ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಸೋಲು, ಗೆಲುವಿನ ಲೆಕ್ಕಾಚಾರ

ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರ
Last Updated 18 ಏಪ್ರಿಲ್ 2021, 14:45 IST
ಅಕ್ಷರ ಗಾತ್ರ

ಬೀದರ್: ಒಂದೆಡೆ ಬಿಸಿಲಿನ ಝಳ, ಇನ್ನೊಂದೆಡೆ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳು. ಇವುಗಳ ಮಧ್ಯೆಯೇ ಬಸವಕಲ್ಯಾಣ ಉಪ ಚುನಾವಣೆಯಲ್ಲಿ 15 ದಿನ ಪ್ರಚಾರ ನಡೆಸಿದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಮತದಾನ ಮುಗಿದ ನಂತರ ಭಾನುವಾರ ವಿಶ್ರಾಂತಿ ಪಡೆದರು.

ಪ್ರಚಾರ ಮುಕ್ತಾಯಗೊಂಡರೂ ಕೆಲ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಲ್ಲಿ ಆತಂಕ ಕಡಿಮೆಯಾಗಿಲ್ಲ. ಸೋಲು ಗೆಲುವಿನ ಲೆಕ್ಕಾಚಾರದ ಬಗ್ಗೆ ಚರ್ಚೆ ಶುರುವಾಗಿದೆ. ಚುನಾವಣೆಯಲ್ಲಿ ಒಟ್ಟಾರೆ ಬಿದ್ದ ಮತಗಳನ್ನು ಇರಿಸಿಕೊಂಡು, ಜಾತಿ, ಪಕ್ಷ, ಪಂಗಡ ಹೀಗೆ ವಿವಿಧ ಆಯಾಮಗಳಿಂದ ಲೆಕ್ಕಾಚಾರ ಹಾಕಿ ತಾಳೆ ಹಾಕಲಾಗುತ್ತಿದೆ.

ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡ ಪ್ರಮುಖರೊಂದಿಗೆ ಒಟ್ಟಿಗೆ ಸಮಾಲೋಚನೆ ನಡೆಸುತ್ತಿರುವುದು ನಗರದ ಪ್ರದೇಶದಲ್ಲಿನ ಚಹಾ, ಪಾನಬೀಡಾ ಅಂಗಡಿ ಹಾಗೂ ಗ್ರಾಮೀಣ ಪ್ರದೇಶಗಳ ಪಂಚಾಯಿತಿ ಕಟ್ಟೆಗಳಲ್ಲಿ ಕಂಡು ಬರುತ್ತಿದೆ.

‘ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಮಧ್ಯೆ ಚತುಷ್ಕೋನ ಸ್ಪರ್ಧೆ ಇದೆ’ ಎಂಬ ಅಭಿಪ್ರಾಯ ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸಿದ್ದರು. ಆದರೆ, ಫಲಿತಾಂಶ ಪ್ರಕಟವಾಗುವವರೆಗೆ ಏನನ್ನೂ ಹೇಳಲಾಗದು ಎಂಬ ಮಾತನ್ನೂ ಹೇಳಿದ್ದರು.

‘ಮೂರು ಪ್ರಮುಖ ರಾಜಕೀಯ ಪಕ್ಷದ ಅಭ್ಯರ್ಥಿಗಳು, ಬಂಡಾಯ ಅಭ್ಯರ್ಥಿ ಅಲ್ಲದೇ ಇತರ ಅಭ್ಯರ್ಥಿಗಳ ನಡುವೆ ಮತಗಳು ಹಂಚಿಕೆಯಾಗಿವೆ. ಯಾರು, ಎಷ್ಟು ಮತಗಳನ್ನು ಪಡೆದಿದ್ದಾರೆ ಎಂಬುದು ಫಲಿತಾಂಶದ ರೂಪದಲ್ಲಿ ಪ್ರಕಟವಾಗುವವರೆಗೆ ಕುತೂಹಲ ಹೆಚ್ಚಲಿದೆ’ಎಂದು ಬಸವಕಲ್ಯಾಣದ ಮಂಠಾಳದ ಶಿವಾಜಿ ಹೇಳುತ್ತಾರೆ.

ಜಾತಿಯಲ್ಲಿನ ಒಳ ಪಂಗಡಗಳ ಸಮೀಕರಣ, ಅಭ್ಯರ್ಥಿಗಳ ದೌರ್ಬಲ್ಯ, ಆರ್ಥಿಕ ವೆಚ್ಚ, ಮುಖಂಡರು ಪ್ರಚಾರ ನಡೆಸಿದ ರೀತಿ, ಲಿಂಗಾಯತ, ಮರಾಠಾ, ಮುಸ್ಲಿಂ, ಕೋಲಿ, ಕುರುಬ ಸಮುದಾಯದ ಪ್ರಾಬಲ್ಯವನ್ನು ಓರೆಗೆ ಹೆಚ್ಚುವ ಪ್ರಕ್ರಿಯೆಯೂ ನಡೆದಿದೆ.

ಕಾಂಗ್ರೆಸ್‌ ಅಭ್ಯರ್ಥಿ ಮಾಲಾ ನಾರಾಯಣರಾವ್‌ ಅವರಿಗೆ ಸಹಜವಾಗಿಯೇ ಕೆಲ ಮಟ್ಟಿಗೆ ಅನುಕಂಪ ವ್ಯಕ್ತವಾಗಿರುವ ಸಾಧ್ಯತೆಯಿದೆ. ನಾರಾಯಣರಾವ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು ಚುನಾವಣೆಯಲ್ಲಿ ಪಾದರಸದಂತೆ ಓಡಾಡಿ ಪ್ರಚಾರ ಮಾಡಿದ್ದಾರೆ.

‘ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಜಯಸಿಂಗ್, ಜಮೀರ್‌ ಅಹಮ್ಮದ್, ಪ್ರಿಯಾಂಕ್‌ ಖರ್ಗೆ ಅವರನ್ನೊಳಗೊಂಡು ತಂಡಗಳನ್ನು ರಚಿಸಿ ಗ್ರಾಮ ಮಟ್ಟದಲ್ಲಿ ಪ್ರಚಾರ ನಡೆಸಿ, ಮತದಾರರ ಒಲವು ಗಳಿಸಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಹೇಳುತ್ತಾರೆ.

‘ಬಿಜೆಪಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಅನೇಕ ಸಚಿವರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಹಲವು ಜನ ಸಮುದಾಯಗಳ ಮುಖಂಡರನ್ನು ಪಕ್ಷದ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಯೋಜನಾ ಬದ್ಧವಾಗಿ ಪ್ರಚಾರವನ್ನೂ ನಡೆಸಿ ಮತದಾರರಲ್ಲಿ ಅಭಿವೃದ್ಧಿಯ ಭರವಸೆ ಮೂಡಿಸಿ ಮತಗಳನ್ನು ಸೆಳೆದಿದ್ದಾರೆ ಎಂದು ಬಿಜೆಪಿ ಮುಖಂಡರು ಪ್ರತಿಪಾದಿಸುತ್ತಾರೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಒಂದು ವಾರ ಬಸವಕಲ್ಯಾಣದಲ್ಲೇ ವಾಸ್ತವ್ಯ ಮಾಡಿ ಕ್ಷೇತ್ರದ ತುಂಬ ಬಿರುಸಿನ ಪ್ರಚಾರ ಮಾಡಿ ಜನತಾ ಪರಿವಾರದ ನೆಲದಲ್ಲಿ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಪಡಿಸಲು ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಜೆಡಿಎಸ್‌ ಅಭ್ಯರ್ಥಿ ಸಯ್ಯದ್‌ ಯಸ್ರಬ್ಅಲಿ ಖಾದ್ರಿ ಅವರೂ ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಶೇ 61.49ರಷ್ಟು ಮತದಾನ

ಪ್ರಸ್ತುತ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಶೇಕಡ 61.49 ರಷ್ಟು ಮತದಾನ ಆಗಿದೆ. ಶೇ 61.07 ಪುರುಷರು ಹಾಗೂ ಶೇಕಡ 61.95 ಮಹಿಳೆಯರು ತಮ್ಮ ಮತಹಕ್ಕು ಚಲಾಯಿಸಿದ್ದಾರೆ.

2013ಲ್ಲಿ ಶೇಕಡ 63 ರಷ್ಟು ಹಾಗೂ 2018ರಲ್ಲಿ ಶೇಕಡ 64.56 ಮತದಾನವಾಗಿತ್ತು. ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಮತದಾನ ಕಡಿಮೆಯಾಗಿದೆ.

ರಾಜಕೀಯ ಆಸಕ್ತರು ಯಾವ ಪಕ್ಷ, ಯಾವ ಅಭ್ಯರ್ಥಿಗೆ ಹೇಗೆ ಮತ ಹಂಚಿಕೊಂಡಿರಬಹುದು ಎಂಬ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ಕ್ಷೇತ್ರವಾರು ಚಲಾಯಿಸಿರುವ ಮತಗಳ ಅಂದಾಜು ಪಟ್ಟಿ ಹಿಡಿದುಕೊಂಡು ಲೆಕ್ಕಾಚಾರ ನಡೆಸಿದ್ದಾರೆ.
ಚರ್ಚೆಗೆ ಇನ್ನೂ ಎರಡು ವಾರ ಅವಕಾಶ ಇದೆ. ಇದಕ್ಕೆ ಮೇ 2ರ ವರೆಗೂ ಕಾಯಲೇಬೇಕು. ಅಂದು ಎಲ್ಲದಕ್ಕೂ ಉತ್ತರ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT