ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸಂಪತ್ತು ಮಾರುವವರಿಗೆ ವಿಶ್ವಗುರು ಅಂತಾರೇನು?: ಬಸವರಾಜ ಬುಳ್ಳಾ

Published 10 ಫೆಬ್ರುವರಿ 2024, 15:51 IST
Last Updated 10 ಫೆಬ್ರುವರಿ 2024, 15:51 IST
ಅಕ್ಷರ ಗಾತ್ರ

ಬೀದರ್‌: ‘ದೇಶದ ಸಂಪತ್ತು ಮಾರಾಟ ಮಾಡುವವರಿಗೆ ವಿಶ್ವಗುರು ಅಂತಾರೇನು?’ ಹೀಗೆಂದು ಪ್ರಶ್ನಿಸಿ ಪ್ರಧಾನಿ ಮೋದಿಯವರನ್ನು ಕಾಂಗ್ರೆಸ್‌ ಹಿರಿಯ ಮುಖಂಡ ಬಸವರಾಜ ಬುಳ್ಳಾ ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಕಾಲದಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಬಿಎಚ್‌ಇಎಲ್‌, ರೈಲ್ವೆ, ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ವಾಮ್ಯದ ಅನೇಕ ಸಂಸ್ಥೆಗಳು ಹುಟ್ಟಿಕೊಂಡಿದ್ದವು. ಅಸಂಖ್ಯ ಜನರಿಗೆ ಉದ್ಯೋಗಾವಕಾಶಗಳು ಸಿಕ್ಕಿದ್ದವು. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಅವರು ಎಲ್ಲಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಯಾವುದೂ ಸರ್ಕಾರದ ಅಧೀನದಲ್ಲಿ ಇಲ್ಲ. ಇವರಿಗೆ ವಿಶ್ವಗುರು ಎಂದು ಕರೆಯಬೇಕಾ? ಎಂದು ಪ್ರಶ್ನಿಸಿದರು.

2014ರವರೆಗೆ ದೇಶದ ಮೇಲೆ ₹54 ಲಕ್ಷ ಕೋಟಿ ಸಾಲ ಇತ್ತು. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಹತ್ತು ವರ್ಷಗಳಲ್ಲಿ ಈ ಸಾಲ ₹177 ಲಕ್ಷ ಕೋಟಿಗೆ ಹೆಚ್ಚಾಗಿದೆ. ಮೂರು ಪಟ್ಟು ಸಾಲ ಹೆಚ್ಚಾಗಿದೆ. ಮನಮೋಹನ್‌ ಸಿಂಗ್‌ ಅವರು ಹಿಂದೆ ಪ್ರಧಾನಿ ಇದ್ದಾಗ ರೈತರ ₹44 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಮೋದಿಯವರು ರೈತರ ಸಾಲ ಮನ್ನಾ ಮಾಡಿಲ್ಲ. ಬದಲಾಗಿ ಉದ್ಯಮಿಗಳ ₹14.56 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಮತ್ತೆ ತಮ್ಮನ್ನು ವಿಶ್ವಗುರು ಅಂತ ಹೇಳುತ್ತಾರೆ ಎಂದು ತಿವಿದರು.

ಅಧಿಕಾರಕ್ಕೆ ಬಂದರೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ. ಪ್ರತಿ ವರ್ಷ ಎರಡು ಕೋಟಿ ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ, ಆ ಕೆಲಸ ಮಾಡಿಲ್ಲ. ವಿಷಯಾಂತರ ಮಾಡಲು ಮಂದಿರದ ವಿಷಯ ಮುಂದೆ ತಂದಿದ್ದಾರೆ. ಅವರು ತಮ್ಮನ್ನು ತಾವು ವಿಶ್ವಗುರು ಎಂದು ಹೇಳಿಕೊಂಡರೆ ಹೇಗೆ? ಭಾರತದ ಕರೆನ್ಸಿಗೆ ವಿದೇಶಗಳಲ್ಲಿ ಬೆಲೆ ಬರಬೇಕು. ಬಂದಿದೆಯಾ? ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ಮಾಧ್ಯಮ ರಂಗವೂ ಮಹತ್ವವಾದುದು. ಆದರೆ, ಮಾಧ್ಯಮ ರಂಗದ ಕಾಲು ತೆಗೆದಿದ್ದಾರೆ. ಭಯದಲ್ಲಿ ಸರ್ಕಾರ ನಡೆಸುತ್ತಿದ್ದಾರೆ. ಹಿಂದಿನ ಪ್ರಧಾನಿಗಳು ಕಾಲಕಾಲಕ್ಕೆ ಪತ್ರಿಕಾಗೋಷ್ಠಿ ಕರೆದು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸುತ್ತಿದ್ದರು. ಆದರೆ, ಹತ್ತು ವರ್ಷಗಳಲ್ಲಿ ಮೋದಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ. ಪ್ರಜಾಪ್ರಭುತ್ವದಲ್ಲಿ ವಿಮರ್ಶೆ, ವಿಮರ್ಶಕರು ಇರಬೇಕು. ಆದರೆ, ಅವರು ಕೇಳುತ್ತಿಲ್ಲ. ಕೇವಲ ‘ಮನ್‌ ಕೀ ಬಾತ್‌’ ಹೇಳುತ್ತಿದ್ದಾರೆ. ಬೇರೆಯವರ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂದರು.

ಮಂದಿರ, ಮಸೀದಿ ಇದೆಲ್ಲ ವೈಯಕ್ತಿಕ ವಿಚಾರಗಳು. ಅಭಿವೃದ್ಧಿ ವಿಚಾರಗಳನ್ನು ಮರೆಮಾಚಲು ಭಾವನಾತ್ಮಕ ವಿಚಾರಗಳನ್ನು ಮುಂದೆ ತರುವುದು ಸರಿಯಲ್ಲ. ಹಿಂದೆ ರಾಜ, ಮಹಾರಾಜರು ಕೂಡ ಹೀಗೆಯೇ ಮಾಡುತ್ತಿದ್ದರು. ಆ ದಾರಿಯಲ್ಲೇ ಮೋದಿ ನಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

‘ನಾನೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ’
‘ನಾನೂ ಕೂಡ ಬೀದರ್‌ ಲೋಕಸಭೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಬರುವ ಚುನಾವಣೆಯಲ್ಲಿ ನನಗೆ ಅವಕಾಶ ಕೊಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ನಾನು ಎರಡು ಸಲ ಪಕ್ಷದ ಜಿಲ್ಲಾಧ್ಯಕ್ಷನಾಗಿ ರಾಜ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ’ ಎಂದು ಬಸವರಾಜ ಬುಳ್ಳಾ ಹೇಳಿದರು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಒಂದುವೇಳೆ ನನಗೆ ಟಿಕೆಟ್‌ ಸಿಕ್ಕಿ ಚುನಾವಣೆಯಲ್ಲಿ ಗೆದ್ದರೆ ಹತ್ತು ‘ಗ್ಯಾರಂಟಿ’ ಜಾರಿಗೆ ತರುವೆ. ಬೀದರ್‌–ಬಳ್ಳಾರಿ ಚತುಷ್ಪಥ ಕೈಗಾರಿಕೆ ಕಾರಿಡಾರ್‌ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಬೆಂಗಳೂರು–ನವದೆಹಲಿ ವಾಯಾ ಬೀದರ್‌ ರೈಲು ಸಂಚಾರ ಬಸವಕಲ್ಯಾಣದಲ್ಲಿ ಏರ್‌ಪೋರ್ಟ್‌ ರೈಲು ಸೇವೆ ವಿಸ್ತರಣೆ ದೊಡ್ಡ ಕೈಗಾರಿಕೆಗಳ ಸ್ಥಾಪನೆ ಐಟಿ. ಬಿ.ಟಿ ಟೆಕ್ಸ್‌ಟೈಲ್ಸ್‌ ಪಾರ್ಕ್‌ ಬಿಎಸ್‌ಎಸ್‌ಕೆ ಪುನಾರರಂಭಿಸಲು ಕ್ರಮ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಬೀದರ್–ಜಹೀರಾಬಾದ್‌ ಚತುಷ್ಪಥಕ್ಕೆ ಶ್ರಮಿಸುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT