ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಿದ್ದರಾಮಯ್ಯ ಎಲ್ಲೇ ಇದ್ದರೂ ತಣ್ಣಗಿರಲಿ’

ಗೃಹಲಕ್ಷ್ಮಿ ಹಣದಿಂದ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿಕೊಂಡೆ: ಮನದಾಳ ಬಿಚ್ಚಿಟ್ಟ ಫಲಾನುಭವಿಗಳು
Published : 11 ಸೆಪ್ಟೆಂಬರ್ 2024, 15:57 IST
Last Updated : 11 ಸೆಪ್ಟೆಂಬರ್ 2024, 15:57 IST
ಫಾಲೋ ಮಾಡಿ
Comments

ಬೀದರ್‌: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲೇ ಇದ್ದರೂ ತಣ್ಣಗಿರಲಿ. ಅವರು ಜಾರಿಗೆ ತಂದಿರುವ ಐದು ಗ್ಯಾರಂಟಿಗಳಿಂದ ನನ್ನಂತಹ ಬಡವಿಗೆ ಬಹಳ ಅನುಕೂಲವಾಗಿದೆ...’

ಜಿಲ್ಲಾ ಪಂಚಾಯಿತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜೊತೆಗೆ ಬುಧವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಬೀದರ್‌ ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಜಗದೇವಿ ಅವರ ಮನದಾಳದ ಮಾತು. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್ ಅವರು ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅನುಭವಗಳನ್ನು ಆಲಿಸಿದರು.

‘ನನ್ನ ಗಂಡ ನಿಧನರಾಗಿ ಹಲವು ವರ್ಷಗಳಾಗಿವೆ. ಮಗಳು ಕಾಲೇಜಿಗೆ ಹೋಗುತ್ತಾಳೆ. ಗೃಹಲಕ್ಷ್ಮಿ ಹಣದಿಂದ ಅವಳ ಓದಿಗೆ ಬಹಳ ಅನುಕೂಲವಾಗಿದೆ. ಕಾಲೇಜಿಗೆ ಹೋಗಿ ಬರಲು ಉಚಿತವಾಗಿ ಬಸ್‌ ವ್ಯವಸ್ಥೆ ಮಾಡಿದ್ದಾರೆ. ರೇಷನ್‌ ಕೊಡುತ್ತಿದ್ದಾರೆ. ಕರೆಂಟ್‌ ಬಿಲ್‌ ತುಂಬುವ ಅಗತ್ಯವಿಲ್ಲ. ನನ್ನಂತಹ ಬಡ ಹೆಣ್ಣು ಮಗಳಿಗೆ ಮನೆ ನಡೆಸುವುದು ಕಷ್ಟ. ಗ್ಯಾರಂಟಿ ಯೋಜನೆಗಳಿಂದ ಕಷ್ಟಗಳೆಲ್ಲ ದೂರವಾಗಿದೆ. ಸಿದ್ದರಾಮಯ್ಯನವರು ಎಲ್ಲೇ ಇದ್ದರೂ ತಣ್ಣಗಿರಲಿ’ ಎಂದು ಜಗದೇವಿ ಭಾವುಕರಾಗಿ ಮಾತು ಮುಗಿಸಿದರು.

ಬೀದರ್‌ನ ಗೌರಮ್ಮ ಮಾತನಾಡಿ, ‘ನಾನು ಗರ್ಭಕೋಶದ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲಾಗಿದ್ದೆ. ಯಾರೊಬ್ಬರೂ ನನ್ನನ್ನು ನೋಡಲು ಬರಲಿಲ್ಲ. ಯಾರೂ ಸಹಾಯ ಮಾಡಲಿಲ್ಲ. ನಾನು ಕೂಡಿಟ್ಟಿದ್ದ ಗೃಹಲಕ್ಷ್ಮಿ ಹಣದಿಂದ ಆಸ್ಪತ್ರೆಯ ಬಿಲ್‌ ಪಾವತಿಸಿದೆ’ ಎಂದು ಹೇಳಿದಾಗ ಇಡೀ ಸಭಾಂಗಣ ಕೆಲಕಾಲ ಮೌನಕ್ಕೆ ಜಾರಿತ್ತು.

ಬೀದರ್‌ ತಾಲ್ಲೂಕಿನ ಮಲಕಾಪುರ ಗ್ರಾಮದ ಸಂಗಪ್ಪ ಮಾತನಾಡಿ, ‘ಮೊದಲು ಕರೆಂಟ್‌ ಬಿಲ್‌ ತಿಂಗಳಿಗೆ ₹800ರಿಂದ ₹1 ಸಾವಿರ ಬರುತ್ತಿತ್ತು. ಈಗ ಬಿಲ್‌ ಸೊನ್ನೆ ಬರುತ್ತಿದೆ. ಆ ಹಣವನ್ನು ನನ್ನ ಮಕ್ಕಳ ಶಾಲೆಯ ಆಟೊ ಚಾರ್ಜ್‌ಗೆ ಸಹಾಯವಾಗುತ್ತಿದೆ’ ಎಂದರು.

ಚಿಟಗುಪ್ಪ ತಾಲ್ಲೂಕಿನ ಮನ್ನಾಏಖೆಳ್ಳಿ ಗ್ರಾಮದ ಸುಮಲತಾ, ‘ನಾನು ಬೀದರ್‌ನ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತೇನೆ. ಮಕ್ಕಳು ಬೀದರ್‌ನಲ್ಲಿಯೇ ಓದುತ್ತಾರೆ. ಉಚಿತ ಬಸ್‌ ವ್ಯವಸ್ಥೆಯಿಂದ ತಿಂಗಳಿಗೆ ಮೂರ್ನಾಲ್ಕು ಸಾವಿರ ಉಳಿತಾಯವಾಗುತ್ತಿದೆ. ಆದರೆ, ಬಸ್‌ಗಳಲ್ಲಿ ಜಾಸ್ತಿ ರಶ್‌ ಆಗಿ ಸಮಸ್ಯೆಯಾಗುತ್ತಿದೆ. ಹೆಚ್ಚಿನ ಬಸ್‌ಗಳನ್ನು ಬಿಡಬೇಕು’ ಎಂದು ಮನವಿ ಮಾಡಿದರು.

ಫಲಾನುಭವಿಗಳ ಮಾತು ಆಲಿಸಿದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಆರ್. ಮೆಹರೋಜ್ ಖಾನ್ ಮಾತನಾಡಿ, ‘ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಮಹಿಳೆಯರು ಸಬಲರಾದಾಗ ಕುಟುಂಬಕ್ಕೆ ಶಕ್ತಿ ಬರುತ್ತದೆ. ಯಾರಾದರೂ ಯೋಜನೆಯಿಂದ ಬಿಟ್ಟು ಹೋದರೆ ಅಂತಹವರ ಹೆಸರು ನೋಂದಣಿ ಮಾಡಿಸಿ ಲಾಭ ದೊರಕಿಸಿಕೊಡಬೇಕು’ ಎಂದು ಸೂಚಿಸಿದರು.

ಯುವನಿಧಿ ಯೋಜನೆಯಡಿ ನನಗೆ ಆರಂಭದ ಎರಡು ತಿಂಗಳು ಹಣ ಬಂದಿದೆ. ಆನಂತರ ಬಂದಿಲ್ಲ. ಸಮಸ್ಯೆ ಬಗೆಹರಿಸಿ.
ಸಚಿನ್‌, ಬಿಕಾಂ ಪದವೀಧರ ಬೀದರ್‌
ನನಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಹಿಂದೆ ಬಸ್‌ ಪಾಸಿಗಾಗಿ ಒದ್ದಾಡಬೇಕಿತ್ತು. ಉಚಿತ ಪ್ರಯಾಣದಿಂದ ಬಹಳ ಅನುಕೂಲವಾಗಿದೆ.
ಮಂಜುಳಾ ಬಂಬುಳಗಿ, ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT