ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ: ಉಸ್ತುವಾರಿ ಸಚಿವ ಪ್ರಭು ಚವಾಣ್‌

Last Updated 2 ಜನವರಿ 2020, 13:52 IST
ಅಕ್ಷರ ಗಾತ್ರ

ಬೀದರ್: ‘ರಾಜ್ಯ ಬಜೆಟ್‌ನಲ್ಲಿ ಒಪ್ಪಿಗೆ ಪಡೆಯುವಂತಾಗಲು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿಯೊಂದು ಇಲಾಖೆಯೂ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಬೇರೆ ಬೇರೆ ಇಲಾಖೆಗಳ ಯೋಜನೆಗಳೆನ್ನೆಲ್ಲ ಕ್ರೋಡೀಕರಿಸಿ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಸೂಚನೆ ನೀಡಿದರು.

‘ಕಾರಂಜಾ ಜಲಾಶಯದಲ್ಲಿ ಕೃಷಿಗೆ ಬೇಕಾಗುವಷ್ಟು ನೀರಿಲ್ಲ. ಆದರೆ, ₹ 45 ಕೋಟಿ ವೆಚ್ಚದಲ್ಲಿ ಕಾಲುವೆಗಳ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯ ಜನ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಬೇಕು’ ಎಂದು ಹೇಳಿದರು.

‘ಔರಾದ್ ತಾಲ್ಲೂಕಿನಲ್ಲಿ ಅತಿ ಹೆಚ್ಚು ನೀರಿನ ಸಮಸ್ಯೆ ಇದೆ. ಕನಿಷ್ಠ ನಾಲ್ಕು ಹೊಸ ಬ್ಯಾರೇಜ್‌ ನಿರ್ಮಾಣ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು’ ಎಂದು ತಿಳಿಸಿದರು.
‘ಜಿಲ್ಲಾಆಡಳಿತ ಕಚೇರಿಗಳ ಸಂಕೀರ್ಣ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ಒಂದೇ ಸ್ಥಳದಲ್ಲಿ ಇದೇ ವರ್ಷ ನಿರ್ಮಾಣವಾಗಬೇಕು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ನೀಲನಕ್ಷೆ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ನೀಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಇದ್ದರು.

ಕಚೇರಿಯಲ್ಲೇ ಕುಳಿತುಕೊಳ್ಳಬೇಡಿ

ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗದು. ವಾರದಲ್ಲಿ ಒಂದು ಬಾರಿಯಾದರೂ ತಾಲ್ಲೂಕಿಗೆ ಭೇಟಿ ಕೊಡಬೇಕು. ಗ್ರಾಮಮಟ್ಟದಲ್ಲಿ ಸಭೆಗಳನ್ನು ನಡೆಸಬೇಕು’ ಎಂದು ಸಚಿವ ಪ್ರಭು ಚವಾಣ್‌ ಸೂಚಿಸಿದರು.

‘ಜಿಲ್ಲಾ ಮಟ್ಟದ ಅಧಿಕಾರಿಗಳು ನಿಯಮಿತವಾಗಿ ತಾಲ್ಲೂಕಿಗೆ ಭೇಟಿ ಕೊಟ್ಟರೆ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹೋಬಳಿ ಹಾಗೂ ಗ್ರಾಮಗಳಿಗೆ ಭೇಟಿ ಕೊಡುತ್ತಾರೆ. ಇದರಿಂದ ಜನರ ಸಮಸ್ಯೆಗಳನ್ನು ಅರಿತುಕೊಳ್ಳಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

‘ನಾನು ಮುಖಂಡನಾಗಿ ಗುರುತಿಸಿಕೊಳ್ಳುವುದಕ್ಕಿಂತಲೂ ಜನರ ಸೇವಕನಾಗಿ ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತೇನೆ. ಅಧಿಕಾರಿಗಳನ್ನು ನನ್ನ ಕುಟುಂಬದ ಸದಸ್ಯರಂತೆ ಭಾವಿಸಿದ್ದೇನೆ. ನನ್ನ ಪ್ರೀತಿ ಅವರೊಂದಿಗೆ ಇದೆ. ಕೆಲಸ ಮಾಡದವರು ಇಲ್ಲಿಂದ ಹೋಗಬಹುದು’ ಎಂದರು.

‘ಚೆನ್ನಾಗಿ ಕೆಲಸ ಮಾಡಿದರೆ ಅಧಿಕಾರಿಗಳಿಗೇ ಒಳ್ಳೆಯ ಹೆಸರು ಬರುತ್ತದೆ. ನಿಮ್ಮ ಯಶದಲ್ಲಿ ನನಗೆ ಸ್ವಲ್ಪ ಜಾಗ ಸಿಕ್ಕರೆ ಸಾಕು’ ಎಂದು ತಿಳಿಸಿದರು.

‘ಬೀದರ್‌ನ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್‌ನ ವಾರ್ಡನ್‌ ಒಬ್ಬರು ನಾಲ್ಕು ತಿಂಗಳಿಂದ ಆಹಾರ ಧಾನ್ಯಗಳ ಪೂರೈಕೆ ಹಾಗೂ ಖರೀದಿಯ ರೆಜಿಸ್ಟರ್‌ ನಿರ್ವಹಿಸಿಲ್ಲ. ತಾಲ್ಲೂಕು ಮಟ್ಟದ ಅಧಿಕಾರಿಯೂ ಭೇಟಿ ನೀಡಿ ಪರಿಶೀಲಿಸಿಲ್ಲ. ಬಿಲ್‌ಗಳನ್ನು ಮಾತ್ರ ನಿಯಮಿತವಾಗಿ ಪಾವತಿಸಿದ್ದಾರೆ. ಇಂತಹ ಅವ್ಯವಸ್ಥೆ ನನಗೆ ಬೇಡವಾಗಿದೆ’ ಎಂದು ಹೇಳಿದರು.
‘ಜಿಲ್ಲೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರ ಅಭಿಪ್ರಾಯ ಪಡೆದುಕೊಳ್ಳಬೇಕು. ಹೊಸ ಯೊಜನೆ ಅಥವಾ ಅಲೋಚನೆಗಳಿದ್ದರೆ ಪ್ರಸ್ತಾವದಲ್ಲಿ ಸೇರಿಸಲು ಅನುಕೂಲವಾಗಲಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ತಿಳಿಸಿದರು.

₹48 ಕೋಟಿ ಮರಳಿ ಪಡೆದ ಸರ್ಕಾರ

ಬೀದರ್: ‘ಜಿಲ್ಲಾಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಬಿಡುಗಡೆ ಮಾಡಿದ್ದ ₹ 48 ಕೋಟಿ ಅನುದಾನ ಸರ್ಕಾರಕ್ಕೆ ಮರಳಿ ಹೋಗಿದೆ. ಹೊಸದಾಗಿ ₹ 100 ಕೋಟಿ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಿ ಒಪ್ಪಿಗೆ ಪಡೆಯಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ತಿಳಿಸಿದರು.

‘ನಗರ ಬೆಳೆಯುತ್ತಿರುವುದರಿಂದ ದೂರದೃಷ್ಟಿಯಿಂದ ನಗರದ ಹೊರವಲಯದಲ್ಲಿ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ, ಜಿಲ್ಲಾ ಪಂಚಾಯಿತಿ ಕಚೇರಿ, ಪೊಲೀಸ್‌ ಹೊರ ಠಾಣೆ, ಅತಿಥಿಗೃಹ ಹಾಗೂ ಹೆಲಿಪ್ಯಾಡ್‌ ಒಳಗೊಂಡ ವಿಸ್ತೃತ ಯೋಜನೆಯನ್ನು ಸಿದ್ಧಪಡಿಸಬೇಕಿದೆ’ ಎಂದು ಹೇಳಿದರು.
‘ಅಧಿಕ ಮೊತ್ತದ ಪ್ರಸ್ತಾವ ಸಿದ್ಧಪಡಿಸಿದರೆ ಸರ್ಕಾರದಿಂದ ಒಪ್ಪಿಗೆ ಪಡೆಯುವುದು ಕಷ್ಟವಾಗಲಿದೆ. ಸದ್ಯ ಅಗತ್ಯವಿರುವಷ್ಟು ಅಂಶಗಳನ್ನು ಉಲ್ಲೇಖಿಸಿ ಪ್ರಸ್ತಾವ ಸಿದ್ಧಪಡಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಜೆಟ್‌ ಪೂರ್ವ ಸಭೆ ನಡೆಸುವ ಸಂದರ್ಭದಲ್ಲಿ ಅವರಿಗೆ ಮನವರಿಕೆ ಮಾಡಿ ಅನುದಾನ ತರಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ಪ್ರತಿ ತಾಲ್ಲೂಕಿಗೆ ಸಂಚಾರಿ ವಾಹನ ಕೊಡಿ

ಬೀದರ್: ‘ಪಶು ವೈದ್ಯರು ಜಾನುವಾರುಗಳಿಗೆ ಸ್ಥಳಕ್ಕೆ ಹೋಗಿ ಚಿಕಿತ್ಸೆ ಕೊಡುವಂತಾಗಲು ಪ್ರತಿ ತಾಲ್ಲೂಕಿಗೆ ಒಂದು ಆಂಬುಲನ್ಸ್‌ ಮಾದರಿಯ ಸಂಚಾರಿ ವಾಹನ ಕೊಡಬೇಕು. ಪಶು ಆಸ್ಪತ್ರೆಯಲ್ಲಿ ಲಸಿಕೆ ಹಾಗೂ ಔಷಧಗಳನ್ನು ಇಡಲು ಅನುಕೂಲವಾಗುವಂತೆ ಸೋಲಾರ್‌ ವ್ಯವಸ್ಥೆಯನ್ನು ಒದಗಿಸಬೇಕು’ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಗೌತಮ ಅರಳಿ ಮನವಿ ಮಾಡಿದರು.
‘ಪಶು ಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆಯಾಗಬೇಕು. ಇದರಿಂದ ಅವ್ಯವಹಾರ ತಡೆಯಲು ಸಾಧ್ಯವಾಗಲಿದೆ. ಫಲಾನುಭವಿಗಳು ತಾವು ಪಡೆದ ಜಾನುವಾರುಗಳನ್ನು ಮನೆಯಲ್ಲಿ ಇಟ್ಟುಕೊಂಡು ಹೈನುಗಾರಿಕೆಯಲ್ಲಿ ಮುಂದುವರಿಯಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT