ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಕೃಷ್ಣ ವಿವೇಕಾನಂದ ಆಶ್ರಮದಿಂದ ಕ್ಷೀರಾಮೃತ

ಹಾಲು ಉತ್ಪಾದನೆ, ಸಂಸ್ಕರಣೆಗೆ ಡಿ.7ಕ್ಕೆ ಅಧಿಕೃತ ಚಾಲನೆ
Last Updated 5 ಡಿಸೆಂಬರ್ 2019, 12:21 IST
ಅಕ್ಷರ ಗಾತ್ರ

ಬೀದರ್: ಆಧ್ಯಾತ್ಮಿಕ ಸೇವೆ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳನ್ನೂ ಸಂಘಟಿಸುತ್ತಿರುವ ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮ ಇದೀಗ ದೇಸಿ ಗೋತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆ ನಿಟ್ಟಿನಲ್ಲಿ ವಿನೂತನ ಹೆಜ್ಜೆ ಇರಿಸಿದೆ.

ಕಳೆದ ಹಲವು ವರ್ಷಗಳಿಂದ ಸಮಾಜೋಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆಶ್ರಮವು ಗೋ ಶಾಲೆ ಆರಂಭಿಸುವ ಜತೆಗೆ ‘ಕ್ಷೀರಾಮೃತ’ ಹೆಸರಿನಲ್ಲಿ ದೇಸಿ (ವಿಶೇಷವಾಗಿ ಗೀರ್) ಗೋವಿನ ಹಾಲು ಉತ್ಪಾದನೆ, ಸಂರಕ್ಷಣೆ ಹಾಗೂ ವಿತರಣೆಗೆ ಯೋಜನೆ ರೂಪಿಸಿದೆ. ಕಳೆದ ಆಗಸ್ಟ್ 23ರಂದು ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಗೋಶಾಲೆ ಕಾರ್ಯಾರಂಭ ಮಾಡಿದೆ.
ಆಶ್ರಮವು ಬೀದರ್‌ ತಾಲ್ಲೂಕಿನ ಮರಕಲ್‌ ಹಾಗೂ ಕೊಳಾರದಲ್ಲೂ ಗೋಶಾಲೆ ಘಟಕಗಳನ್ನು ಆರಂಭಿಸಿ ದ್ದು, ಒಟ್ಟು 35 ಗೀರ್ ತಳಿಯ ಹಸುಗಳು ಇವೆ.

ಪ್ರಸ್ತುತ ಆಶ್ರಮದಲ್ಲಿ 15 ಗೀರ್ ಗೋವುಗಳು ಇವೆ. ನಿತ್ಯ 30 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಡಿಸೆಂಬರ್‌ 10ರ ವೇಳೆಗೆ 100 ಲೀಟರ್‌ ಹಾಲು ಉತ್ಪಾದನೆಯಾಗಲಿದೆ. ಪ್ರತಿ ಲೀಟರ್‌ಗೆ ₹ 80ರಂತೆ ಮಾರಾಟ ಮಾಡಲಾಗುತ್ತಿದೆ. ಬಾಟಲಿಗಳಲ್ಲಿ ಮನೆ ಮನೆಗೆ ತಲುಪಿಸುವ ಯೋಜನೆಯೂ ಇದೆ.

‘ಗೋವು ದೇಶದ ಭವ್ಯ ಪರಂಪರೆ, ಸಂಸ್ಕೃತಿಯ ಆಧಾರಸ್ತಂಭ. ಸದೃಢ ಸಮಾಜ ನಿರ್ಮಿಸುವ ಮಹಾಶಕ್ತಿಯ ಖಣಿಯಾಗಿದೆ. ಒಂದು ಗೋವು ಒಂದು ಕುಟುಂಬದ ಸದೃಢ ಆರೋಗ್ಯದ ಶಕ್ತಿಕೇಂದ್ರ. ಇಂಥ ವಿಶಿಷ್ಟವಾದ ದೇಸಿ ತಳಿಗಳ ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆ ನಮ್ಮೆಲ್ಲರ ಹೊಣೆಯಾಗಿದೆ. ಈ ಪ್ರಯುಕ್ತ ಆಶ್ರಮದ ವತಿಯಿಂದ ಗೋ ಶಾಲೆಗಳನ್ನು ಆರಂಭಿಸಲಾಗಿದೆ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.

‘ದೇಸಿ ಗೋವುಗಳಲ್ಲಿ ಇರುವಂಥ ಪರಿಶುದ್ಧತೆ, ಪೌಷ್ಟಿಕಾಂಶವು ವಿಶ್ವದ ಯಾವ ದೇಶದ ಗೋವಿನ ತಳಿಗಳಲ್ಲೂ ಇಲ್ಲ. ನಮ್ಮ ಗೀರ್ ತಳಿಯ ಹಾಲು, ತುಪ್ಪ, ಮೂತ್ರದಲ್ಲಿ ಚಿನ್ನದ ಅಂಶವಿರುವುದು ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟಿದೆ’ ಎಂದು ತಿಳಿಸಿದರು.
‘ನಮ್ಮಲ್ಲೇ ಇಂತಹ ಉತ್ಕೃಷ್ಟ ಹಾಗೂ ಅಧಿಕ ಹಾಲು ಕೊಡುವ ದೇಸಿ ತಳಿಗಳ ಸಂಪತ್ತು ಇರುವಾಗ ವಿದೇಶಿ ತಳಿಗಳ ಗೋವು ತಂದು ಸಾಕುವ ಅವಶ್ಯಕತೆ ನಮಗೇಕೆ?, ನಮ್ಮ ದೇಸಿ ತಳಿ ಗೋವುಗಳು ನಮ್ಮ ದೇಶವನ್ನು ಸದೃಢಗೊಳಿಸುವ ಶಕ್ತಿ ಹೊಂದಿವೆ. ಹೀಗಾಗಿ ದೇಸಿ ಗೋವುಗಳ ರಕ್ಷಣೆ ಮಾಡುವುದು ಸಹ ನಾವೆಲ್ಲರೂ ದೇಶಕ್ಕಾಗಿ ಮಾಡುವ ದೊಡ್ಡ ಸೇವೆ ಎನಿಸಲಿದೆ’ ಎಂದು ಹೇಳಿದರು.

ಆಶ್ರಮವು ಉತ್ಸಾಹಿ ಯುವಕರನ್ನು ಸಂಘಟಿಸಿ ಅವರಿಗೆ ಗೋವು ಸಂರಕ್ಷಣೆಯ ಹೊಣೆ ವಹಿಸಿದೆ. ಪೌಷ್ಟಿಕಾಂಶವುಳ್ಳ ಗುಣಮಟ್ಟದ ಹಾಲು ಮತ್ತು ಇತರೆ ಉತ್ಪನ್ನಗಳನ್ನು ಜನರಿಗೆ ಪೂರೈಸುವ ಮೂಲಕ ಸಮಾಜವನ್ನು ಕಲಬೆರಕೆ ಆಹಾರ ಪದ್ಧತಿಯಿಂದ ಮುಕ್ತಗೊಳಿಸುವುದೇ ಗೋ ಶಾಲೆ ಹಾಗೂ ಕ್ಷೀರಾಮೃತ ಘಟಕ ಸ್ಥಾಪನೆಯ ಮೂಲ ಉದ್ದೇಶವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT