ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌| ₹70ಕ್ಕೆ ಇಳಿದ ಈರುಳ್ಳಿ ಬೆಲೆ: ನಿಟ್ಟುಸಿರು ಬಿಟ್ಟ ಗ್ರಾಹಕರು

ಬೆಳ್ಳುಳ್ಳಿ ಬೆಲೆ ಅಬಾಧಿತ
Last Updated 13 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬೀದರ್: ನಗರದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಿದ್ದು, ಗ್ರಾಹಕರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ವಾರ ಈರುಳ್ಳಿ ಬೆಲೆ ಹಲವು ವರ್ಷಗಳಲ್ಲೇ ಗರಿಷ್ಠ ಅಂದರೆ ಕೆ.ಜಿಗೆ ₹120ಕ್ಕೆ ತಲುಪಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. ಈಗ ₹70ಕ್ಕೆ ಇಳಿದಿದೆ. ಬೇರೆ ಬೇರೆ ರಾಜ್ಯಗಳಿಂದ ಈರುಳ್ಳಿ ಬಂದಿರುವ ಕಾರಣ ಬೆಲೆ ಸ್ವಲ್ಪ ತಗ್ಗಿದೆ.

ಈರುಳ್ಳಿ ಬೆಲೆ ಗಗನಕ್ಕೇರಿದಾಗ ಕೆಲ ಮಾಂಸಾಹಾರಿ ಹೋಟೆಲ್, ಮಿರ್ಚಿ ಭಜಿ ಅಂಗಡಿಯವರು ಗ್ರಾಹಕರಿಗೆ ಈರುಳ್ಳಿ ಕೊಡುವುದನ್ನೇ ನಿಲ್ಲಿಸಿದ್ದರು. ಒಂದೊಮ್ಮೆ ಗ್ರಾಹಕರು ಬೇಡಿಕೆ ಇಟ್ಟರೆ ₹10 ಹೆಚ್ಚುವರಿಯಾಗಿ ಪಡೆದು ಕೊಟ್ಟಿದ್ದರು. ಪಾನಿಪುರಿ ಅಂಗಡಿಗಳಲ್ಲಿ ಪಾನಿಪುರಿ ಜತೆಗೆ ಈರುಳ್ಳಿ ಬದಲು ಎಲೆಕೋಸು ಕೊಟ್ಟಿದ್ದರು. ಇದೀಗ ಬೆಲೆ ಕಡಿಮೆಯಾದ ಕಾರಣ, ನಿಧಾನವಾಗಿ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಾರಂಭಿಸಿದೆ.

ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಿದ್ದರೂ, ಸಗಟು ವ್ಯಾಪಾರಿಗಳೇ ಅದರ ಪೂರ್ಣ ಲಾಭ ಪಡೆದುಕೊಳ್ಳತ್ತಿದ್ದಾರೆ. ರೈತರಿಗೆ ಲಾಭ ದೊರಕುತ್ತಿಲ್ಲ. ರೈತರು ಮಾರಾಟಕ್ಕೆ ತಂದ ಈರುಳ್ಳಿ ಇನ್ನೂ ಒಣಗಿಲ್ಲ. ಹಸಿ ಇದೆ ಎಂದು ಹೇಳಿ ಮಧ್ಯವರ್ತಿಗಳು ಬೆಲೆ ಇಳಿಸುತ್ತಿದ್ದಾರೆ.

ಬೇರೆಡೆಗೆ ಸಾಗಿಸಲು ಆಗದ ರೈತರು ಮಧ್ಯವರ್ತಿಗಳು ನಿಗದಿಪಡಿಸಿದ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ, ನೇರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮೂಲಕ ಈರುಳ್ಳಿ ಖರೀದಿಸಬೇಕು ಎಂದು ಗ್ರಾಹಕ ಓಂಕಾರ ಪಾಟೀಲ ಒತ್ತಾಯಿಸಿದರು.

ಸೋಲ್ಲಾಪುರದಿಂದ ಬಂದಿರುವ ಬೆಳ್ಳುಳ್ಳಿ ಬೆಲೆ ಈ ವಾರವೂ ಕಳೆದ ವಾರದಷ್ಟೇ ಅಂದರೆ ಪ್ರತಿ ಕೆ.ಜಿ.ಗೆ ₹180 ಇದೆ. ನುಗ್ಗೆಕಾಯಿ ಬೆಲೆ ಪ್ರತಿ ಕೆ.ಜಿಗೆ ₹700 ಆಗಿದೆ. ಗ್ರಾಹಕರು ಖರೀದಿಸಲಿಕ್ಕಿಲ್ಲ ಎನ್ನುವ ಲೆಕ್ಕಾಚಾರದಲ್ಲಿ ಯಾವ ಅಂಗಡಿಯವರೂ ನುಗ್ಗೆಕಾಯಿ ಮಾರಾಟಕ್ಕೆ ಇಟ್ಟಿಲ್ಲ.

ಹೈದರಾಬಾದ್‌ನಿಂದ ಆವಕ ಆಗಿರುವ ಮೆಣಸಿನಕಾಯಿ ಬೆಲೆ ಪ್ರತಿ ಕೆ.ಜಿ.ಗೆ ₹25, ಗಜ್ಜರಿ ₹60, ಬೀನ್ಸ್ ₹50, ಎಲೆಕೋಸು ₹25, ಹೂಕೋಸು ₹50 ಹಾಗೂ ಟೊಮೆಟೊ ಬೆಲೆ ₹ 20 ಇದೆ.

ಆಲೂಗಡ್ಡೆ ಆಗ್ರಾದಿಂದ ಬಂದಿದ್ದು, ಬೆಲೆ ಸ್ಥಿರವಾಗಿದೆ. ಪ್ರತಿ ಕೆ.ಜಿ.ಗೆ ₹20 ರಂತೆ ಮಾರಾಟವಾಗುತ್ತಿದೆ ಎಂದು ಗಾಂಧಿಗಂಜ್‌ನ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT