ಶುಕ್ರವಾರ, ನವೆಂಬರ್ 27, 2020
22 °C
ಸಾಧಕರ ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅಭಿಮತ

ಸೇವೆಯೇ ಎಲ್ಲಕ್ಕಿಂತ ಶ್ರೇಷ್ಠ ಕಾರ್ಯ: ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಸೇವೆಯೇ ಎಲ್ಲಕ್ಕಿಂತ ಶ್ರೇಷ್ಠ ಕಾರ್ಯವಾಗಿದೆ. ಸಂಕಷ್ಟದಲ್ಲಿ ಇರುವವರ ನೆರವಿಗೆ ಬರುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾ ದರೆ ಅನೇಕರ ಬಾಳು ಹಸನು ಆಗುತ್ತದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅಭಿಪ್ರಾಯಪಟ್ಟರು.

ರೋಟರಿ ಕ್ಲಬ್ ಆಫ್‌ ಬೀದರ್ ವತಿಯಿಂದ ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಪ್ರತಿಭಾವಂತ ವಿದ್ಯಾರ್ಥಿಗಳ, ಎಂಜಿನಿಯರ್ ಹಾಗೂ ಸಾಧಕ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ತಮ್ಮ ನಿತ್ಯದ ಕರ್ತವ್ಯ, ವೈಯಕ್ತಿಕ ಕೆಲಸಕಾರ್ಯಗಳ ನಡುವೆಯೂ ಸಮಾಜ ಸೇವೆಗಾಗಿ ಒಂದಿಷ್ಟು ಸಮಯ ಕೊಟ್ಟರೆ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತರಲು ಸಾಧ್ಯವಿದೆ’ ಎಂದು ಹೇಳಿದರು.

‘ವಿಶ್ವದಾದ್ಯಂತ ರೋಟರಿ ಕ್ಲಬ್‍ನಿಂದ ನಿರಂತರ ವಿವಿಧ ಚಟುಟಿಕೆಗಳು ನಡೆಯುತ್ತಿವೆ. ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಿಗೆ ರೋಟರಿ ಟೀಮ್ ಅಪರೂಪದ ಕೊಡುಗೆ ನೀಡುತ್ತಿದೆ. ಎಲ್ಲರ ಸಹಯೋಗ, ಸಹಭಾಗಿತ್ವದೊಂದಿಗೆ ರೋಟರಿ ಸಂಸ್ಥೆಗಳಿಂದ ನಡೆಯುತ್ತಿರುವ ವಿವಿಧ ಕೆಲಸಗಳು ಮಾದರಿಯಾಗಿವೆ’ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಆಫ್‌ ಬೀದರ್ ಘಟಕದ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಮಾತನಾಡಿ, ‘ವಿಶ್ವದ 200 ದೇಶಗಳಲ್ಲಿ ರೋಟರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. 12 ಲಕ್ಷಕ್ಕೂ ಹೆಚ್ಚು ಸದಸ್ಯರು ಸಕ್ರಿಯವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.

‘ಪೋಲಿಯೊ ನಿರ್ಮೂಲನೆ ಸೇರಿ ವಿವಿಧ ಸಮಸ್ಯೆ ನಿವಾರಿಸುವಲ್ಲಿ ರೋಟರಿ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ. ಬರುವ ದಿನಗಳಲ್ಲಿ ಜಿಲ್ಲಾಡಳಿತ ಸಹಯೋಗದಲ್ಲಿ ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ಮಾತನಾಡಿ, ‘ಶೈಕ್ಷಣಿಕವಾಗಿ ಬೀದರ್ ಅಭಿವೃದ್ಧಿ ಹೊಂದುತ್ತಿರುವುದು ಸಂತಸದ ಸಂಗತಿ. ಅನೇಕ ಶಿಕ್ಷಣ ಸಂಸ್ಥೆಗಳ, ಶಿಕ್ಷಕರ ಕಾರ್ಯ ಸ್ಮರಣೀಯವಾಗಿದೆ. ಸಮಯೋಚಿತ ಮಾರ್ಗದರ್ಶನ, ನಿರಂತರ ಸಹಕಾರದ ಫಲವಾಗಿ ಬೀದರ್ ಜಿಲ್ಲೆಯ ಹೆಸರು ಇಂದು ಎಲ್ಲೆಡೆ ಪಸರಿಸಲು ಸಾಧ್ಯವಾಗಿದೆ’ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಡಾ. ಜಗದೀಶ ಪಾಟೀಲ, ಹಿರಿಯ ರೋಟೆರಿಯನ್ ಕೆ.ಸಿ.ಸೇನನ್, ಬಸವರಾಜ ಧನ್ನೂರ್, ಪ್ರಕಾಶ ಟೊಣ್ಣೆ, ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ರವಿ ಮೂಲಗೆ, ರೋಟರಿ ಕಾರ್ಯದರ್ಶಿ ರಂಜೀತ ಪಾಟೀಲ, ಕೋಶಾಧ್ಯಕ್ಷ ಭಗವಂತಪ್ಪ ಇದ್ದರು.

ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ ಪಡೆದ ಕಾರ್ತಿಕ್ ರೆಡ್ಡಿ ಸೇರಿದಂತೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ
ಸಾಧನೆ ಮಾಡಿದ ವಿದ್ಯಾರ್ಥಿಗಳು ಉತ್ತಮ ಸೇವೆಗೈದ ಶಿಕ್ಷಕರು, ನಿವೃತ್ತ ಎಂಜಿನಿಯರ್‌ಗಳಿಗೆ ಸನ್ಮಾನ ಮಾಡಲಾಯಿತು. ಬೆಳಗು ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ಕಲಾವಿದರಿಂದ ಸಂಗೀತ ಸಂಜೆ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.