ಮಂಗಳವಾರ, ಸೆಪ್ಟೆಂಬರ್ 21, 2021
21 °C
ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಬಣ್ಣನೆ

ಪವಿತ್ರ ಪ್ರೀತಿಯ ಸಂಕೇತವೇ ರಕ್ಷಾ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ನೂಲ ಹುಣ್ಣಿಮೆಯು ಪವಿತ್ರ ಪ್ರೀತಿಯ ಸಂಕೇತವಾಗಿದೆ. ಅಕ್ಕ-ತಂಗಿಯರು ಪ್ರೀತಿಯ ಹೊನಲು ಹರಿಸಿ, ಅತ್ಯಂತ ಕಾಳಜಿಪೂರ್ವಕವಾಗಿ ತಮ್ಮ ಸಹೋದರರಿಗೆ ಶುಭ ಕೋರಿ ಉತ್ತಮ ವ್ಯಕ್ತಿಗಳಾಗುವಂತೆ ಪ್ರೇರಣೆ ನೀಡುತ್ತಾರೆ’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಬಣ್ಣಿಸಿದರು.

ನೂಲ ಹುಣ್ಣಿಮೆಯ ನಿಮಿತ್ತ ಬಸವಗಿರಿಯಲ್ಲಿ ನಡೆದ ’250ನೇ ಶರಣ ಸಂಗಮ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಆರಂಭ. ಭಾರತೀಯ ಪರಂಪರೆಯಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ಬಹಳ ಮಹತ್ವವಿದೆ. ಸಹೋದರಿಯರು ತಮ್ಮ ಸಹೋದರರಿಗೆ ರಕ್ಷೆ ಕೋರಿ ರಕ್ಷಾ ಬಂಧನ ಕಟ್ಟುವ ಭಾವನಾತ್ಮಕ ಮತ್ತು ಪವಿತ್ರ ಹಬ್ಬವಿದು. ಇತಿಹಾಸ ಪುರಾಣಗಳಲ್ಲಿ ರಕ್ಷಾ ಬಂಧನವು ಮೃತ್ಯುವನ್ನೇ ದೂರ ಮಾಡುವ ಶಕ್ತಿಶಾಲಿ ದಾರವೆಂದು ಬಣ್ಣಿಸಲಾಗಿದೆ’ ಎಂದರು.

‘ಶರಣ ಧರ್ಮದಲ್ಲಿ ಅಣ್ಣ-ತಮ್ಮಂದಿರಿಗೆ ಸದ್ಗುಣಿಯಾಗು ಎಂದು ಹಾರೈಸುವ ಅರ್ಥಪೂರ್ಣ ಆಚರಣೆ ಇದೆ. ಮನದಲ್ಲಿಯ ದುರ್ಭಾವನೆಗಳನ್ನು ಕಳೆದು ಸದ್ಭಾವನೆಗಳನ್ನು ಬಿತ್ತುವ ಆಚರಣೆ ಇದಾಗಿದೆ’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.

‘ಸಹೋದರಿಯರಿಗೆ ರಕ್ಷಣೆ ನೀಡಬೇಕಾದವರು ಸಂಯಮ ಶೀಲರು, ಶಕ್ತಿವಂತರು ಆಗಬೇಕಲ್ಲವೆ? ನೂಲ ಹುಣ್ಣಿಮೆ ಹೆಣ್ಣು ಮಕ್ಕಳಿಗೆ ತವರು ಮನೆ ನೆನಪಿಸುವ ಸಂದರ್ಭವೇ ನೂಲ ಹುಣ್ಣಿಮೆ. ಪ್ರೀತಿಗೆ ಕಲ್ಲು ಸಹ ಕರಗುವುದೆಂಬಂತೆ ಚಂಬಲ ಕಣಿವೆಯ ಕುಪ್ರಸಿದ್ಧ ಡಕಾಯತ ಮಾಧವಸಿಂಗ್ ಪುಟ್ಟ ಬಾಲಕಿ ಚಮೇಲಿಯ ರಾಕಿಯಿಂದ ಪರಿವರ್ತಿತನಾಗಿ ಉತ್ತಮ ನಾಗರಿಕನಾದ’ ಎಂದು ಉದಾಹರಿಸಿದರು.

‘ಸ್ತ್ರೀಯನ್ನು ದೇವತೆ ಎಂದು ಗೌರವಿಸಿದ ಭಾರತದಂಥ ದೇಶದಲ್ಲಿಯೂ ಸಹ ದಿನೇ ದಿನೇ ಮಹಿಳೆಯರ ಮೇಲೆ ಅನ್ಯಾಯ-ಅತ್ಯಾಚಾರ-ದೌರ್ಜನ್ಯಗಳು ಹೆಚ್ಚುತ್ತಿರುವುದು ದುರದೃಷ್ಟಕರ’ ಎಂದು ವಿಷಾದಿಸಿದರು.

‘ಬಸವವಣ್ಣ ಸ್ತ್ರೀಯರಿಗೆ ಧಾರ್ಮಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ನೀಡಿ ಸಮಾಜದಲ್ಲಿ ಗೌರವದ ಸ್ಥಾನ ನೀಡಿದ ಮೊದಲಿಗರು. ಬಸವಣ್ಣನವರ ಕಲ್ಯಾಣ ಕ್ರಾಂತಿಯ ಫಲವಾಗಿ ಜಗತ್ತಿನಲ್ಲಿ ಮೊದಲ ಬಾರಿಗೆ ಮಹಿಳೆ ಕೀಳರಿಮೆಯನ್ನು ಕೊಡವಿಕೊಂಡು ಶೋಷಣಾ ಮುಕ್ತಳಾಗಿ ಎದ್ದು ನಿಂತಳು. ಪುರುಷರಿಗೆ ಸಮಾನವಾದ ಸಾಧನೆಗೈದಳು. ಅಂದು ಅನುಭವ ಮಂಟಪದಲ್ಲಿ 36ಕ್ಕೂ ಅಧಿಕ ಶರಣೆಯರು ವಚನಗಳನ್ನು ರಚಿಸಿದ್ದು, ಶಿವಯೋಗ ಸಾಧನೆಯ ಉನ್ನತಕ್ಕೆ ಏರಿದ್ದು ಒಂದು ಅಪೂರ್ವವಾದ ಇತಿಹಾಸವಾಗಿದೆ’ ಎಂದು ಹೇಳಿದರು.

ಪ್ರಭುದೇವರು ಮಾತನಾಡಿ, ‘ನೂಲಿಯ ಚಂದಯ್ಯ ಸತ್ಯ, ಶುದ್ಧ, ಕಾಯಕಕ್ಕೆ ಸಂಕೇತವಾಗಿದ್ದಾರೆ’ ಎಂಧು ತಿಳಿಸಿದರು.

ಜ್ಯೋತಿ ಪಾಟೀಲ, ಜಯಶ್ರೀ ಮಠಪತಿ ಮತ್ತು ಮಹಾದೇವಿ ಮಠಪತಿ ಅವರು ಜಂಟಿಯಾಗಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಚಂದ್ರಕಾಂತ ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಮೇಶ ಕೆ.ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. | ಅಜಗಣ್ಣ ಹಾಗೂ ಚನ್ನಬಸವಣ್ಣ ಪ್ರಾರ್ಥಿಸಿದರು. ಮಾಣಿಕಪ್ಪ ಗೋರನಾಳೆ ನಿರೂಪಿಸಿದರು. ಸಂಗಮೇಶ ಪಾಟೀಲ ಸ್ವಾಗತಿಸಿದರು. ಸಿದ್ದೇಶ ಪಾಟೀಲ ವಂದಿಸಿದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು