ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಕೇಂದ್ರ ಸಚಿವ ಖೂಬಾ ವಿರುದ್ಧ ಪ್ರತಿಭಟನೆ

ರೈತ ಸಂಘದಿಂದ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಪತ್ರ
Last Updated 17 ಜೂನ್ 2022, 12:50 IST
ಅಕ್ಷರ ಗಾತ್ರ

ಬೀದರ್: ಕೇಂದ್ರ ಸಚಿವ ಭಗವಂತ ಖೂಬಾ ಅವರು ರೈತರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರಧಾನಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಖೂಬಾ ಅವರು ಸಂಸದರಾದಾಗಿನಿಂದಲೂ ರೈತರ ಜತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ರೈತರನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಔರಾದ್ ತಾಲ್ಲೂಕಿನ ಹೆಡಗಾಪುರ ಗ್ರಾಮದ ರೈತರೊಬ್ಬರು ಈಚೆಗೆ ಸಚಿವರಿಗೆ ದೂರವಾಣಿ ಕರೆ ಮಾಡಿ ರಸಗೊಬ್ಬರ ಕೇಳಿದ್ದರು. ರಸಗೊಬ್ಬರ ವ್ಯವಸ್ಥೆ ಮಾಡಿದ್ದಲ್ಲಿ ಕೃಷಿಕರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದರು. ಆದರೆ, ಕೇಂದ್ರದ ರಸಗೊಬ್ಬರ ಖಾತೆಯ ರಾಜ್ಯ ಸಚಿವರೂ ಆಗಿರುವ ಖೂಬಾ ಅವರು, ದರ್ಪದ ಉತ್ತರ ನೀಡಿದ್ದಾರೆ. ನಾನು ಕೇಂದ್ರ ಸಚಿವ. ರಾಜ್ಯಕ್ಕೆ ಗೊಬ್ಬರ ಕಳಿಸುವುದಷ್ಟೇ ನನ್ನ ಕೆಲಸ. ನಿಮ್ಮ ತಾಲ್ಲೂಕಿನ ಶಾಸಕನಿಗೆ ಕೇಳು. ನನ್ನ ಕೆಳಗೆ ಸಾವಿರಾರು ಅಧಿಕಾರಿಗಳಿದ್ದಾರೆ, ಅವರಿಗೆ ಕೇಳು ಎಂಬ ಉಡಾಫೆಯ ಉತ್ತರ ನೀಡಿದ್ದಾರೆ ಎಂದು ಆಪಾದಿಸಿದರು.

ಖೂಬಾ ಅವರು ರೈತರೊಂದಿಗೆ ದರ್ಪ, ಉಡಾಫೆಯಿಂದ ಮಾತನಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ಸಂಭಾಷಣೆ ರೆಕಾರ್ಡ್ ಸಾಕ್ಷಿಯಾಗಿದೆ ಎಂದು ದೂರಿದರು.

ಖೂಬಾ ಅವರಿಗೆ ಕೃಷಿ ತಿಳಿದಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲ. ರೈತರೊಂದಿಗೆ ಅಸಭ್ಯವಾಗಿ ವರ್ತಿಸುವ ಅವರನ್ನು ಸಂಪುಟದಿಂದ ಕೈಬಿಡಬೇಕು. ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಪ್ರಮುಖರಾದ ಶೇಷರಾವ್ ಕಣಜಿ, ಚಂದ್ರಶೇಖರ ಜಮಖಂಡಿ, ಶಂಕರೆಪ್ಪ ಪಾರಾ, ಸುಭಾಷ್ ರಗಟೆ, ಬಾಬುರಾವ್ ಜೋಳದಾಬಕಾ, ನಾಗಯ್ಯ ಸ್ವಾಮಿ, ಪ್ರಕಾಶ ಬಾವಗೆ, ಮಲ್ಲಿಕಾರ್ಜುನ ಬಿರಾದಾರ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT