ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ತತ್ವ ಬೇರು ಸಂರಕ್ಷಿಸಿ: ಸಿದ್ದು ಯಾಪಲಪರವಿ ಸಲಹೆ

ಶ್ರಾವಣ ಪ್ರವಚನ ಸಮಾರೋಪ: ಸಿದ್ದು ಯಾಪಲಪರವಿ ಸಲಹೆ
Last Updated 12 ಸೆಪ್ಟೆಂಬರ್ 2021, 15:23 IST
ಅಕ್ಷರ ಗಾತ್ರ

ಬೀದರ್: ಬಸವತತ್ವದ ಬೇರುಗಳು ಈ ನೆಲದಲ್ಲಿ ಗಟ್ಟಿಯಾಗಿ ನೆಲೆಗೊಂಡಿವೆ. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಗದುಗಿನ ಸಾಹಿತಿ ಪ್ರೊ. ಸಿದ್ದು ಯಾಪಲಪರವಿ ನುಡಿದರು.

ನಗರದ ಬಸವಕೇಂದ್ರದಲ್ಲಿ ನಡೆದ ಶ್ರಾವಣ ಪ್ರವಚನ ಸಮಾರೋಪ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಸಮಾನತೆ ನೀಡಿ ಗೌರವದಿಂದ ಕಂಡದ್ದು ಲಿಂಗಾಯತ ಧರ್ಮ ಮಾತ್ರ. ಇಂಗ್ಲೆಂಡ್ ಮುಂದುವರಿದ ರಾಷ್ಟ್ರ. ಆದರೆ ಬಸವಣ್ಣನವರ ಮೂರ್ತಿ ಸ್ಥಾಪನೆಗೆ ಅಲ್ಲಿನ ಪಾರ್ಲಿಮೆಂಟ್‍ನಲ್ಲಿ 3 ವರ್ಷ ಚರ್ಚೆ ನಡೆಯಿತು ಎಂದು ತಿಳಿಸಿದರು.

ಮೊದಲ ಸಂಸತ್ ಸ್ಥಾಪನೆ, ಮಹಿಳಾ ಸಮಾನತೆ, ಜಾತ್ಯತೀತ ನಿಲುವಿನ ಕಾರಣ ಸಾಧ್ಯವಾಯಿತು. ಇದಕ್ಕೆ ಈ ನೆಲ ಕಾರಣ. ಬಸವ ತತ್ವದ ಬಗ್ಗೆ ಅನೇಕ ಜನರಲ್ಲಿ ವಿರೋಧಾಭಾಸಗಳಿವೆ. ಬಸವಣ್ಣನವರ ಬಗ್ಗೆ ಕನಿಷ್ಠ ಗೌರವ ಇದ್ದವರಾದರೂ ಗೊಂದಲಗಳಿಂದ ಹೊರಬರಬೇಕು ಎಂದು ಹೇಳಿದರು.

ಮಾರುಕಟ್ಟೆಗೆ ಬಸವಣ್ಣನವರ ಹೆಸರು ಬೇಕು. ಆದರೆ ಆಚರಣೆ ಬೇಡವಾಗಿದೆ. ಇದು ನಮ್ಮ ಸಮಕಾಲೀನ ದುರಂತವಾದ ಕಾರಣ ಯುವ ಜನಾಂಗಕ್ಕೆ ನಿಜವಾದ ಬಸವ ತತ್ವ ಪರಿಚಯಿಸಬೇಕಾದ ಅಗತ್ಯವಿದೆ ಎಂದರು.

ಜೀವನ ದರ್ಶನ ಕುರಿತು ಒಂದು ತಿಂಗಳು ಪ್ರವಚನ ನೀಡಿದ ಕೊಪ್ಪಳದ ಸಿದ್ದಲಿಂಗ ದೇವರು ಸಾನಿಧ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ ಮಾತನಾಡಿದರು. ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು. ಬಸವಕೇಂದ್ರ ಟ್ರಸ್ಟ್ ಅಧ್ಯಕ್ಷ ಪ್ರಭುರಾವ್ ವಸ್ಮತೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ವಿಜಯಕುಮಾರ ಆನಂದೆ, ಎನ್‍ಜಿಒ ಗೃಹ ನಿರ್ಮಾಣ ನೌಕರರ ಸಂಘದ ಅಧ್ಯಕ್ಷ ಬಾಲಾಜಿ ಬಿರಾದಾರ, ದತ್ತಗಿರಿ ಶಾಲೆ ಪ್ರಾಚಾರ್ಯೆ ಜಯದೇವಿ ಯದಲಾಪುರೆ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪೀರಪ್ಪ ಔರಾದೆ ಉಪಸ್ಥಿತರಿದ್ದರು.

ಜಿಲ್ಲೆಯ ಅನೇಕ ಉತ್ತಮ ಶಿಕ್ಷಕರಿಗೆ ಜ್ಞಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಶಂಕರ ಟೋಕರೆ ಸ್ವಾಗತಿಸಿದರು. ಯುವ ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ನಿರೂಪಿಸಿದರು. ರೇವಣಪ್ಪ ಮೂಲಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT