ಬುಧವಾರ, ಸೆಪ್ಟೆಂಬರ್ 22, 2021
24 °C

ಕೋವಿಡ್ ತಪಾಸಣೆಗೆ ಶಾಹೀನ್‍ನಿಂದ ಸ್ವಯಂ ಸೇವಕರ ತಂಡ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಆಡಳಿತದೊಂದಿಗೆ ಕೋವಿಡ್ ತಡೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಇಲ್ಲಿಯ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು ಇದೀಗ ಕೋವಿಡ್ ಲಕ್ಷಣ ಕಂಡು ಬರುವವರ ತಪಾಸಣೆಗಾಗಿ ಸ್ವಯಂ ಸೇವಕರ ತಂಡವೊಂದನ್ನು ರಚಿಸಿದೆ.

ಸಂಸ್ಥೆಯು ಅಲ್ ಹಮ್ದ್ ಟ್ರಸ್ಟ್ ಹಾಗೂ ಮೆಸ್ಕೊ ಸಹಯೋಗದಲ್ಲಿ ಬೀದರ್ ಕೋವಿಡ್ ವಾರಿಯರ್ಸ್ ಬೂತ್ ವೈಸ್ ವೊಲಂಟಿಯರ್ಸ್ ಗ್ರುಪ್ ರಚನೆ ಮಾಡಿದೆ.

ಈಗಾಗಲೇ 46 ಬೂತ್‍ಗಳ ತಲಾ ಒಬ್ಬರು ಸ್ವಯಂ ಸೇವಕರಿಗೆ ಒಟ್ಟು ₹ 2,500 ಮೌಲ್ಯದ ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್, ಫೇಸ್ ಶೀಲ್ಡ್, ಎನ್ 95 ಮಾಸ್ಕ್, ಕೈಗಸು, ವೆಟ್ ಟಿಶ್ಯೂ ಪೇಪರ್, ಹ್ಯಾಂಡ್ ವಾಶ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಒಳಗೊಂಡ ‘ಕೋವಿಡ್ ಫಸ್ಟ್ ಏಡ್ ಕಿಟ್’ ವಿತರಿಸಿದೆ.

ಸ್ವಯಂ ಸೇವಕರು ಮೊದಲು ಕೋವಿಡ್ ಲಕ್ಷಣ ಕಾರಣಕ್ಕೆ ತಮ್ಮನ್ನು ಸಂಪರ್ಕಿಸುವವರ ದೇಹದ ಉಷ್ಣಾಂಶ, ಆಮ್ಲಜನಕ ತಪಾಸಣೆ ಮಾಡಲಿದ್ದಾರೆ. ಆನ್‍ಲೈನ್‍ನಲ್ಲಿ ವೈದ್ಯರೊಂದಿಗೆ ಮಾತುಕತೆಗೆ ಅವಕಾಶ ಕಲ್ಪಿಸಲಿದ್ದಾರೆ. ಅವಶ್ಯಕತೆ ಇರುವವರಿಗೆ ವೈದ್ಯರನ್ನು ಕಾಣಲು ಸಲಹೆ ನೀಡಲಿದ್ದಾರೆ. ತುರ್ತು ಸಂದರ್ಭದಲ್ಲಿ ಆಂಬುಲನ್ಸ್ ವ್ಯವಸ್ಥೆಯನ್ನೂ ಮಾಡಲಿದ್ದಾರೆ.

ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅನೇಕರು ಸೋಂಕಿನ ಲಕ್ಷಣಗಳು ಕಂಡು ಬಂದರೂ ತಪಾಸಣೆಗೆ ಹಿಂಜರಿಯುತ್ತಿದ್ದಾರೆ. ಅಂಥವರ ಪ್ರಾಥಮಿಕ ತಪಾಸಣೆಗಾಗಿ ಬೀದರ್ ಕೋವಿಡ್ ವಾರಿಯರ್ಸ್ ಬೂತ್ ವೈಸ್ ವೊಲಂಟಿಯರ್ ಗ್ರುಪ್ ರಚಿಸಲಾಗಿದೆ ಎಂದು ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ತಿಳಿಸಿದ್ದಾರೆ.

ನಗರದ ಎಲ್ಲ 167 ಬೂತ್‍ಗಳಿಗೂ ತಲಾ ಒಬ್ಬರು ಸ್ವಯಂ ಸೇವಕರನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಸ್ವಯಂ ಪ್ರೇರಣೆಯಿಂದ ಮುಂದೆ ಬಂದ 46 ಬೂತ್‍ಗಳ ತಲಾ ಒಬ್ಬರು ಸ್ವಯಂ ಸೇವಕರಿಗೆ ಈಗಾಗಲೇ ಕೋವಿಡ್ ಫಸ್ಟ್ ಏಡ್ ಕಿಟ್ ವಿತರಿಸಲಾಗಿದೆ. ಉಳಿದ ಬೂತ್‍ಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಬಯಸುವವರು ಅಬ್ರಾಹರ್ ಅವರ ಮೊಬೈಲ್ ಸಂಖ್ಯೆ 8125553525ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಮಹಾಮಾರಿ ಕೋವಿಡ್ ವಿಶ್ವವನ್ನೇ ತಲ್ಲಣಗೊಳಿಸಿದೆ. ಹೀಗಾಗಿ ಸೋಂಕಿನ ಲಕ್ಷಣ ಕಂಡು ಬರುವವರು ಯಾವುದೇ ಹಿಂಜರಿಕೆ ಇಲ್ಲದೇ ತಕ್ಷಣ ತಪಾಸಣೆಗೆ ಒಳಗಾಗಬೇಕು. ಕೊನೆಯ ಹಂತದಲ್ಲಿ ತಪಾಸಣೆ ಮಾಡಿಕೊಳ್ಳುವುದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೇ ಹೆಚ್ಚು ಎಂದು ತಿಳಿಸಿದ್ದಾರೆ.

ಕೋವಿಡ್ ತಡೆಗೆ ಸರ್ಕಾರ ಎಲ್ಲ ಬಗೆಯ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ, ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಸೋಂಕನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಿದೆ. ಹೀಗಾಗಿ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಸರ್ಕಾರದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಈ ಮೂಲಕ ಸೋಂಕು ನಿರ್ಮೂಲನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು ಹಿಂದಿನಿಂದಲೂ ಸಾಮಾಜಿಕ ಚಟಿವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಜನರ ನೆರವಿಗೆ ಧಾವಿಸಿದೆ. ಕೋವಿಡ್ ನಿಯಂತ್ರಣಕ್ಕಾಗಿ ನಡೆಯುವ ಎಲ್ಲ ಪ್ರಯತ್ನಗಳಿಗೆ ಅಗತ್ಯ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು