ಗುರುವಾರ , ಡಿಸೆಂಬರ್ 3, 2020
23 °C
ಬಳಲಿದ ಹಿರೇಕಾಯಿ, ಹಬ್ಬಕ್ಕೆ ಕಣ್ಣೀರು ತರಿಸಿದ ಈರುಳ್ಳಿ

ಬೀದರ್: ತರಕಾರಿ ಬೆಲೆಯಲ್ಲಿ ದಿಢೀರ್ ಹೆಚ್ಚಳ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ದೀಪಾವಳಿ ಹಬ್ಬದ ಹೊಸ್ತಿಲಲ್ಲೇ ಈರುಳ್ಳಿ ಪ್ರತಿ ಬೆಲೆ ದಿಢೀರ್ ದುಪ್ಪಟ್ಟಾಗಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದೆ. ಕಳೆದ ವಾರ ಪ್ರತಿ ಕೆ.ಜಿಗೆ ₹ 50 ರಿಂದ 60 ಇದ್ದ ಈರುಳ್ಳಿ ಬೆಲೆ ₹ 100ಕ್ಕೆ ತಲುಪಿದೆ.

ಮೆಂತೆ ಸೊಪ್ಪು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 8 ಸಾವಿರದಿಂದ ₹11 ಸಾವಿರ ಹಾಗೂ ಬೆಳ್ಳುಳ್ಳಿ ₹ 21 ಸಾವಿರ ಹೆಚ್ಚಾಗಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ. ಆಲೂಗಡ್ಡೆ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹೆಚ್ಚಳವಾಗಿದೆ. ಇದನ್ನೆಲ್ಲ ನೋಡಿ ನುಗ್ಗೆಕಾಯಿ ಮಾರುಕಟ್ಟೆಯಲ್ಲಿ ಸೆಟೆದು ನಿಂತಿದೆ. ಬದನೆಕಾಯಿಗೆ ಬೆಲೆಯ ಕೊಂಬು ಮೂಡಿದೆ.

ಹಿರೇಕಾಯಿ, ಬೆಂಡೆಕಾಯಿ ಹಾಗೂ ಟೊಮೆಟೊ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1,500ರಿಂದ ₹4 ಸಾವಿರ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಯಾರ ಉಸಾಬರಿಯೂ ಬೇಡ ಎನ್ನುವ ಹಾಗೆ ಮೆಣಸಿನಕಾಯಿ, ಎಲೆಕೋಸು, ಗಜ್ಜರಿ ಬೆಲೆ ಸ್ಥಿರವಾಗಿದೆ.

ಬೀದರ್ ಮಾರುಕಟ್ಟೆಗೆ ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ, ಸೋಲಾಪುರದಿಂದ ಬೆಳ್ಳುಳ್ಳಿ, ಹೈದರಾಬಾದ್‌ನಿಂದ ಮೆಣಸಿನಕಾಯಿ, ಆಲೂಗಡ್ಡೆ, ಬೀನ್ಸ್, ಬೀಟ್‌ರೂಟ್‌, ತೊಂಡೆಕಾಯಿ, ಬೆಂಡೆಕಾಯಿ, ಬೆಳಗಾವಿಯಿಂದ ಗಜ್ಜರಿ, ನುಗ್ಗೆಕಾಯಿ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಿಂದ ಟೊಮೆಟೊ ಆವಕವಾಗಿದೆ.

ಭಾಲ್ಕಿ, ಚಿಟಗುಪ್ಪ, ಹುಮನಾಬಾದ್ ಹಾಗೂ ಬೀದರ್ ತಾಲ್ಲೂಕಿನ ಗ್ರಾಮೀಣ ಪ್ರದೇಶದಿಂದ ಹಿರೇಕಾಯಿ, ಬದನೆಕಾಯಿ, ಎಲೆಕೋಸು, ಹುಕೋಸು, ಸಬ್ಬಸಗಿ, ಮೆಂತೆಸೊಪ್ಪು, ಪಾಲಕ್, ಕರಿಬೇವು ಹಾಗೂ ಕೊತಂಬರಿ ಬಂದಿದೆ.

‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ತರಕಾರಿ ಬೆಳೆ ಹಾಳಾಗಿದೆ. ಹೀಗಾಗಿ ತೆಲಂಗಾಣದಿಂದಲೇ ಅತಿ ಹೆಚ್ಚು ತರಕಾರಿ ಜಿಲ್ಲೆಗೆ ಬಂದಿದೆ. ಸಾಗಣೆ ವೆಚ್ಚ ಹಾಗೂ ಹಬ್ಬದ ಕಾರಣ ಸಹಜವಾಗಿಯೇ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎನ್ನುತ್ತಾರೆ ದುರ್ಗಾ ತರಕಾರಿ ಅಂಗಡಿ ಮಾಲೀಕ ಚಂದ್ರಕಾಂತ ಹೊಕ್ರಾಣೆ.

‘ಕೋವಿಡ್ ದಿಂದಾಗಿ ಮಧ್ಯಮವರ್ಗದ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದರೂ ಹಬ್ಬ ಆಚರಿಸಬೇಕಿದೆ. ಹಣ್ಣು ಹಂಪಲುಗಳ ಬೆಲೆ ಕೇಳಿ ಅಗತ್ಯವಿರುವಷ್ಟೂ ಖರೀದಿಸಲಾಗದೆ ಬೇಸರದಿಂದ ಮನೆಗಳಿಗೆ ಮರಳಬೇಕಾಗಿದೆ’ ಎಂದು
ಗ್ರಾಹಕ ಶ್ರೀನಾಥ ಮಣಕುಜಿ ಹೇಳುತ್ತಾರೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ

ತರಕಾರಿ (ಪ್ರತಿ ಕೆ.ಜಿ.)–ಕಳೆದ ವಾರ – ಈ ವಾರ

ಈರುಳ್ಳಿ 50-60, 80-100
ಮೆಣಸಿನಕಾಯಿ 60-65, 60-65
ಆಲೂಗಡ್ಡೆ 40-50, 55-60
ಬೆಳ್ಳುಳ್ಳಿ 140-150,200-210
ಎಲೆಕೋಸು 50-60, 60-65
ಗಜ್ಜರಿ 60-65, 60-65
ಬೀನ್ಸ್‌ 120-140,100-110
ಬದನೆಕಾಯಿ 50-60, 60-80
ಮೆಂತೆ ಸೊಪ್ಪು 70-80, 100-110
ಹೂಕೋಸು 50-60, 50-60
ಸಬ್ಬಸಗಿ 40-50, 60-80
ಬೀಟ್‌ರೂಟ್‌ 50-60, 50-60
ತೊಂಡೆಕಾಯಿ 40-50, 50-60
ಕರಿಬೇವು 30-40, 30-40
ಕೊತಂಬರಿ 60-70, 60-70
ಟೊಮೆಟೊ 50-60, 40-45
ಪಾಲಕ್‌ 60-80, 60-90
ಬೆಂಡೆಕಾಯಿ 60-80, 50-55
ಹಿರೇಕಾಯಿ 70-80, 40-45
ನುಗ್ಗೆಕಾಯಿ 80-100,100-120

ಹಬ್ಬಕ್ಕೆ ಹೆಚ್ಚಿದ ಹಣ್ಣಿನ ಬೆಲೆ

ಬೀದರ್‌: ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಮನೆಗಳ ಮುಂದೆ ಬಣ್ಣದ ಆಕಾಶಬುಟ್ಟಿ ಹಾಗೂ ಅಲಂಕಾರಿಕ ದೀಪಗಳನ್ನು ತೂಗು ಹಾಕಿಕೊಂಡು ಎಲ್ಲರೂ ಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಬಹುತೇಕ ಜನ ಪೂಜೆಗಾಗಿ ಕೊನೆಯ ಕ್ಷಣದಲ್ಲಿ ಹೂವು ಹಾಗೂ ಹಣ್ಣು ಖರೀದಿಸುತ್ತಿದ್ದಾರೆ.

ನಗರದ ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಭಗತಸಿಂಗ್ ವೃತ್ತ, ಮೋಹನ್‌ ಮಾರ್ಕೆಟ್ ಹಾಗೂ ರೋಟರಿ ವೃತ್ತದ ಬಳಿ ಹಣತೆ, ಹೂವು, ಹಣ್ಣಿನ ಅಂಗಡಿಗಳು ತಲೆ ಎತ್ತಿವೆ, ಶುಕ್ರವಾರ ವ್ಯಾಪಾರ ಜೋರಾಗಿಯೇ ನಡೆಯಿತು. ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ಬೆಲೆ ಗಗನಕ್ಕೆ ಏರಿದೆ. ಕೋವಿಡ್‌ ಸಂದರ್ಭದಲ್ಲಿ ಅದ್ಧೂರಿ ಆಚರಣೆಯಿಲ್ಲವೆಂದರೂ ಹಣ್ಣಿನ ಬೆಲೆಗಳು ಮಾತ್ರ ಕಡಿಮೆಯಿಲ್ಲ.

ಸೇಬು ಕೆ.ಜಿಗೆ ₹ 120ರಿಂದ 150, ಬಾಳೆ ಹಣ್ಣು ₹40 ರಿಂದ 50, ಮೊಸಂಬಿ, ₹50–60, ಪೇರಲ ₹50 ರಿಂ 60ಗೆ ಮಾರಾಟವಾಗುತ್ತಿವೆ. ದೀಪಾವಳಿ ಕಾರಣ ಹಣ್ಣಿನ ಬೆಲೆಯಲ್ಲಿ ಕೆ.ಜಿಗೆ ₹ 20 ಹೆಚ್ಚಾಗಿದೆ. ಸೀತಾಫಲ ಒಂದು ಚಿಕ್ಕ ಬುಟ್ಟಿಗೆ ₹ 2,00ರಿಂದ ₹4,00ರ ವರೆಗೆ ಮಾರಾಟವಾಗುತ್ತಿದೆ.

ಹಣ್ಣುಗಳ ಬೆಲೆ ಏರಿಕೆಯಿಂದ ಬಡವರು ಹಾಗೂ ಮಧ್ಯಮ ವರ್ಗದವರು ಚೌಕಾಶಿ ಮಾಡಿ ತೆರಳುತ್ತಿದ್ದಾರೆ. ಉಳ್ಳವರು ಸಹ ಅಷ್ಟಕ್ಕಷ್ಟೇ ಹಣ್ಣು, ಹೂವು ಖರೀದಿಸುತ್ತಿದ್ದಾರೆ ಎಂದು ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು