ಗುರುವಾರ , ಜನವರಿ 20, 2022
15 °C
ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಜಾರಿಯಾಗದ ಯೋಜನೆ; ವಾಹನಗಳ ಸಂಚಾರಕ್ಕೆ ತೊಂದರೆ

ಅವ್ಯವಸ್ಥಿತ ಪಾರ್ಕಿಂಗ್: ಪರಿಹಾರ ಕಾಣದ ಸಮಸ್ಯೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ನಾಲ್ಕು ಪುರಾತನ ನಗರ ಹಾಗೂ ಪಟ್ಟಣಗಳಿವೆ. ಆದರೆ, ನಗರ ಯೋಜನೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಅವರು ಮಾಸ್ಟರ್‌ ಪ್ಲ್ಯಾನ್ ಮಾಡಿ ಬೀದರ್, ಬಸವಕಲ್ಯಾಣ ನಗರ, ಭಾಲ್ಕಿ ಹಾಗೂ ಹುಮನಾಬಾದ್‌ ಪಟ್ಟಣಗಳಿಗೆ ಹೊಸ ಸ್ವರೂಪ ನೀಡಿದರು. ಆದರೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಈವರೆಗೆ ಸುಧಾರಣಾ ಕ್ರಮ ಕೈಗೊಳ್ಳಲಾಗಿಲ್ಲ.

ನಗರ ಮತ್ತು ಪಟ್ಟಣಗಳು ವಿಸ್ತರಣೆಗೊಳ್ಳುತ್ತಿದ್ದು. ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಜಿಲ್ಲೆಯ ನಗರ, ಪಟ್ಟಣಗಳಲ್ಲಿ ಅನೇಕ ಬಹುಮಹಡಿ ಕಟ್ಟಡಗಳು ತಲೆ ಎತ್ತಿದರೂ ಕಟ್ಟಡಗಳ ಮಾಲೀಕರು ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೂ ಈ ದಿಸೆಯಲ್ಲಿ ಕ್ರಮ ಕೈಗೊಂಡಿಲ್ಲ.

ಬೀದರ್‌ನ ಓಲ್ಡ್‌ಸಿಟಿ, ಉದಗಿರ ರಸ್ತೆ, ಗುಂಪಾ ರಸ್ತೆ, ಮೋಹನ್‌ ಮಾರ್ಕೆಟ್, ರೋಟರಿ ವೃತ್ತ ಸಮೀಪದ ಕೆನರಾ ಬ್ಯಾಂಕ್‌ ರಸ್ತೆ, ಚಿದ್ರಿ ರಸ್ತೆಯಲ್ಲಿ ಪಾರ್ಕಿಂಗ್‌ ಸಮಸ್ಯೆ ಹೇಳತೀರದು. ವಾಹನ ನಿಲ್ಲಿಸಲು ಸೂಕ್ತ ಜಾಗ ಹುಡುಕುವುದೇ ಸವಾರರಿಗೆ ಸವಾಲಿನ ಕೆಲಸ. ಕೆಲವರು ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಾರೆ. ಸಂಚಾರಕ್ಕೆ ತೊಡಕಾಗುತ್ತಿದೆ.

ಅನೇಕ ಹೋಟೆಲ್‌ಗಳು, ಆಸ್ಪತ್ರೆಗಳು, ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಮಾಲ್‌, ಬಟ್ಟೆ ಹಾಗೂ ಎಲೆಕ್ಟ್ರಾನಿಕ್‌ ಅಂಗಡಿಗಳೇ ಇರುವ ಉದಗಿರ ರಸ್ತೆ ಹಾಗೂ ಮೋಹನ್‌ ಮಾರ್ಕೆಟ್‌ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶ ಇಲ್ಲ. ಬಹುತೇಕ ಬಹುಮಹಡಿ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ಸೌಲಭ್ಯ ಇಲ್ಲ. ಅಗತ್ಯ ವಸ್ತುಗಳನ್ನು ಖರೀದಿಸಲು ನಗರಕ್ಕೆ ಬೈಕ್ ಹಾಗೂ ಕಾರುಗಳಲ್ಲಿ ಬರುವವರು ವಾಹನಗಳನ್ನು ‌ನಿಲ್ಲಿಸಲು ಹರಸಾಹಸ ಪಡಬೇಕಿದೆ.

‘ನಗರದಲ್ಲಿ ಈಗಾಗಲೇ ಉದ್ಯಾನಕ್ಕೆ ಮೀಸಲಿಟ್ಟ ಜಾಗಗಳು ಅತಿಕ್ರಮಣಗೊಂಡು ಮಠ, ಮಂದಿರಗಳು ನಿರ್ಮಾಣವಾಗಿವೆ. ಅದಕ್ಕೆ ಅಧಿಕಾರಿಗಳೇ ಪರೋಕ್ಷ ಬೆಂಬಲ ನೀಡಿದ್ದಾರೆ. ಪಾರ್ಕಿಂಗ್ ಸಮಸ್ಯೆ ಹಲವು ವರ್ಷಗಳಿಂದ ಕಾಡುತ್ತಿದ್ದರೂ ಸ್ಥಳೀಯ ಆಡಳಿತ ಸರಿಪಡಿಸುವ ಗೋಜಿಗೆ ಹೋಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ ಗೋರನಾಳಕರ್‌ ಹಾಗೂ ಆನಂದ ಪಾಟೀಲ ಬೇಸರ ವ್ಯಕ್ತಪಡಿಸುತ್ತಾರೆ.

‘ವಾಹನಗಳ ನಿಲುಗಡೆಗೆ ಜಾಗ ಇಲ್ಲದಿದ್ದರೆ ಸಂಚಾರ ದಟ್ಟಣೆ ಹೆಚ್ಚುತ್ತದೆ. ಅಪಘಾತಗಳ ಸಂಖ್ಯೆ ಕೂಡ ವೃದ್ಧಿಸುತ್ತದೆ. ನಗರ ಪಟ್ಟಣಗಳಲ್ಲಿ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಲು ಜಾಗ ಮೀಸಲಿಡಬೇಕು. ಈ ವಿಷಯವನ್ನು ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಹೇಳುತ್ತಾರೆ.

ನಗರಕ್ಕೆ ಪಾರ್ಕಿಂಗ್ ಅವಶ್ಯಕತೆ ಮನಗಂಡು ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನುರಾಗ್ ತಿವಾರಿ ಅವರು
ನಗರಸಭೆ, ಆರ್‌ಟಿಒ ಹಾಗೂ ಪೊಲೀಸ್‌ ಇಲಾಖೆಗಳಿಗೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿದ್ದರು. ಪ್ರೊಬೆಷನರಿ ಐಎಎಸ್‌ ಅಧಿಕಾರಿಯಾಗಿದ್ದ ಗುರುದತ್ತ ಹೆಗಡೆ ಅವರನ್ನು ಇದೇ ಕಾರ್ಯಕ್ಕೆ ನಿಯೋಜಿಸಿ ಬಹುಮಹಡಿ ಕಟ್ಟಡಗಳ ಮಾಲೀಕರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಅವರ ವರ್ಗಾವಣೆ ನಂತರ ನಗರಸಭೆ ಅಧಿಕಾರಿಗಳು ಕೈಚೆಲ್ಲಿ ಕುಳಿತರು. ಹೀಗಾಗಿ ಸಮಸ್ಯೆ ಮತ್ತೆ ಜಟಿಲಗೊಂಡಿದೆ.

ಐಜಿಪಿ ಅಲೋಕಕುಮಾರ ಅವರು ಬೀದರ್‌ಗೆ ಬಂದು ವಾಹನ ಚಾಲಕರು ಹಾಗೂ ಬೈಕ್‌ ಸವಾರರಿಗೆ ಗುಲಾಬಿಹೂವು ನೀಡಿ ವಾಹನಗಳನ್ನು ಹೇಗೆ ಪಾರ್ಕಿಂಗ್‌ ಮಾಡಬೇಕು ಎಂದು ತಿಳಿವಳಿಕೆ ನೀಡಿದ್ದರು. ಉದಗಿರ ರಸ್ತೆಯ ವಾಣಿಜ್ಯ ಮಳಿಗೆಗಳ ಮುಂದೆ ಸಾರ್ವಜನಿಕರು ಒಂದು ವಾರ ಮಾತ್ರ ನಿಯಮ ಪಾಲಿಸಿದರು. ನಂತರ ಮತ್ತೆ ಅವ್ಯವಸ್ಥೆ ಮುಂದುವರಿದಿದೆ.

ಸುಗಮ ಸಂಚಾರಕ್ಕೆ ಅಡ್ಡಿ

ಔರಾದ್ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ವಾಹನ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ಇಲ್ಲದ ಕಾರಣ ವಾಹನಗಳನ್ನು ಮನಸೋಇಚ್ಛೆ ನಿಲ್ಲಿಸುತ್ತಾರೆ. ನಿಲ್ದಾಣದ ಎದುರು ಖಾಸಗಿ ವಾಹನ ನಿಲುಗಡೆಯಿಂದ ಅವಘಡಕ್ಕೂ ಕಾರಣವಾಗುತ್ತಿದೆ.

ಖಾಸಗಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ಅನುವು ಮಾಡಿಕೊಡಲು ಸಾರ್ವಜನಿಕರು ಪಟ್ಟಣ ಪಂಚಾಯತಿಗೆ ಅನೇಕ ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಹುಲಸೂರ ಪಟ್ಟಣದ ರಾಜ್ಯ ಹೆದ್ದಾರಿ ಸಮೀ‍ಪ ಡಿಸಿಸಿ ಬ್ಯಾಂಕ್‌ ಕಚೇರಿ ಮುಂಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡದ ಕಾರಣ ಸಮಸ್ಯೆ ಹೆಚ್ಚಾಗುತ್ತಿದೆ. ಕಮಲನಗರದಲ್ಲೂ ಇದೇ ಪರಿಸ್ಥಿತಿ ಇದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಊರು ಇದೆ. ಸ್ಥಳೀಯ ಆಡಳಿತ ಇಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಲ್ಲ.

ಹುಮನಾಬಾದ್‌ ಹಾಗೂ ಚಿಟಗುಪ್ಪದಲ್ಲಿ ಕಟ್ಟಡ ನಿರ್ಮಾಣಕ್ಕೆ ಮಾಲೀಕರು ನೀಲನಕ್ಷೆ ಸಿದ್ಧಪಡಿಸಿಕೊಂಡು ಅಧಿಕಾರಿಗಳಿಂದ ಅನುಮತಿ ಪಡೆದುಕೊಂಡರೂ ನಂತರ ಪಾರ್ಕಿಂಗ್‌ಗೆ ಜಾಗ ಬಿಡುತ್ತಿಲ್ಲ. ನೆಲ ಮಳಿಗೆ ಮಹಡಿಯಲ್ಲಿ ಅಂಗಡಿಗಳನ್ನು ತೆರೆದು ಬಾಡಿಗೆಗೆ ಕೊಡುತ್ತಿದ್ದಾರೆ. ಇದು ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ.

ಬಸವಕಲ್ಯಾಣ: ವಾಹನಗಳ ನಿಲುಗಡೆಗೆ ತೊಂದರೆ

ಬಸವಕಲ್ಯಾಣ ಜಿಲ್ಲೆಯ ಎರಡನೇ ದೊಡ್ಡ ನಗರವಾಗಿದ್ದು ಜಿಲ್ಲಾ ಕೇಂದ್ರಕ್ಕಾಗಿ ಬೇಡಿಕೆ ಇದೆ. ಆದರೂ, ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಇಲ್ಲದ್ದರಿಂದ ತೊಂದರೆ ಆಗುತ್ತಿದೆ.

ಹತ್ತು ಸಾವಿರಕ್ಕೂ ಅಧಿಕ ಲಾರಿಗಳು ಇಲ್ಲಿವೆ. ಇವುಗಳಿಗೆ ಸಸ್ತಾಪುರ ಬಂಗ್ಲಾ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಆಟೊ ನಗರವಿದೆ. ಸಾವಿರಕ್ಕೂ ಹೆಚ್ಚು ಆಟೊ ಗ್ಯಾರೇಜ್ ಗಳಿವೆ. ಇಲ್ಲಿಯೇ ಹೆಚ್ಚಿನ ಲಾರಿಗಳು ನಿಲ್ಲುತ್ತವೆ. ಆದರೂ ಚಾಲಕರು ಹಾಗೂ ಇತರೆ ಸಿಬ್ಬಂದಿ ಮನೆಗಳಿಗೆ ಬಂದಾಗ ಲಾರಿಗಳನ್ನು ನಗರದೊಳಗೆ ತೆಗೆದುಕೊಂಡು ಬರುತ್ತಾರೆ. ಈ ಕಾರಣ ಅಲ್ಲಲ್ಲಿ ಲಾರಿ ನಿಂತಿರುವುದು ಕಂಡು ಬರುತ್ತದೆ.

'ಬಸವಕಲ್ಯಾಣದಲ್ಲಿ ಬಹುಮಹಡಿ ಕಟ್ಟಡಗಳು ಇಲ್ಲಿ ಬೆರಳೆಣಿಕೆಯಷ್ಟು ಇವೆ. ಅಂಗಡಿ, ಮಳಿಗೆಗಳು, ಕಟ್ಟಡಗಳು ಕೂಡ ಒಂದು ಅಂತಸ್ತಿಗೆ ಸಿಮೀತವಾಗಿವೆ. ಆದರೂ ದ್ವಿಚಕ್ರವಾಹನ, ಕಾರು, ಲಾರಿಗಳು ಹೆಚ್ಚಾಗಿರುವ ಕಾರಣ ಎದುರಿನ ರಸ್ತೆಗಳಲ್ಲಿಯೇ ಅವುಗಳನ್ನು ನಿಲ್ಲಿಸಲಾಗುತ್ತಿದೆ’ ಎಂದು ವ್ಯಾಪಾರಿ ಸಂಗಪ್ಪ ಪರೆಪ್ಪ ಹೇಳುತ್ತಾರೆ.

'ಯಾವುದೇ ಕಟ್ಟಡ ಕಟ್ಟುವುದಿದ್ದರೂ ನಿಯಮದ ಪ್ರಕಾರ ವಾಹನ ಪಾರ್ಕಿಂಗ್ ಗೆ ಜಾಗ ಬಿಡುವುದು ಹಾಗೂ ಇತರೆ ವ್ಯವಸ್ಥೆ ಕಲ್ಪಿಸುವ ಕರಾರುಪತ್ರ ಬರೆದುಕೊಟ್ಟ ನಂತರವೇ ಕಟ್ಟಡ ಕಟ್ಟುವುದಕ್ಕೆ ಪರವಾನಗಿ ನೀಡಲಾಗುತ್ತದೆ. ಆದರೂ ಹೆಚ್ಚಿನವರು ನಿಯಮ ಪಾಲನೆ ಮಾಡುತ್ತಿಲ್ಲ' ಎಂದು ನಗರಸಭೆ ವ್ಯವಸ್ಥಾಪಕ ಜಟೆಪ್ಪ ಹೇಳಿದ್ದಾರೆ.

ಬಸ್‌ ನಿಲ್ದಾಣದಲ್ಲೂ ಜಾಗವಿಲ್ಲ

ಭಾಲ್ಕಿ: ಪಟ್ಟಣದ ತಹಶೀಲ್ದಾರ್‌ ಕಚೇರಿ ಮುಂಭಾಗ, ಬಸ್‌ ನಿಲ್ದಾಣ ಸೇರಿದಂತೆ ಬಹುತೇಕ ಎಲ್ಲ ಅಂಗಡಿ, ಮುಂಗಟ್ಟು, ಕಚೇರಿ ಮುಂಭಾಗ ಪಾರ್ಕಿಂಗ್‌ ಮಾಡಲು ವಾಹನ ಚಾಲಕರು ಹಾಗೂ ಬೈಕ್‌ ಸವಾರರು ಪರದಾಡಬೇಕಾಗಿದೆ.

ಸಂಚಾರ ಒತ್ತಡ ಕಡಿಮೆ ಮಾಡಲು ಪೊಲೀಸರು ಮುಖ್ಯರಸ್ತೆಯ ಎರಡೂ ಬದಿಗೆ ದಿನಬಿಟ್ಟು ದಿನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿದ್ದಾರೆ. ಆದರೂ ನಿಯಮ ಉಲ್ಲಂಘಿಸಿ ವಾಹನ ನಿಲುಗಡೆ ಮಾಡುವುದು ಮುಂದುವರಿದಿದೆ’ ಎಂದು ಪಟ್ಟಣದ ನಿವಾಸಿಗಳಾದ ಭೀಮರಾವ್‌ ಹಾಗೂ ಶಶಾಂಕ ಕುಚರೆ ಬೇಸರ ವ್ಯಕ್ತಪಡಿಸುತ್ತಾರೆ.

’ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್‌ಗಾಗಿಯೇ ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು. ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳುತ್ತಾರೆ.

ಪ್ರಸಕ್ತ ವರ್ಷ ನೋಂದಣಿಯಾದ ವಾಹನಗಳು

ದ್ವಿಚಕ್ರ ವಾಹನ-7866
ಕಾರು-1508
ಟ್ಯಾಕ್ಸಿ–9
ಬಸ್‌- 1
ಲಾರಿ–197
ಟ್ರ್ಯಾಕ್ಟರ್–397
ಪ್ರವಾಸಿ ವಾಹನ-2
ಆಂಬುಲೆನ್ಸ್–5
ಶಾಲಾ ವಾಹನ- 1

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು