ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | 25 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಡಿಎ, ಎಫ್‌ಡಿಎ ಪರೀಕ್ಷೆ

ಪೂರ್ಣ ತೋಳಿನ ಅಂಗಿ, ಜೀನ್ಸ್‌, ಶೂ ನಿಷೇಧ; ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗೂ ನಿರ್ಬಂಧ
Published 26 ಅಕ್ಟೋಬರ್ 2023, 13:42 IST
Last Updated 26 ಅಕ್ಟೋಬರ್ 2023, 13:42 IST
ಅಕ್ಷರ ಗಾತ್ರ

ಬೀದರ್‌: ‘ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ಅ. 29ರಂದು ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ತಿಳಿಸಿದರು.

ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಪರೀಕ್ಷೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಪರೀಕ್ಷೆಯ ದಿನದಂದು ಪುರುಷ ಅಭ್ಯರ್ತಿಗಳು ಪೂರ್ಣ ತೋಳಿನ ಅಂಗಿ ಧರಿಸಿಕೊಂಡು ಹಾಜರಾಗುವಂತಿಲ್ಲ. ಜೇಬುಗಳು ಇಲ್ಲದಿರುವ ಅಥವಾ ಕಮ್ಮಿ ಜೇಬುಗಳಿರುವ ಉಡುಪು ಧರಿಸಬೇಕು. ಕುರ್ತಾ ಪೈಜಾಮ, ಜೀನ್ಸ್‌ ಪ್ಯಾಂಟ್‌ ಧರಿಸುವಂತಿಲ್ಲ. ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸ್ಯಾಂಡಲ್‌ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸಬಹುದು. ಕಿವಿಯೋಲೆ, ಉಂಗುರ ಮತ್ತು ಕಡಗ ಧರಿಸುವುದು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ, ಚಪ್ಪಲಿಗಳನ್ನಾಗಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯ. ಲೋಹದ ಆಭರಣಗಳನ್ನು ಯಾವುದೇ ಕಾರಣಕ್ಕೂ ಮಹಿಳಾ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಧರಿಸಬಾರದು. ಹಿಜಾಬ್ ಧರಿಸಿದ್ದಲ್ಲಿ ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚಿತವಾಗಿ ಬಂದು ತಪಾಸಣೆಗೆ ಒಳ ಪಡಬೇಕಾಗುತ್ತದೆ ಎಂದು ಹೇಳಿದರು.

ಎಲೆಕ್ಟ್ರಾನಿಕ್‌ ವಸ್ತುಗಳಾದ ಮೊಬೈಲ್, ಪೆನ್‌ಡ್ರೈವ್‌, ಇಯರ್ ಫೋನ್‌, ಮೈಕ್ರೋಫೋನ್‌, ಬ್ಲೂಟೂತ್‌ ಸಾಧನಗಳು, ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವಂತಿಲ್ಲ. ತಿಂಡಿ ತಿನಿಸುಗಳಿಗೂ ಅವಕಾಶ ಇಲ್ಲ. ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್‌, ಲಾಗ್‌ಟೇಬಲ್‌ಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ. ಟೋಪಿ, ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ವಸ್ತು ತರುವಂತಿಲ್ಲ. ಮಾಸ್ಕ್‌ ಕೂಡ ಬಳಸುವಂತಿಲ್ಲ ಎಂದು ತಿಳಿಸಿದರು.

ಎಲ್ಲಾ ಅಭ್ಯರ್ಥಿಗಳು ಪ್ರವೇಶ ಪತ್ರದೊಂದಿಗೆ ಹಾಜರಾಗಬೇಕು. ಇತ್ತೀಚಿನ ಎರಡು ಪಾಸ್ ಪೋರ್ಟ್ ಅಳತೆಯ ಚಿತ್ರಗಳು, ಸರ್ಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿಗಳಾದ ಕಾಲೇಜಿನ ಐ.ಡಿ, ಬಸ್‌ಪಾಸ್, ಡ್ರೈವಿಂಗ್ ಲೈಸನ್ಸ್, ಪಾಸ್‌ಪೊರ್ಟ್, ಆಧಾರ ಕಾರ್ಡ್, ಪಾನ್‌ ಕಾರ್ಡ್ ತರುವುದು ಕಡ್ಡಾಯ. ಪಾರದರ್ಶಕವಾದ (ಲೇಬಲ್ ರಹಿತ) ಕುಡಿಯುವ ನೀರಿನ ಬಾಟಲ್‌ಗಳನ್ನು ತರಬಹುದು. ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೆ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ ಎಂದು ಹೇಳಿದರು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ದಿ ನಿಗಮ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ನಿಗಮ ನಿಯಮಿತ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಬೀದರ್‌ ನಗರದ 16, ಭಾಲ್ಕಿಯಲ್ಲಿ 6, ಬಸವಕಲ್ಯಾಣದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಡಿವೈಎಸ್ಪಿ ಶಿವನಗೌಡ ಪಾಟೀಲ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ತಹಶೀಲ್ದಾರರು,, ಬಿಒಗಳು ಮತ್ತು ಪರೀಕ್ಷೆಗೆ ನಿಯೋಜಿತ ವಿವಿಧ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಹಾಜರಿದ್ದರು.

ಪರೀಕ್ಷಾ ಸಮಯ ಹೀಗಿದೆ... ಅಕ್ಟೋಬರ್ 29 ರಂದು ದ್ವಿತೀಯ ದರ್ಜೆ ಸಹಾಯಕರು ಮತ್ತು ಕಿರಿಯ ಸಹಾಯಕರು ಮುಂತಾದ ಸಮನಾದ ಹುದ್ದೆಗಳಿಗೆ ಪತ್ರಿಕೆ 1 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30ರ ವರೆಗೆ ಪತ್ರಿಕೆ 2 ಮಧ್ಯಾಹ್ನ 2.30 ರಿಂದ ಸಂಜೆ 4.30 ರ ವರೆಗೆ ನಡೆಯಲಿವೆ. ಸದರಿ ಪರೀಕ್ಷೆಗಳಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಈಗಾಗಲೇ ಲಿಂಕ್‌ ಪ್ರಕಟಿಸಲಾಗಿದ್ದು ಅಭ್ಯರ್ಥಿಗಳು ಅದರ ಮೂಲಕ ಪಡೆಯಬಹುದು. ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವ ಕಾರಣ ಒಂದಕ್ಕಿಂತ ಹೆಚ್ಚು ಪ್ರವೇಶ ಪತ್ರಗಳು ಬಿಡುಗಡೆಯಾಗಿರುತ್ತವೆ. ಅದರೆ ಕೆಲವು ಅಭ್ಯರ್ಥಿಗಳಿಗೆ ಒಂದೇ ದಿನ ಒಂದೇ ಅವಧಿಯಲ್ಲಿ ಎರಡು ಪ್ರತ್ಯೇಕ ಜಿಲ್ಲೆಗಳಲ್ಲಿ ಅಥವಾ ಪ್ರತ್ಯೇಕ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆಯಲು ಪ್ರವೇಶ ಪತ್ರ ಡೌನಲೋಡ್ ಆಗಿರುತ್ತದೆ. ಇಂತಹ ಅಭ್ಯರ್ಥಿಗಳು ಮಾತ್ರ ಯಾವುದಾದರೂ ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆಯತಕದ್ದು. ಹೆಚ್ಚುವರಿ ಪ್ರವೇಶ ಪತ್ರವನ್ನು ಪರೀಕ್ಷೆ ತೆಗೆದುಕೊಳ್ಳುವ ಕೇಂದ್ರದ ಕೊಠಡಿ ಮೇಲ್ವಿಚಾಕರಿಗೆ ಒಪ್ಪಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT