ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಕ್ಯಾನಿಂಗ್‌ ಸೆಂಟರ್‌ನೊಳಗೆ ಗರ್ಭೀಣಿಗಷ್ಟೇ ಪ್ರವೇಶ: ಜಿಲ್ಲಾಧಿಕಾರಿ ರೆಡ್ಡಿ

Published 15 ಜೂನ್ 2024, 15:19 IST
Last Updated 15 ಜೂನ್ 2024, 15:19 IST
ಅಕ್ಷರ ಗಾತ್ರ

ಬೀದರ್‌: ‘ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಗರ್ಭೀಣಿ ಹೊರತುಪಡಿಸಿ ಬೇರೆಯವರಿಗೆ ಪ್ರವೇಶ ಕಲ್ಪಿಸಬಾರದು. ಈ ಬಗ್ಗೆ ಎಲ್ಲ ಕೇಂದ್ರಗಳಲ್ಲಿ ನಾಮಫಲಕ ಹಾಕಬೇಕು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚಿಸಿದರು.

ಒಂದುವೇಳೆ ನಿಯಮ ಉಲ್ಲಂಘಿಸಿದರೆ ಪಿ.ಸಿ. ಮತ್ತು ಪಿ.ಎನ್.ಡಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹಾ ಸಮಿತಿ ಮತ್ತು ತಪಾಸಣಾ, ಮೇಲ್ವಿಚಾರಣಾ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳಿಗೆ ಮೇಲಿನಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳು ಕೆಪಿಎಂಇ ಕಾಯ್ದೆ ಅಡಿ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯಂತೆ ಜುಲೈ 25ರ ಒಳಗೆ ನಾಮಫಲಕವನ್ನು ಅಳವಡಿಸಿಕೊಂಡು ಅದರ ವರದಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಕೆಪಿಎಂಇ ವಿಭಾಗಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ನಕಲಿ ವೈದ್ಯರ ಮೇಲೆ ನಿಗಾ ವಹಿಸಬೇಕು. ಅಷ್ಟೂರಿನ ಸುರೇಖಾ ಸ್ಟಾಫರ್ಸ್‌, ಬಕಚೌಡಿಯ ಸಂತೋಷ ಸ್ಟಾಫರ್ಸ್‌ ಕ್ಲಿನಿಕ್‌ಗಳನ್ನು ಸೀಜ್‌ ಮಾಡಿ ಈಗಾಗಲೇ ₹25 ಸಾವಿರ ದಂಡ ವಿಧಿಸಲಾಗಿದೆ. ಮನ್ನಳ್ಳಿಯ ಕಾಂತಾರೆಡ್ಡಿ ಯೋಗ ಮತ್ತು ನ್ಯಾಚುರೋಪಥಿ ಅವರ ನೋಂದಣಿಯನ್ನು ಕೆಪಿಎಂಇ ಕಾಯ್ದೆ ಪ್ರಕಾರ ರದ್ದುಗೊಳಿಸಬೇಕು. ಒಂದುವೇಳೆ ಜಾಗ ಬದಲಾಯಿಸಿ, ಹೆಸರು ಬದಲಾಯಿಸಿ ಅಲೋಪತಿ ಪದ್ದತಿಯಲ್ಲಿ ವೈದ್ಯ ವೃತ್ತಿ ನಡೆಸುವುದು ಕಂಡುಬಂದಲ್ಲಿ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ ಅವರಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ದಿಲೀಪ್ ಡೋಂಗ್ರೆ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಶಿವಶಂಕರ ಬಿ., ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ, ವಿಷಯ ನಿರ್ವಾಹಕ ಮಹೇಶ ರೆಡ್ಡಿ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT