ಎಂದು ಶಿಕ್ಷಕ ವಿಜಯಕುಮಾರ ನೂದನೂರೆ ಹೇಳುತ್ತಾರೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ

2018–2019ರಲ್ಲಿ ಬಸವಕಲ್ಯಾಣ ತಾಲ್ಲೂಕಿನ ಮುಡಬಿಯ ಲಕ್ಷ್ಮಿ ವಿದ್ಯಾವರ್ಧಕ ಸಂಘದ ಶ್ರದ್ಧಾಂಜಲಿ ಕಿವುಡ ಹಾಗೂ ಮೂಕ ಮಕ್ಕಳ ವಸತಿಯುತ ಪ್ರಾಥಮಿಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ₹ 4.90 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.

2019–2020ರಲ್ಲಿ ಬಸವಕಲ್ಯಾಣದ ನಾಲೇಜ್‌ ಪಾರ್ಕ್ ಪಬ್ಲಿಕ್‌ ಸ್ಕೂಲ್‌ಗೆ ಪೀಠೋಪಕರಣ ಖರೀದಿಗೆ ಹಾಗೂ ಟಿಪ್ಪು ಸುಲ್ತಾನ್ ಆಂಗ್ಲ ಮಾಧ್ಯಮ ಶಾಲೆಯ ಹೊಸ ಕೊಠಡಿ ನಿರ್ಮಾಣಕ್ಕೆ ₹ 4.99 ಲಕ್ಷ ಮಂಜೂರು ಮಾಡಲಾಗಿದೆ.
ಪೊನಿಕ್ಸ್ ಪ್ರಾಥಮಿಕ ಶಾಲೆ. ರಿಹಾನ್‌ ಪಬ್ಲಿಕ್‌ ಶಾಲೆ, ಎಕ್ಸ್‌ಲೆಂಟ್‌ ಪೂರ್ವ ವಿಶ್ವವಿದ್ಯಾಲಯ, ಅಲ್‌ಗೌಸ್‌ ಶಿಕ್ಷಣ ಸಂಸ್ಥೆ ಹಾಗೂ ಚಾರಿಟಬಲ್‌ ಸಂಸ್ಥೆ, ಮಹಮ್ಮದ್‌ ಹುಸೇನ್‌ ನಿಟ್ಟೂರ್‌ವಾಲೆ ಶಿಕ್ಷಣ ಹಾಗೂ ಚಾರಿಟಬಲ್‌ ಸಂಸ್ಥೆ, ಝಡ್‌.ಎ.ಜಾಬೂಕ್‌ಸವಾಕ್ ಶಿಕ್ಷಣ ಹಾಗೂ ಚಾರಿಟಬಲ್‌ ಸಂಸ್ಥೆಗೆ ಪೀಠೋಪಕರಣ ಖರೀದಿಗಾಗಿ ₹ 2 ಲಕ್ಷ ಮಂಜೂರಾತಿ ನೀಡಲಾಗಿದೆ.

ಮೋರಖಂಡಿ ಗ್ರಾಮದ ಶ್ರೀ ಸಿದ್ಧೇಶ್ವರ ಪ್ರೌಢ ಶಾಲೆ, ಶ್ರೀಸಿದ್ಧೇಶ್ವರ ಪ್ರೌಢ ಶಾಲೆಯ ಕೊಠಡಿ ನಿರ್ಮಾಣಕ್ಕೆ ₹ 4.99 ಲಕ್ಷ ಹಾಗೂ ಛತ್ರಪತಿ ಶಿವಾಜಿ ಸ್ಮಾರಕ ಸಮಿತಿಯ ಜೀಜಾಮಾತಾ ಬಾಲಕರ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ
₹ 9.97 ಲಕ್ಷ ಮಂಜೂರು ಮಾಡಲಾಗಿದೆ.

ಅರವಿಂದಕುಮಾರ ಅರಳಿ ಒದಗಿಸಿದ ಅನುದಾನ

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರು 2018-2019ರಲ್ಲಿ ಬೀದರ್ ತಾಲ್ಲೂಕಿನ ಹಮಿಲಾಪುರ ಗ್ರಾಮದಲ್ಲಿರುವ ನೆಹರು ಶಿಕ್ಷಣ ಸಂಸ್ಥೆಯ ಶಾಲಾ ಕೊಠಡಿ ನಿರ್ಮಾಣಕ್ಕೆ ₹ 5 ಲಕ್ಷ, ಬೀದರ್‌ನ ಎಚ್‌.ಎಂ.ಎನ್.ಎಂ. ಉರ್ದು ಪ್ರೌಢ ಶಾಲೆಯ ಕೊಠಡಿ ನಿರ್ಮಾಣಕ್ಕೆ ₹ 4.5 ಲಕ್ಷ ಅನುದಾನ ಒದಗಿಸಿದ್ದಾರೆ.

ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಮೂರು ಕಂಪ್ಯೂಟರ್, ಎರಡು ಕಲರ್‌ ಪ್ರಿಂಟರ್ ಹಾಗೂ ಯುಪಿಎಸ್‌ ಖರೀದಿಸಲು ₹ 2.50 ಲಕ್ಷ ಅನುದಾನ ಒದಗಿಸಿದ್ದಾರೆ. ಮಾಧವನಗರದ ಬುದ್ದಿಸ್ಟ್‌ ಎಜುಕೇಷನ್‌ ಸೊಸೈಟಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣಕ್ಕೆ ₹ 5 ಲಕ್ಷ ಅನುದಾನ ನೀಡಿದ್ದಾರೆ.

2019-2020ರಲ್ಲಿ ಬೀದರ್‌ ತಾಲ್ಲೂಕಿನ ಕಮಠಾಣಾದ ಶ್ರೀಮತಿ ಮುಕ್ತಾಬಾಯಿ ಮಾತಾ ಶಿಕ್ಷಣ ಸಂಸ್ಥೆಯ ರಮಾಬಾಯಿ ಅಂಬೇಡ್ಕರ್ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ, ಮನ್ನಾಎಖ್ಖೆಳ್ಳಿಯ ಜ್ಞಾನೋದಯ ಪ್ರೌಢ ಶಾಲೆಯ ಮೂರು ಕೊಠಡಿಗಳು, ಹುಮನಾಬಾದ್ ತಾಲ್ಲೂಕಿನ ಸಿಂದಬಂದಗಿಯ ಭಕ್ತಲಾಬಾಯಿ ತಲಘಟಕರ್ ಮೆಮೊರಿಯಲ್ ಸ್ಕೂಲ್‌ನ ಬೋಧನಾ ಕೊಠಡಿ ಹಾಗೂ ಭಾಲ್ಕಿ ತಾಲ್ಲೂಕಿನ ಕೇಸರ ಜೆವಳಗಾದ ಪಂಚಶೀಲ ಶಿಕ್ಷಣ ಸಂಸ್ಥೆಯಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ತಲಾ ₹ 5 ಲಕ್ಷ ಅನುದಾನ ಒದಗಿಸಿದ್ದಾರೆ.

‘ಕಂಪ್ಯೂಟರ್‌ ವಿಷಯ ಇದ್ದರೂ ಕಂಪ್ಯೂಟರ್‌ ಹಾಗೂ ಯುಪಿಎಸ್ ಇರಲಿಲ್ಲ. ಉನ್ನತ ಶಿಕ್ಷಣ ಇಲಾಖೆಯಿಂದ ಅನುದಾನ ದೊರಕಲಿಲ್ಲ. ಶಾಸಕರು ಅನುದಾನ ಕೊಡಲು ಮನಸು ಮಾಡಲಿಲ್ಲ. ಅರವಿಂದಕುಮಾರ ಅರಳಿ ಅವರು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಅನುದಾನ ಒದಗಿಸಿದ್ದಾರೆ' ಎಂದು ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು