ಮಂಗಳವಾರ, ಜನವರಿ 18, 2022
15 °C
ಕಡಲೆ, ಜೋಳಕ್ಕೆ ಕಾಡು ಪ್ರಾಣಿ, ಹಕ್ಕಿಗಳ ಕಾಟ: ರೈತರ ಪರದಾಟ

ಬೆಳೆ ರಕ್ಷಣೆಗೆ ‘ಸೀರೆ ಬೇಲಿ’

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಹೋಬಳಿಯ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾದ ಜೋಳ ಹಾಗೂ ಕಡಲೆ ಬೆಳೆಗೆ ಹಕ್ಕಿ ಹಾಗೂ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ.

ಇವುಗಳಿಂದ ತಪ್ಪಿಸಿಕೊಳ್ಳಲು ರೈತರು ಹೊಲಗಳಲ್ಲಿ ಬೆದರು ಬೊಂಬೆ ನಿಲ್ಲಿಸಿದ್ದಾರೆ. ಇನ್ನೂ ಕೆಲ ಕಡೆ ಹಳೆ ಸೀರೆಗಳಿಂದ ಹೊಲದ ಸುತ್ತಲೂ ಬೇಲಿ ಹಾಕಿಕೊಂಡಿದ್ದಾರೆ.

ಹೋಬಳಿಯ ದಾಡಗಿ, ಚಳಕಾಪುರ, ಮಾಸಿಮಾಡ, ತರನಳ್ಳಿ , ಮದಕಟ್ಟಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಬೆಳೆಯಲಾದ ಕಡಲೆ ಹಾಗೂ ಜೋಳಕ್ಕೆ ರೋಗ ಕಾಣಿಸಿಕೊಂಡರೆ ಇನ್ನೊಂದೆಡೆ ಹಕ್ಕಿಗಳ ಕಾಟವೂ ಹೆಚ್ಚಾಗಿದೆ. ಈ ಹಕ್ಕಿಗಳನ್ನು ನಿಯಂತ್ರಿಸಲು ರೈತರು ಹಲವಾರು ಬಗೆಯ ತಂತ್ರಗಳನ್ನು ಬಳಸುತ್ತಿದ್ದಾರೆ.

‘ಎರಡು ಎಕರೆಯಲ್ಲಿ ಕಡಲೆ ಬೆಳೆ ಹಾಕಿದ್ದೇನೆ. ಕಡಲೆ ಬೆಳೆ ಹುಲುಸಾಗಿ ಬೆಳೆದಿದೆ. ಆದರೆ ಬೆಳ್ಳಂಬೆಳಿಗ್ಗೆ ಹಾಗೂ ಸಂಜೆ ಹಕ್ಕಿಗಳ ಕಾಟ ಶುರುವಾಗಿದೆ. ಅವುಗಳನ್ನು ನಿಯಂತ್ರಿಸಲು ಹೊಲದ ಮಧ್ಯದಲ್ಲಿಯೇ ಬೆದರು ಬೊಂಬೆ ಸಿದ್ಧಪಡಿಸಿ ಕೈಯಲ್ಲಿ ಕೋಲು ಹಿಡಿದುಕೊಂಡ ರೀತಿಯಲ್ಲಿ ನಿಲ್ಲಿಸಲಾಗಿದೆ. ಇದರಿಂದ ಹಕ್ಕಿಗಳ ಹಾವಳಿ ಕಡಿಮೆಯಾಗಿದೆ’ ಎಂದು ಚಳಕಾಪುರ ವಾಡಿ ಗ್ರಾಮದ ರೈತ ಅನಿಲ ಜಾಧವ ತಿಳಿಸುತ್ತಾರೆ.

ಹೋಬಳಿಯ ತರನಳ್ಳಿ ಗ್ರಾಮದ ರೈತ ಧನರಾಜ ಮುತ್ತಂಗೆ ಅವರ ಹೊಲದಲ್ಲಿ ಬೆಳೆಯಲಾದ ಜೋಳ, ಸೇರಿದಂತೆ ಇನ್ನಿತರ ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟ ವಿಪರೀತವಾಗಿದೆ. ರಾತ್ರಿ ಸಮಯದಲ್ಲಿ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿವೆ. ಹೀಗಾಗಿ ಜನರು ಸಹ ರಾತ್ರಿ ಸಮಯದಲ್ಲಿ ಹೊಲಗಳಿಗೆ ಹೋಗಲು ಹೆದರುತ್ತಾರೆ. ಆದ್ದರಿಂದ ಹೊಲದ ಸುತ್ತಲೂ ಹಳೆ ಸೀರೆಗಳ ಬೇಲಿ ಕಟ್ಟಲಾಗಿದೆ. ಇದರಿಂದ ಕಾಡು ಪ್ರಾಣಿಗಳು ಒಳಬರುವುದು ಕಡಿಮೆಯಾಗಿದೆ.

‘ಕೃಷಿಯಲ್ಲಿ ತೊಡಗಿಕೊಂಡ ಪದವೀಧರರು ಹೊಸ ಹೊಸ ವೈಜ್ಞಾನಿಕ ತಂತ್ರಜ್ಞಾನಗಳ ಬಳಕೆ ಮಾಡುತ್ತಿದ್ದಾರೆ. ಮನೆಯಲ್ಲಿಯೇ ಕುಳಿತು ಹಕ್ಕಿಗಳನ್ನು ಓಡಿಸುವ ಯಂತ್ರ ಅಳವಡಿಸುತ್ತಿದ್ದಾರೆ. ಈ ಯಂತ್ರದಿಂದ ಮನುಷ್ಯ ಕೂಗಿದಂತೆ, ತಮಟೆ ಬಾರಿಸುವ ಶಬ್ದ, ಪಟಾಕಿ ಸಿಡಿತದ ಶಬ್ದ ಹೊರಹೊಮ್ಮುತ್ತದೆ. ಇದರಿಂದ ಹಕ್ಕಿಗಳ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದು ಯುವ ರೈತ ಶಿವಕುಮಾರ ರೆಡ್ಡಿ ತಿಳಿಸುತ್ತಾರೆ.

ಸಮೀಪದ ಚಳಕಾಪುರ ವಾಡಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ‘ಟೊಮೆಟೊ ಬೆಳೆ ಸಂಪೂರ್ಣ ಹಾಳು ಮಾಡಿವೆ. ಇವುಗಳನ್ನು ಓಡಿಸಲು ಹರಸಾಹಸ ಪಡಬೇಕಾಗಿದೆ. ಸಿಡಿಮದ್ದು ಸಿಡಿಸಲಾಗುತ್ತಿದೆ. ಆದರೂ ಪ್ರಯೋಜನವಾಗುತ್ತಿಲ್ಲ’ ಎಂದು ರೈತ ಜಾಧವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತರು ಬೆಳೆಯನ್ನು ರಕ್ಷಿಸಿಕೊಳ್ಳಲು ಸೀರೆಗಳನ್ನು ಕಟ್ಟುತ್ತಾರೆ. ಸೀರೆಗಳನ್ನು ನೋಡಿ ಕಾಡು ಹಂದಿಗಳು ಬಲೆ ಬೀಸುತ್ತಿದ್ದಾರೆ ಎಂದು ತಿಳಿದು ಹೊಲಗಳಿಗೆ ನುಗ್ಗದೆ ಹಿಂದಿರುಗಿ ಹೋಗುತ್ತವೆ. ಇದರಿಂದ ಬೆಳೆ ಉಳಿಯುತ್ತವೆ ಎಂದು ರೈತ ಮಂಜುನಾಥ ರೆಡ್ಡಿ ಅವರು
ತಿಳಿಸುತ್ತಾರೆ.

ಕಾಡು ಪ್ರಾಣಿಗಳು ಯಾವಾಗ ಬೇಕಾದರೂ ದಾಳಿ ಮಾಡಿ ರೈತನ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ನಷ್ಟಕ್ಕೆ ಯಾವುದೇ ರೀತಿಯ ಪರಿಹಾರ ಸಿಗುತ್ತಿಲ್ಲ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂಬುವುದು ರೈತರ ಆಗ್ರಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.