ಶನಿವಾರ, ಡಿಸೆಂಬರ್ 3, 2022
26 °C

ಬ್ರಿಮ್ಸ್ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯಕ್ಕೆ ಶಿಫಾರಸು: ಪ್ರೊ.ಸ.ಚಿ.ರಮೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕನ್ನಡ ಒಂದು ವಿಷಯ ಅಧ್ಯಯನ ಕಡ್ಡಾಯಕ್ಕೆ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿಗೆ ಶೀಘ್ರ ಶಿಫಾರಸು ಮಾಡಲಾಗುವುದು’ ಎಂದು ಹಂಪಿ ಕನ್ನಡ ವಿಸ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ ರಮೇಶ ತಿಳಿಸಿದರು.

ಇಲ್ಲಿಯ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬ್ರಿಮ್ಸ್ ಕನ್ನಡ ಸಂಘ ಹಾಗೂ ವಸಿಷ್ಠಾಸ್-2020ನೇ ವೈದ್ಯಕೀಯ ವಿದ್ಯಾರ್ಥಿಗಳ ಕೂಟದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೈನಂದಿನ ಜೀವನದಲ್ಲಿ ಗಳಿಕೆ ಜತೆಗೆ ಒಂದಿಷ್ಟು ನೆಮ್ಮದಿ ಅವಶ್ಯಕ. ಹಾಗಾಗಿ ವೈದ್ಯರು ತಮ್ಮ ವೃತ್ತಿ ಬದುಕಿನಲ್ಲಿ ಕನ್ನಡ ಕಾವ್ಯಗಳ ಅಧ್ಯಯನ ಹಾಗೂ ಕಾವ್ಯ ರಚನೆಗೆ ಆಸಕ್ತಿ ತೋರಬೇಕು. ಬ್ರಿಮ್ಸ್ ಗ್ರಂಥಾಲಯದಲ್ಲಿ ಹೆಚ್ಚೆಚ್ಚು ಕನ್ನಡ ಗ್ರಂಥಗಳ ಸಂಗ್ರಹಕ್ಕೆ ಕ್ರಮ ವಹಿಸಬೇಕು ಎಂದು ಹೇಳಿದರು.

ಇಲ್ಲಿಯ ವಿದ್ಯಾರ್ಥಿಗಳಿಗೆ ಮಾತೃಭಾಷೆ, ಪ್ರೇಮಕ್ಕೆ ಇಂಬು ನೀಡಬಲ್ಲದು. ವೃತ್ತಿ ಜೀವನದಲ್ಲಿ ತಮ್ಮ ಬಳಿಗೆ ಬರುವ ರೋಗಿಗಳಿಗೆ ಕನ್ನಡ ಭಾಷೆಯಲ್ಲಿ ಸಂಬೋಧಿಸಿ ಚಿಕಿತ್ಸೆ ಕೊಟ್ಟರೆ ರೋಗಿಗಳ ಅರ್ಧ ರೋಗ ವಾಸಿಯಾಗುತ್ತದೆ. ಇದು ತಮ್ಮ ವೃತ್ತಿ ಬದುಕಿಗೂ ತೃಪ್ತಿ ತರಬಲ್ಲದು ಎಂದರು.

ಕನ್ನಡದ ಮೊಟ್ಟ ಮೊದಲ ಗದ್ಯ ಹಾಗೂ ಕಾವ್ಯ ಗ್ರಂಥಗಳು ಹುಟ್ಟಿದ್ದು ಈ ನೆಲದಲ್ಲಿ. ಹಾಗಾಗಿ ನಿವೆಲ್ಲ ಪುಣ್ಯವಂತರು ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಮಾತನಾಡಿ,‘ಹುಮನಾಬಾದ್ ತಾಲ್ಲೂಕಿನ ಜಲಸಿಂಗಿಯಲ್ಲಿರುವ ಪುರಾತನ ಮಹಾದೇವ ದೇವಾಲಯದಲ್ಲಿ ಶಿಲಾ ಬಾಲಕಿಯೊಬ್ಬಳು ಕನ್ನಡದ ಅಕ್ಷರಗಳು ಬರೆಯುವ ಚಿತ್ರ ನೋಡಿದರೆ 7ನೇ ಶತಮಾನದಲ್ಲಿಯೇ ಮಹಿಳೆಗೆ ಕನ್ನಡದ ಅಧ್ಯಯನವಿತ್ತು ಎಂಬುದು ತಿಳಿದುಬರುತ್ತದೆ. ಕನ್ನಡದ ನೆಲದಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನವಿದ್ದು, ಕನ್ನಡ ಭಾಷಾಜ್ಞಾನವುಳ್ಳುವರಾಗಿದ್ದರು’ ಎಂದರು.

ಬ್ರಿಮ್ಸ್ ಕನ್ನಡ ಸಂಘದ ಸಂಯೋಜಕ ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ನೃಪತುಂಗ ಪ್ರಶಸ್ತಿ ಪುರಸ್ಕೃತ ದಿಲೀಪ ಡೊಂಗರಗೆ ಅವರನ್ನು ಸನ್ಮಾನಿಸಲಾಯಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ತಿಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಯಿತು. ನಂತರ ವಸಿಷ್ಠಾಸ್-2020 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬ್ರಿಮ್ಸ್ ಪ್ರಭಾರಿ ನಿರ್ದೇಶಕ ಡಾ.ಸುಮಂತ ಕಣಜಿಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಸ್ತ್ರ ಚಿಕಿತ್ಸೆಕ ಡಾ.ಮಹೇಶ ಬಿರಾದಾರ, ಚೈತ್ರಾ ರಮೇಶ, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ವೀರೇಂದ್ರ ಪಾಟೀಲ, ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಂಜೀವ್ ಬಿರಾದಾರ, ಎಲುಬು ಹಾಗೂ ಮೂಳೆ ವಿಭಾಗದ ಡಾ.ಗುರುತಪ್ಪ ಶಟಕಾರ, ಗ್ರಂಥ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ನಂದಿನಿ ಬಿರಾದಾರ ವೇದಿಕೆಯಲ್ಲಿ ಇದ್ದರು.

ವೈಷ್ಣವಿ ಸೀತಾ ಹಾಗೂ ನಿಲೇಶ ಖಾಶೆಂಪುರೆ ನಿರೂಪಿಸಿದರು. ವೈದ್ಯಾಧಿಕಾರಿ ಡಾ.ಲೋಕೇಶ ಪಾಟೀಲ, ಡಾ.ಶೈಲೇಂದ್ರ ಸಿಂಗ್, ಡಾ.ರಾಹುಲ್ ಬೇದ್ರೆ, ಡಾ.ವಿಜಯಕುಮಾರ ಬಿಲಗುಂದೆ, ಡಾ.ರಾಜಕುಮಾರ ಜಿ.ಬಿ, ಡಾ.ಬನ್ನೀರ್, ಸಿಬ್ಬಂದಿ ಸಂತೋಷ ಬುಳ್ಳಾ, ಲಿಂಗರಾಜ ಹಿರೇಮಠ, ವಿಜಯಕುಮಾರ ಚಾಮಾ, ಕನ್ಯಾಕುಮಾರಿ, ಶಿವಶರಣಪ್ಪ ಗಣೇಶಪುರ, ಪ್ರಕಾಶ ಕನ್ನಾಳೆ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು