ಶುಕ್ರವಾರ, ಜೂಲೈ 3, 2020
23 °C
ಹಕ್‌ ಕಾಲೊನಿ ನಿವಾಸಿಗಳ ಮನವಿ

ದಯವಿಟ್ಟು ಕುಡಿಯುವ ನೀರು ಪೂರೈಸಿ: ಬೀದರ್‌ ನಗರದ ಹಕ್‌ ಕಾಲೊನಿ ನಿವಾಸಿಗಳ ಮನವಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ನಗರದ ಹಕ್‌ ಕಾಲೊನಿಯ ನಿವಾಸಿಗಳು ಮೂರು ತಿಂಗಳಿಂದ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಅಡಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದರೂ ಕಾಲೊನಿಯ ಕೊನೆಯ ಎರಡು ಲೈನ್‌ಗಳಿಗೆ ನೀರು ತಲುಪುತ್ತಿಲ್ಲ.

ಇಲ್ಲಿಯ ನಿವಾಸಿಗಳು ನಿತ್ಯ ಕುಡಿಯುವ ನೀರಿಗಾಗಿ ಕೊಡಗಳನ್ನು ಹಿಡಿದುಕೊಂಡು ಅಲೆದಾಡಬೇಕಾಗಿದೆ. ಕೊರೊನಾ ಸೋಂಕಿನಿಂದಾಗಿ ನೀರು ಸರಬರಾಜು ಮಾಡುವ  ಟ್ಯಾಂಕರ್‌ಗಳು ಸಹ ಈ ಓಣಿಗೆ ಬರುತ್ತಿಲ್ಲ. ಕಾಲೊನಿಯ ನಿವಾಸಿಗಳು ನಗರಸಭೆಯ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಮಾಡುತ್ತಲೇ ಇದ್ದಾರೆ. ಯಾರೊಬ್ಬರೂ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.

ಕಾರಂಜಾ ಜಲಾಶಯದಲ್ಲೂ ನೀರಿನ ಸಂಗ್ರಹ ಕಡಿಮೆಯಾಗಿದೆ. ಹೀಗಾಗಿ ಪ್ರಸ್ತುತ ಮೂರು ದಿನಗಳಿಗೆ ಒಮ್ಮೆ ನೀರು ಪೊರೈಕೆಯಾಗುತ್ತಿದೆ. ಕೆಲವರು ತಮ್ಮ ಮನೆಗಳಿಗೆ ನೀರು ಬರುತ್ತಿಲ್ಲ ಎನ್ನುವ ಕಾರಣಕ್ಕೆ ರಸ್ತೆಯಲ್ಲಿ ತಗ್ಗು ತೋಡಿ ನೀರು ಹಿಡಿದು ಕೊಳ್ಳುತ್ತಿದ್ದಾರೆ. ಹೀಗಾಗಿ ಎರಡು ಓಣಿಗಳಲ್ಲಿರುವ 20 ಮನೆಗಳ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಮನೆಗಳಿಗೆ ನೀರು ಬಾರದ ಕಾರಣ ಕೊಳವೆಬಾವಿ ಇರುವವರ ಮನೆಗಳಿಗೆ ತೆರಳಿ ನಿತ್ಯ ಕೈಮುಗಿದು ನೀರು ಬೇಡಿಕೊಂಡು ತರುತ್ತಿದ್ದಾರೆ. ಆರಂಭದಲ್ಲಿ ಎಲ್ಲರೂ ಮಾನವೀಯತೆ ಮೆರೆದರು. ಇದೀಗ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾದ ಕಾರಣ ಅವರೂ ಸಹ ನೀರು ಕೊಡಲು ಹಿಂಜರಿಯುತ್ತಿದ್ದಾರೆ. ಲಾಕ್‌ಡೌನ್ ಇರುವ ಕಾರಣ ನೀರು ಎಲ್ಲಿಂದ ತರಬೇಕು ಎನ್ನುವುದು ನಾಗರಿಕರಿಗೆ ಯಕ್ಷ ಪ್ರಶ್ನೆಯಾಗಿದೆ.

ಕುಡಿಯುವ ನೀರಿನ ಸಮಸ್ಯೆ ಗಂಭೀರವಾದ ಮೇಲೆ ನಗರಸಭೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಪತ್ರ ಕೊಟ್ಟಿದ್ದೇನೆ. ಆದರೆ ಯಾರೊಬ್ಬರೂ ನಮ್ಮ ಓಣಿಗೆ ಬಂದಿಲ್ಲ. ಕನಿಷ್ಠ ಚಿಕ್ಕದಾದ ಒಂದು ಟ್ಯಾಂಕರ್‌ ಸಹ ಕಳಿಸಿಲ್ಲ ಎಂದು ಹಕ್‌ ಕಾಲೊನಿಯ ಹಿರಿಯರಾದ ನಾಮದೇವ ಬಯ್ಯಾ ಹೇಳುತ್ತಾರೆ.

‘ನಮ್ಮ ಓಣಿಯ ಜನ ಎರಡು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ನೀರು ಹೊತ್ತು ತರುವಷ್ಟು ಶಕ್ತಿ ನನ್ನ ಬಳಿ ಉಳಿದಿಲ್ಲ. ನೀರು ಕುಡಿಯದೆ ಬದುಕಿ ಉಳಿಯಲೂ ಸಾಧ್ಯವಿಲ್ಲ. ಹೀಗಾಗಿ ನಗರಸಭೆಗೆ ಮನವಿ ಸಲ್ಲಿಸುತ್ತಲೇ ಇದ್ದೇನೆ’ ಎಂದು ಹೇಳುತ್ತಾರೆ.

‘ನಗರಸಭೆ ಸಿಬ್ಬಂದಿ ಕುಡಿಯುವ ನೀರು ಸರಬರಾಜು ಮಾಡುವ ಜವಾಬ್ದಾರಿಯನ್ನು ನಗರ ನೀರು ಪೂರೈಕೆ ಇಲಾಖೆಗೆ ವಹಿಸಿಕೊಡಲಾಗಿದೆ ಎಂದು ಹೇಳುತ್ತಾರೆ. ನೌಬಾದ್‌ನಲ್ಲಿರುವ ಕಚೇರಿಗೆ ಹೋದರೆ ಅವರು ನಮಗೆ ಸಂಬಂಧಪಟ್ಟಿಲ್ಲ ಎಂದು ಉತ್ತರಿಸುತ್ತಿದ್ದಾರೆ. ಎರಡು ಇಲಾಖೆಗಳ ಸಿಬ್ಬಂದಿ ನಡುವಿನ ಗೊಂದಲದಿಂದಾಗಿ ಜನ ಕುಡಿಯುವ ನೀರಿಗಾಗಿ ಅಲೆದಾಡಬೇಕಾಗಿದೆ’ ಎನ್ನುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು