ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತನ ಭೂ ಕಾಲುವೆಗೆ ಮರು ಜೀವ

ಮಳೆಯ ಅಬ್ಬರಕ್ಕೆ ಓಲ್ಡ್‌ ಸಿಟಿಯ ಮನೆಗಳಿಗೆ ನುಗ್ಗಿದ ನೀರು
Last Updated 21 ಸೆಪ್ಟೆಂಬರ್ 2020, 16:15 IST
ಅಕ್ಷರ ಗಾತ್ರ

ಬೀದರ್‌: ಆರು ನೂರು ವರ್ಷಗಳ ಇತಿಹಾಸ ಹೊಂದಿರುವ ಬಹಮನಿ ಸುಲ್ತಾನರ ಕಾಲದ ಇಲ್ಲಿಯ ಭೂ ಕಾಲುವೆ ಮರುಜೀವ ಪಡೆದುಕೊಂಡಿದೆ. ಭೂ ಕಾಲುವೆಯೊಳಗೆ ಈಗಾಗಲೇ ಐದು ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಇನ್ನೂ ಹರಿದು ಬರುತ್ತಿದೆ. ಇದೇ ಅವಧಿಯಲ್ಲಿ ಗುಹೆಯ ಮುಂಭಾಗ ಭಾರಿ ಮಳೆಗೆ ಕುಸಿದು ಬಿದ್ದಿದೆ.

ಅಲಿಯಾಬಾದ್‌ ಸಿದ್ಧೇಶ್ವರ ದೇವಸ್ಥಾನ ಮುಂಭಾಗದ ಪುಷ್ಕರಣಿ ತುಂಬಿ ನೀರು ಹೊಲಗಳಿಗೆ ಹರಿದು ಹೋಗುತ್ತಿದೆ. ಅಲಿಯಾಬಾದ್ ನಿವಾಸಿಗಳು ಬಟ್ಟೆ, ಪಾತ್ರೆ ಹಾಗೂ ಸ್ನಾನಕ್ಕೆ ನೀರು ಬಳಸಿಕೊಳ್ಳಲು ಆರಂಭಿಸಿದ್ದಾರೆ. ಮಕ್ಕಳು ಇಲ್ಲಿನ ನೀರಿನ ಹೊಂಡದಲ್ಲಿ ಇಳಿದು ಆಟವಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಹೂಳು ತೆಗೆದ ನಂತರ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಬೀದರ್‌ ಜಿಲ್ಲಾಧಿಕಾರಿಯಾಗಿದ್ದ ಅನುರಾಗ್ ತಿವಾರಿ ಅವರ ಆಸಕ್ತಿಯ ಫಲವಾಗಿ ಭೂ ಕಾಲುವೆಯಲ್ಲಿನ ಹೂಳು ತೆಗೆಯಲಾಗಿತ್ತು. ಅವರ ವರ್ಗಾವಣೆ ನಂತರ ಭೂ ಕಾಲುವೆ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಕಾಲುವೆಯಲ್ಲಿ ಮತ್ತೆ ನೀರು ಹರಿಯುತ್ತಿರುವುದರಿಂದ ನಗರದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಕಾಲುವೆಯಲ್ಲಿ ಹರಿದು ಬರುತ್ತಿರುವ ನೀರು ನೋಡಲು ಜನ ತಂಡೋಪ ತಂಡವಾಗಿ ಬರುತ್ತಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ನೆರವಿನಿಂದ 2016ರಲ್ಲಿ ಪುರಾತನ ಭೂ ಕಾಲುವೆಯ ಹೂಳು ತೆಗೆಯಲಾಗಿತ್ತು. ಸರ್ಕಾರ ಭೂ ಕಾಲುವೆ ಸೇರಿದಂತೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ₹ 3 ಕೋಟಿ ಬಿಡುಗಡೆ ಮಾಡಿತ್ತು. ಇದರಲ್ಲಿ ₹60 ಲಕ್ಷ ಮಾತ್ರ ಹೂಳು ತೆಗೆಯಲು ಖರ್ಚು ಮಾಡಲಾಗಿದೆ. ಉಳಿದ ಹಣ ಹಾಗೆಯೇ ಉಳಿದುಕೊಂಡಿದೆ.

ಜಿಲ್ಲಾ ಆಡಳಿತ ಅನಗತ್ಯವಾಗಿ ಹಣ ವ್ಯಯಿಸಿದೆ ಎಂದು ಕೆಲವರು ಆರೋಪಿಸಿದ್ದರು. ಆದರೆ 2016ರ ಸೆ.15ರಂದು ಭೂ ಕಾಲುವೆ ಇರುವ ಸ್ಥಳಕ್ಕೆ ಬಂದಾಗ ಅವರಿಗೆ ಅಚ್ಚರಿ ಕಾದಿತ್ತು. ಸುರಂಗ ಮಾರ್ಗದಲ್ಲಿ ಇನ್ನೂ ಒಂದು ಕಿ.ಮೀ. ಅಂತರದಲ್ಲಿನ ಹೂಳು ತೆಗೆಯುವ ಕಾಮಗಾರಿ ಬಾಕಿ ಇರುವಾಗಲೇ ಬತ್ತಿ ಹೋಗಿದ್ದ ಭೂ ಕಾಲುವೆಯಿಂದ ಸುಮಾರು ಎರಡೂವರೆ ಅಡಿಯಷ್ಟು ನೀರು ಹರಿಯುತ್ತಿತ್ತು. ತದ ನಂತರ ನಗರದ ತೆರೆದ ಬಾವಿಗಳಲ್ಲೂ ನೀರಿನ ಪ್ರಮಾಣ ಹೆಚ್ಚಾಗಿತ್ತು.

‘ನಗರ ವ್ಯಾಪ್ತಿಯಲ್ಲಿ ಒಂದು ವಾರ ಸುರಿದ ಮಳೆಗೆ ಭೂ ಕಾಲುವೆಗೆ ಮರು ಜೀವ ಬಂದಿದೆ. ಇತಿಹಾಸದ ಮೇಲೆ ಬೆಳಕು ಚೆಲ್ಲಲು ಅನುಕೂಲವಾಗಿದೆ. ಭೂ ಕಾಲುವೆ ಒಳಗೆ ವಿದ್ಯುತ್‌ ದೀಪ ಅಳವಡಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿತ್ತು. ಅನುರಾಗ್ ತಿವಾರಿ ನಂತರ ಕಾಮಗಾರಿ ಸ್ಥಗಿತಗೊಂಡಿತ್ತು. ಮತ್ತೆ ಕಾಮಗಾರಿಯನ್ನು ಆರಂಭಿಸುವ ಅಗತ್ಯ ಇದೆ’ ಎಂದು ಟೀಮ್‌ ಯುವಾದ ಸಂಚಾಲಕ ವಿನಯ ಮಾಳಗೆ ಹೇಳುತ್ತಾರೆ.

ಅಲಿಯಾಬಾದ್‌ನ ದಿಬ್ಬದ ಮೇಲಿರುವ ಶಿಕಾರ್‌ಖಾನಾದ ಈಜುಕೊಳದಲ್ಲೂ ಸುಮಾರು ಐದು ಅಡಿ ನೀರು ನಿಂತಿದೆ. ಅಲ್ಲಿನ ಸ್ಮಾರಕಗಳ ಗೋಡೆಗಳು ಮಳೆಗೆ ಕುಸಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT