ಸೋಮವಾರ, ಜೂನ್ 21, 2021
23 °C
ಕೇಂದ್ರ ಇಂಧನ ಇಲಾಖೆ ಅನುಮೋದನೆ: ಸಂಸದ

ನಾಲ್ಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ: ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಕೋವಿಡ್ ಪೀಡಿತರ ಚಿಕಿತ್ಸೆಗೆ ಆಮ್ಲಜನಕ ಕೊರತೆ ನೀಗಿಸಲು ಕೇಂದ್ರ ಇಂಧನ ಇಲಾಖೆ ಬೀದರ್ ಜಿಲ್ಲೆಯ ನಾಲ್ಕು ಸೇರಿ ರಾಜ್ಯದ 28 ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲು ಅನುಮೋದನೆ ನೀಡಿದೆ‌‌’ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ಜಿಲ್ಲೆಯ ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣ ಹಾಗೂ ಔರಾದ್ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಲಾ ₹ 82 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಘಟಕಗಳು ಸ್ಥಾಪನೆಯಾಗಲಿವೆ. ಪ್ರತಿ ಘಟಕ ನಿಮಿಷಕ್ಕೆ ಒಂದು ಸಾವಿರ ಲೀಟರ್ ಆಮ್ಲಜನಕ ಉತ್ಪಾದಿಸಲಿದೆ. ದಿನದ 24 ಗಂಟೆ ನಿರಂತರ ಆಮ್ಲಜನಕ ಲಭ್ಯವಾಗಲಿದೆ’ ಎಂದು ಅವರು ಹೇಳಿದ್ದಾರೆ.

‘ಕೇಂದ್ರ ಸರ್ಕಾರವು ತನ್ನ ಸ್ವಾಮ್ಯದ ಎಂಆರ್‌ಪಿಎಲ್, ಓಎನ್‌ಜಿಸಿ ಮತ್ತು ಎಂಡಿಸಿ ಕಂಪನಿಗಳಿಗೆ ಘಟಕ ಸ್ಥಾಪಿಸಲು ಈಗಾಗಲೇ ನಿರ್ದೇಶನ ನೀಡಿದೆ. ಶೀಘ್ರ ಘಟಕಗಳು ಸ್ಥಾಪನೆಯಾಗಲಿದ್ದು, ಒಂದು ತಿಂಗಳೊಳಗೆ ಆಮ್ಲಜನಕ ಉತ್ಪಾದನೆ ಮಾಡಲಿವೆ. ಚಿಂಚೋಳಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗಾಗಲೇ ಆಮ್ಲಜನಕ ಘಟಕ ಸ್ಥಾಪನೆ ಕಾರ್ಯ ಪ್ರಾರಂಭವಾಗಿದೆ’ ಎಂದರು.

‘ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿನ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದ ವೇಳೆ ಕೆಲ ಕಡೆ ಆಮ್ಲಜನಕ ಕೊರತೆ ಇರುವುದು ಕಂಡು ಬಂತು. ಈ ಬಗ್ಗೆ ಕೇಂದ್ರ ಇಂಧನ ಸಚಿವರು, ಅಧಿಕಾರಿಗಳು ಹಾಗೂ ರಾಜ್ಯದ ಅಧಿಕಾರಿಗಳ ಗಮನ ಸೆಳೆದಿದ್ದೆ. ಜಿಲ್ಲೆಯಲ್ಲಿನ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದೆ. ಆಮ್ಲಜನಕ ಘಟಕ ಸ್ಥಾಪನೆಗೆ ಸಿಕ್ಕಿರುವುದು ಅದರ ಫಲವೇ ಆಗಿದೆ‌‌’ ಎಂದು ತಿಳಿಸಿದ್ದಾರೆ.

‘ಕೋವಿಡ್ ತಡೆಗೆ ಜನ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ವಿವಿಧ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಸರ್ಕಾರದೊಂದಿಗೆ ಕೈಜೋಡಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು