ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಸಿವು ನೀಗಿಸುವ ‘ರಿಶೈನ್‌ ವಾರಿಯರ್‌’

ಸಭೆ, ಸಮಾರಂಭಗಳಲ್ಲಿ ಉಳಿಯುವ ಆಹಾರ ಸಂಗ್ರಹಿಸಿ ಹಸಿದವರಿಗೆ ಪೂರೈಕೆ
ಶಶಿಕಾಂತ ಎಸ್‌. ಶೆಂಬೆಳ್ಳಿ
Published 12 ಜನವರಿ 2024, 6:59 IST
Last Updated 12 ಜನವರಿ 2024, 6:59 IST
ಅಕ್ಷರ ಗಾತ್ರ

ಬೀದರ್‌: ಇವರು ಜನರ ಹಸಿರು ನೀಗಿಸುವ ‘ರಿಶೈನ್‌ ವಾರಿಯರ್‌’ಗಳು.

ನಗರದಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ಆಹಾರ ಹೆಚ್ಚಾದರೆ, ಆ ಆಹಾರವನ್ನು ಸಂಗ್ರಹಿಸಿ ಹಸಿದವರಿಗೆ ಪೂರೈಸಿ ಅವರ ಹಸಿವು ನೀಗಿಸುವ ಕೆಲಸವನ್ನು ಯಾವುದೇ ಸದ್ದು ಗದ್ದಲವಿಲ್ಲದೆ ಈ ವಾರಿಯರ್‌ಗಳು ಮಾಡುತ್ತಿದ್ದಾರೆ.

ನಿತ್ಯ ನಡೆಯುವ ನಿಶ್ಚಿತಾರ್ಥ, ಮದುವೆ, ಮುಂಜಿವೆ ಸೇರಿದಂತೆ ಹತ್ತು ಹಲವಾರು ಸಭೆ ಸಮಾರಂಭಗಳಲ್ಲಿ ಬಹಳಷ್ಟು ಆಹಾರ ಹೆಚ್ಚಾಗುತ್ತದೆ. ಹೆಚ್ಚಿನವರು ಅದನ್ನು ತಿಪ್ಪೆಗೆ ಎಸೆಯುತ್ತಾರೆ. ಅನ್ನದ ಮಹತ್ವ ತಿಳಿ ಹೇಳಿ, ಹಸಿದವರಿಗೆ ತಲುಪಿಸುವ ಕೆಲಸ ‘ರಿಶೈನ್‌’ ಸಂಸ್ಥೆ ಕಳೆದ ಏಳು ವರ್ಷಗಳಿಂದ ಮಾಡುತ್ತಿದೆ. ‘ಡೋಂಟ್‌ ವೇಸ್ಟ್‌ ಫುಡ್‌’ ಇವರ ಘೋಷವಾಕ್ಯ.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರೋಹನ್‌ ಕುಮಾರ್‌ ಹಾಗೂ ಅವರ ತಂಡದ ಸದಸ್ಯರಾದ ಸಚಿನ್‌ ಕೆಂಚ, ಶ್ರೀಧರ, ಕೋರ್‌ನೆಲ್‌, ಸ್ಟೀಫನ್‌ ಪಾಲ್‌ ಹಾಗೂ ಸೊಹೆಬುದ್ದೀನ್‌ ಅವರು ತಮ್ಮ ದೈನಂದಿನ ಕೆಲಸದ ಜೊತೆಗೆ ಸಾಮಾಜಿಕ ಕಳಕಳಿ ಇಟ್ಟುಕೊಂಡು ಈ ಕೆಲಸ ಮಾಡುತ್ತಿದ್ದಾರೆ.

ರೋಹನ್‌ ಕುಮಾರ್‌ ಅವರು ಸ್ವಂತ ವೆಚ್ಚದಲ್ಲಿ ವ್ಯಾನ್‌ ಸಿದ್ಧಪಡಿಸಿ, 10ರಿಂದ 12 ಕೆ.ಜಿ. ಆಹಾರ ಸಂಗ್ರಹಿಸುವ 20 ಕ್ಯಾನ್‌ಗಳನ್ನು ಖರೀದಿಸಿದ್ದಾರೆ.

ನಗರದಲ್ಲಿ ಎಲ್ಲೇ ದೊಡ್ಡ ಸಭೆ, ಸಮಾರಂಭಗಳಿದ್ದರೆ ಅಂತಹವರನ್ನು ಸಂಪರ್ಕಿಸುತ್ತಾರೆ. ‘ಕಾರ್ಯಕ್ರಮ ಮುಗಿದ ಬಳಿಕ ಒಂದು ವೇಳೆ ಆಹಾರ ಹೆಚ್ಚಾದರೆ ತಿಪ್ಪೆಗೆ ಎಸೆಯಬೇಡಿ. ಕರೆ ಮಾಡಿ ತಿಳಿಸಿದರೆ ಅದನ್ನು ಸಂಗ್ರಹಿಸಿ ಅಗತ್ಯ ಇರುವವರಿಗೆ ತಲುಪಿಸಲಾಗುವುದು’ ಎಂದು ಹೇಳುತ್ತಾರೆ. ಕಳೆದ ಏಳು ವರ್ಷಗಳಿಂದ ಇವರು ಕೆಲಸ ಮಾಡುತ್ತಿರುವುದರಿಂದ ಅನೇಕರು ಸ್ವಯಂಪ್ರೇರಣೆಯಿಂದ ಕರೆ ಮಾಡಿ ಮಾಹಿತಿ ಕೊಡುತ್ತಾರೆ.

ಬೀದರ್‌ ನಗರವೊಂದರಲ್ಲೇ 90ಕ್ಕೂ ಅಧಿಕ ಕಲ್ಯಾಣ ಮಂಟಪಗಳಿವೆ. ಇಡೀ ಜಿಲ್ಲೆಯಲ್ಲಿ ಸುಮಾರು 500ರವರೆಗೆ ಮದುವೆ ಮಂಟಪಗಳಿವೆ. ನಿತ್ಯ ಒಂದಿಲ್ಲೊಂದು ಕಾರ್ಯಕ್ರಮಗಳು ಅದರಲ್ಲಿ ನಡೆಯುತ್ತ ಇರುತ್ತವೆ. ಅಪಾರ ಪ್ರಮಾಣದ ಆಹಾರವನ್ನು ತಿಪ್ಪೆಗೆ ಎಸೆದು ಹಾಳು ಮಾಡಲಾಗುತ್ತಿದೆ. ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಆಹಾರ ವ್ಯರ್ಥವಾಗುತ್ತಿದೆ. ಬೀದರ್‌ ನಗರದಲ್ಲೇ ನಮಗೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಇಡೀ ಜಿಲ್ಲೆಯಲ್ಲಿ ಕೆಲಸ ವಿಸ್ತರಿಸುವುದು ಅಸಾಧ್ಯದ ಮಾತು. ಆದರೆ, ಸರ್ಕಾರ ಅಥವಾ ಕಾರ್ಪೊರೇಟ್‌ ಕಂಪನಿಗಳು ಮುಂದೆ ಬಂದು ಸಿಎಸ್‌ಆರ್‌ ಯೋಜನೆಯಡಿ ಅಗತ್ಯ ಸೌಕರ್ಯ ಒದಗಿಸಿದರೆ ಮಾಡಬಹುದು ಎನ್ನುತ್ತಾರೆ ರೋಹನ್‌ ಕುಮಾರ್‌.

‘ನಮ್ಮ ಸ್ವಂತ ಹಣದಿಂದ ವ್ಯಾನ್‌, ಕ್ಯಾನ್‌ಗಳನ್ನು ಖರೀದಿಸಿದ್ದೇವೆ. ಆಹಾರ ಬಿಸಿಯಿರಲಿ ಎಂದು ಪಾಕೆಟ್‌ಗಳಲ್ಲಿ ಹಾಕಿ ಕೊಡುತ್ತೇವೆ. ಅದು ಹೆಚ್ಚುವರಿ ಖರ್ಚು. ನಾವು ಬಹಳ ಸೀಮಿತವಾಗಿ ಕೆಲಸ ಮಾಡುತ್ತಿದ್ದೇವೆ. ಇದನ್ನು ದೊಡ್ಡ ಮಟ್ಟದಲ್ಲಿ ಮಾಡುವ ಉದ್ದೇಶವಿದೆ. ಆದರೆ, ಅದಕ್ಕೆ ಬಹಳ ಬಂಡವಾಳ ಬೇಕಾಗುತ್ತದೆ. ಜೊತೆಗೆ ಇದು ಆದಾಯ ತಂದುಕೊಡುವ ಕೆಲಸವಲ್ಲ. ಹಾಗಾಗಿ ಕಾರ್ಪೊರೇಟ್‌ ಕಂಪನಿಗಳು ಸಿಎಸ್‌ಆರ್‌ ಅಡಿ ಹಣ ಮೀಸಲಿಟ್ಟರೆ ಹಸಿವು ನೀಗಿಸಲು ದೊಡ್ಡ ಸಹಾಯವಾಗುತ್ತದೆ’ ಎನ್ನುತ್ತಾರೆ ರೋಹನ್‌ ಕುಮಾರ್‌.

‘ಈ ಕೆಲಸಕ್ಕೆ ಸಾಕಷ್ಟು ವಾಹನಗಳು ಬೇಕು. ‘ಮ್ಯಾನ್‌ ಪವರ್‌’ ಕೂಡ ಅಷ್ಟೇ ಮುಖ್ಯ. ಆಹಾರ ಕೆಡದಂತೆ ಸಂಗ್ರಹಿಸಿ ಇಡಲು ಸ್ಟೋರೇಜ್‌ ವ್ಯವಸ್ಥೆ ಬೇಕು. ಸದ್ಯ ನಮ್ಮಲ್ಲಿ ಸ್ಟೋರೇಜ್‌ ಇಲ್ಲದ ಕಾರಣ ಸಂಜೆ 7ರ ಒಳಗೆ ಯಾರಾದರೂ ಕರೆ ಮಾಡಿದರಷ್ಟೇ ಅಲ್ಲಿಗೆ ಹೋಗಿ ಆಹಾರ ಸಂಗ್ರಹಿಸುತ್ತೇವೆ. ತಡವಾಗಿ ತಿಳಿಸಿದರೆ ಅಲ್ಲಿಗೆ ಹೋಗಿ ಸಂಗ್ರಹಿಸಲು ಸಮಯ ಬೇಕಾಗುತ್ತದೆ. ಪುನಃ ವಿತರಿಸಬೇಕಾಗುತ್ತದೆ. ಸಮಯ ಮೀರಿದರೆ ಜನ ಸಿಗುವುದಿಲ್ಲ. ಮತ್ತೆ ಆಹಾರ ಕೆಡುತ್ತದೆ. ಸಮಯ, ಶ್ರಮ ಎಲ್ಲವೂ ಹಾಳಾಗುತ್ತದೆ’ ಎಂದು ತಿಳಿಸಿದರು.

‘ಮಧ್ಯಾಹ್ನ ಮಾಡಿದ ಆಹಾರವನ್ನು ರಾತ್ರಿ ಮನೆಯಲ್ಲಿ ಪುನಃ ಬಿಸಿ ಮಾಡಿ ಸೇವಿಸುತ್ತೇವೆ. ತಣ್ಣಗಾದರೆ ಸೇವಿಸುವುದಿಲ್ಲ. ತಣ್ಣಗಾದ ಆಹಾರ ಸೇವಿಸಲು ಯಾರೂ ಇಷ್ಟಪಡುವುದಿಲ್ಲ. ಸ್ಟೋರೇಜ್‌ ವ್ಯವಸ್ಥೆ ಇದ್ದರೆ ಒಂದು ವೇಳೆ ರಾತ್ರಿ ಸಮಯ ಮೀರಿದ ನಂತರ ಆಹಾರ ಕೊಟ್ಟರೂ ಅದನ್ನು ಮರುದಿನ ಬೆಳಿಗ್ಗೆ ಹಂಚಬಹುದು. ಸರ್ಕಾರ ವೃದ್ಧಾಪ್ಯವೇತನ ಸೇರಿದಂತೆ ಇತರೆ ಯೋಜನೆಗಳ ಮೂಲಕ ನಗದು ನೀಡುತ್ತಾರೆ. ಹಸಿವು ನೀಗಿಸಲು ಯೋಜನೆ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ರಿಶೈನ್‌’ ಸಂಸ್ಥೆ ಸದಸ್ಯರಿಂದ ಆಹಾರ ಪಡೆಯಲು ಸಾಲುಗಟ್ಟಿ ನಿಂತಿರುವ ಜನ 
‘ರಿಶೈನ್‌’ ಸಂಸ್ಥೆ ಸದಸ್ಯರಿಂದ ಆಹಾರ ಪಡೆಯಲು ಸಾಲುಗಟ್ಟಿ ನಿಂತಿರುವ ಜನ 
ಆಹಾರ ಸಂಗ್ರಹಣೆಗೂ ಮುನ್ನ ಆಹಾರ ಪರೀಕ್ಷಿಸುತ್ತಿರುವ ರೋಹನ್‌
ಆಹಾರ ಸಂಗ್ರಹಣೆಗೂ ಮುನ್ನ ಆಹಾರ ಪರೀಕ್ಷಿಸುತ್ತಿರುವ ರೋಹನ್‌

ಬ್ರಿಮ್ಸ್‌ವೊಂದರಲ್ಲೇ ₹ 6.60 ಕೋಟಿ ಆಹಾರ

‘ರಿಶೈನ್‌ ಸಂಸ್ಥೆ ಪ್ರಮುಖವಾಗಿ ನಗರದ ಬ್ರಿಮ್ಸ್‌ ಕೇಂದ್ರವಾಗಿಟ್ಟುಕೊಂಡು ಹೆಚ್ಚು ಆಹಾರ ಪೂರೈಸುತ್ತಿದೆ. ಬ್ರಿಮ್ಸ್‌ನಲ್ಲಿಇದುವರೆಗೆ 1100 ದಿನ ಆಹಾರ ಪೂರೈಸಿದ್ದೇವೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ತಲಾ 300 ಜನರಿಗೆ ಆಹಾರ ಕೊಟ್ಟಿದ್ದೇವೆ. ಎರಡೊತ್ತಿನ ಆಹಾರಕ್ಕೆ ಕನಿಷ್ಠ ₹ 100 ವೆಚ್ಚ ಅಂದಾಜು ಮಾಡಿದರೆ ಇದುವರೆಗೆ ₹6.60 ಕೋಟಿ ಮೌಲ್ಯದ ಆಹಾರ ಪೂರೈಸಿದಂತಾಗಿದೆ. ಜಿಲ್ಲೆಯ ಎಲ್ಲ 500 ಕಲ್ಯಾಣ ಮಂಟಪಗಳಲ್ಲಿ ವರ್ಷಕ್ಕೆ ಎಷ್ಟು ಕೋಟಿ ಆಹಾರ ಹಾಳಾಗುತ್ತಿದೆ ಎನ್ನುವುದನ್ನು ಅಂದಾಜಿಸಬಹುದು’ ಎಂದು ರಿಶೈನ್‌ ಸಂಸ್ಥೆ ಅಧ್ಯಕ್ಷ ರೋಹನ್‌ ಕುಮಾರ್‌ ತಿಳಿಸಿದರು. ಬ್ರಿಮ್ಸ್‌ನಲ್ಲಿ ಹೆರಿಗೆ ಸೇರಿದಂತೆ ಸಣ್ಣಪುಟ್ಟ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಕನಿಷ್ಠ ಒಂದು ವಾರ ಆಸ್ಪತ್ರೆಗೆ ದಾಖಲಾಗುತ್ತಾರೆ. ರೋಗಿಯೊಂದಿಗೆ ಕನಿಷ್ಠ ಇಬ್ಬರಿಂದ ಮೂವರು ಬರುತ್ತಾರೆ. ನಗರದಲ್ಲಿ ದುಬಾರಿ ಹಣ ಕೊಟ್ಟು ಉತ್ತಮವಾದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ನಮ್ಮ ಕೆಲಸದಿಂದ ಅಂತಹವರಿಗೆ ಬಹಳ ನೆರವಾಗುತ್ತಿದೆ. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಬಡವರು ಸಿಗುತ್ತಾರೆ. ಅವರಿಗೆ ಆಹಾರ ತಲುಪಿಸಿದರೆ ದೊಡ್ಡ ಸಹಾಯ ಮಾಡಿದಂತಾಗುತ್ತದೆ. ಇದನ್ನು ಜನಪ್ರತಿನಿಧಿಗಳು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

- ಈ ಕೆಲಸಕ್ಕೆ ಮುಂದಾಗಿದ್ದೇಕೆ?

‘ನಾನೊಮ್ಮೆ ರೈಲು ನಿಲ್ದಾಣದಿಂದ ಹೋಗುವಾಗ ಕಸದ ಮಧ್ಯೆ ಕುಳಿತು ಚಿಂದಿ ಆಯುವ ಮಕ್ಕಳು ಅದರೊಳಗೆ ಕುಳಿತು ಅಲ್ಲಿ ಬಿಸಾಕಿದ್ದ ಪಾಕೆಟ್‌ನಿಂದ ಆಹಾರ ಸೇವಿಸುತ್ತಿದ್ದರು. ಅದನ್ನು ನೋಡಿ ಮನಸ್ಸಿಗೆ ಬಹಳ ಘಾಸಿಯಾಯಿತು. ಮತ್ತೊಂದು ಕಾರ್ಯಕ್ರಮದಲ್ಲಿ ಗುಡ್ಡೆಯಂತೆ ಆಹಾರ ಚೆಲ್ಲಿದ್ದರು. ಒಂದೆಡೆ ಜನರಿಗೆ ಆಹಾರ ಸಿಗುತ್ತಿಲ್ಲ. ಮತ್ತೊಂದೆಡೆ ಆಹಾರವನ್ನು ವ್ಯರ್ಥ ಮಾಡುತ್ತಿದ್ದಾರೆ. ತಿಪ್ಪೆಗೆ ಚೆಲ್ಲುವ ಆಹಾರವನ್ನು ಹಸಿದವರಿಗೆ ತಲುಪಿಸಿದರೆ ನೂರಾರು ಜನರ ಹೊಟ್ಟೆ ತುಂಬುತ್ತದೆ ಎಂದು ಯೋಚಿಸಿ ಕೆಲಸ ಆರಂಭಿಸಿದೆ. ನನ್ನ ಕೆಲಸಕ್ಕೆ ಗೆಳೆಯರು ಜೊತೆಯಾದರು’ ಎಂದು ರೋಹನ್‌ ಕುಮಾರ್‌ ಸಂಸ್ಥೆ ಕಟ್ಟಿದ ಬಗೆಯನ್ನು ವಿವರಿಸಿದರು. ‘ಈಗಲೂ ಅನೇಕ ಜನ ರೈಲು ನಿಲ್ದಾಣ ಬ್ರಿಮ್ಸ್‌ ಆಸ್ಪತ್ರೆ ಸುತ್ತಮುತ್ತ ಹಸಿವಿನಿಂದ ಮಲಗುತ್ತಾರೆ. ನಾವು ಜನರನ್ನು ಎಬ್ಬಿಸಿ ಆಹಾರ ಕೊಡುತ್ತೇವೆ. ನಮ್ಮ ವ್ಯಾನ್‌ ಆಸ್ಪತ್ರೆಗೆ ಹೋಗುತ್ತಿದ್ದಂತೆ ಜನ ಮುತ್ತಿಕೊಳ್ಳುತ್ತಾರೆ. ಆಹಾರದ ಮಹತ್ವ ಎಷ್ಟಿದೆ ಎಂಬುದನ್ನು ಇದರಿಂದಲೇ ಮನಗಾಣಬಹುದು’ ಎಂದರು.

- ಸ್ಲಂ ಜನರ ಆರ್ಥಿಕ ಮಟ್ಟ ಸುಧಾರಣೆ

‘ಜಿಲ್ಲೆಯ ಕಲ್ಯಾಣ ಮಂಟಪಗಳಲ್ಲಿ ನಿತ್ಯ ಹೆಚ್ಚಾಗುವ ಆಹಾರವನ್ನು ಸಂಗ್ರಹಿಸಿ ಅದನ್ನು ಸ್ಲಂಗಳಲ್ಲಿ ಸಮರ್ಪಕವಾಗಿ ಪೂರೈಸಿದರೆ ಒಂದು ಬಡ ಕುಟುಂಬದ ವಾರ್ಷಿಕ ₹ 2 ಲಕ್ಷ ಹಣ ಉಳಿತಾಯವಾಗುತ್ತದೆ. ಅವರ ಹಸಿವು ನೀಗುತ್ತದೆ. ಆರ್ಥಿಕ ಮಟ್ಟ ಕೂಡ ಸುಧಾರಿಸಬಹುದು’ ಎಂದು ರೋಹನ್‌ ಕುಮಾರ್ ತಿಳಿಸಿದರು.

ಆಹಾರ ಹೆಚ್ಚಾದರೆ ಹೀಗೆ ಮಾಡಿ...

ಯಾವುದೇ ರೀತಿಯ ಕಾರ್ಯಕ್ರಮ ಮಾಡಿ ಆಹಾರ ಹೆಚ್ಚಾದರೆ ಸಂಜೆ 7 ಗಂಟೆಯೊಳಗೆ ‘ರಿಶೈನ್‌’ ಸಂಸ್ಥೆಯನ್ನು ಸಂಪರ್ಕಿಸಬಹುದು. 90666 16858 ಅವರ ಮೊಬೈಲ್‌ ಸಂಖ್ಯೆ. ಒಂದುವೇಳೆ ರಾತ್ರಿ ಔತಣ ಕೂಟ ಏರ್ಪಡಿಸಿ ಅಲ್ಲಿ ಆಹಾರ ಉಳಿದಿದ್ದರೂ ತಿಳಿಸಬಹುದು. ತಡರಾತ್ರಿಯೇ ಅದನ್ನು ಸಂಗ್ರಹಿಸಿ ಮರುದಿನ ಬೆಳಿಗ್ಗೆ ಜನರಿಗೆ ಹಂಚಲು ಅನುಕೂಲವಾಗುತ್ತದೆ ಎನ್ನುತ್ತಾರೆ ಸಂಸ್ಥೆ ಅಧ್ಯಕ್ಷ ರೋಹನ್‌ ಕುಮಾರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT