ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಲ್ಲಿ ಸಿಲುಕಿದ ಬೀದರ್‌ ಜಿಲ್ಲೆಯ ಆರು ವಿದ್ಯಾರ್ಥಿಗಳು: ಪೋಷಕರಲ್ಲಿ ಆತಂಕ

Last Updated 28 ಫೆಬ್ರುವರಿ 2022, 3:06 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಒಟ್ಟು ಆರು ವಿದ್ಯಾರ್ಥಿಗಳು ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ.

ಮೂವರು ವಿದ್ಯಾರ್ಥಿಗಳು ಒಂದೆಡೆ, ಇಬ್ಬರು ವಿದ್ಯಾರ್ಥಿಗಳು ಇನ್ನೊಂದೆಡೆ ಹಾಗೂ ಇನ್ನೊಬ್ಬ ವಿದ್ಯಾರ್ಥಿ ಬೇರೆಡೆ ಇದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದು, ರಾಯಭಾರಿ ಕಚೇರಿಯ ಸಂಪರ್ಕದಲ್ಲಿದ್ದಾರೆ.

ನಗರದ ಮಂಗಲಪೇಟ್‌ ಪೊಲೀಸ್‌ ಕಾಲೊನಿಯ ಅಮಿತ್‌ ಚಂದ್ರಕಾಂತ ಸಿರಂಜೆ, ಬಸವಕಲ್ಯಾಣ ತಾಲ್ಲೂಕಿನ ನಾರಾಯಪುರದ ಎಂಬಿಬಿಎಸ್ ವಿದ್ಯಾರ್ಥಿನಿ ವೈಷ್ಣವಿ ವಿಷ್ಣುರೆಡ್ಡಿ ಪಾಟೀಲ, ಸಿದ್ದರಾಮಯ್ಯ ಬಡಾವಣೆಯ ವಿವೇಕಾನಂದ ವೈಜಿನಾಥ ಮಡಕೆ ಹಾಗೂ ಜನವಾಡ ರಸ್ತೆಯಲ್ಲಿರುವ ಸಿದ್ಧಾರ್ಥ ಪದವಿ ಕಾಲೇಜು ಪ್ರಾಚಾರ್ಯ ವಿಜಯಕುಮಾರ ಅವರ ಪುತ್ರ ಶಶಾಂಕ ದೊಡ್ಡಗಾಣಿಗೇರ್ ತಾಯ್ನಾಡಿಗೆ ಬರಲು ರಾಯಭಾರಿ ಕಚೇರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಖಾರ್ಕಿವ್ ನ್ಯಾಷನಲ್‌ ಮೆಡಿಕಲ್ ವಿಶ್ವವಿದ್ಯಾಲಯದ ಮೊದಲನೇ ವರ್ಷದ ವೈದ್ಯಕೀಯ ಕೋರ್ಸ್‌ ಓದುತ್ತಿರುವ ವಿವೇಕಾನಂದ ಮಡಕೆ, ಶಶಾಂಕ ವಿಜಯಕುಮಾರ ಹಾಗೂ ವೈಷ್ಣವಿ ವಿಷ್ಣುರೆಡ್ಡಿ ಪಾಟೀಲ ವಿಶ್ವವಿದ್ಯಾಲಯ ಹಾಸ್ಟೆಲ್‌ನಲ್ಲಿ ಇದ್ದಾರೆ. ಮೂವರು ವಿದ್ಯಾರ್ಥಿಗಳು ಪಾಲಕರೊಂದಿಗೆ ಸತತ ಸಂರ್ಪರ್ಕದಲ್ಲಿದ್ದಾರೆ. ಬೀದರ್‌ನ ವಿದ್ಯಾರ್ಥಿಗಳಾದ ಪ್ರಜ್ವಲ್‌ ಹಿಪ್ಪರಗಿ ಹಾಗೂ ಮನೋಜ್‌ ಅವರೂ ಸುರಕ್ಷಿತವಾಗಿರುವ ಮಾಹಿತಿ ಇದೆ.

ಐದು ವಿದ್ಯಾರ್ಥಿಗಳು ಜೆ.ಬಿ ಹಾಸ್ಟೆಲ್‌ ಬಂಕರ್‌ನಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ಹಾಸ್ಟೆಲ್‌ನ ನೆಲ ಮಳಿಗೆಯಲ್ಲಿ ಇದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಜಿಲ್ಲಾ ಹೆಚ್ಚುವರಿ ‍ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ತಿಳಿಸಿದ್ದಾರೆ.

‘ಖಾರ್ಕಿವ್‌ನಲ್ಲಿರುವ ಹಾಸ್ಟೆಲ್‌ಗೆ ಲಾಕ್‌ ಮಾಡಲಾಗಿದೆ. ಹೀಗಾಗಿ ಬಂಕರ್‌ನಲ್ಲಿ ಉಳಿದುಕೊಂಡಿದ್ದೇವೆ. ಖಾರ್ಕಿವ್ ಚಿಲ್ಡ್ರನ್ಸ್‌ ಗ್ರೂಪ್ ಮಾಡಿಕೊಂಡಿದ್ದಾರೆ. ಈ ಮೂಲಕ ಪಾಲಕರಿಗೆ ಸಂದೇಶ ಕಳಿಸುತ್ತಿದ್ದಾರೆ. ನನ್ನ ಪುತ್ರ ಶಶಾಂಕ ಸೇರಿ ಕೆಲವರು ಬೆಳಿಗ್ಗೆ ಬಂಕರ್‌ನಿಂದ ಹೊರಗೆ ಬಂದು ಅಡುಗೆ ಮಾಡಿ ಸೇವಿಸಿ ಮತ್ತೆ ಬಂಕರ್‌ನಲ್ಲಿ ಕುಳಿತಿದ್ದಾರೆ’ ಎಂದು ಸಿದ್ಧಾರ್ಥ ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ದೊಡ್ಡಗಾಣಿಗೇರ ತಿಳಿಸಿದರು.

‘ಜಿಲ್ಲೆಯ ವಿದ್ಯಾರ್ಥಿಗಳು ನೆಲೆಸಿರುವ ಪ್ರದೇಶದಲ್ಲಿ ತ್ವೇಷಮಯ ವಾತಾವರಣ ಇದೆ. ಅಲ್ಲಿಂದ 500 ಮೀಟರ್‌ ಅಂತರದಲ್ಲಿ ಇರುವ ಒಂದು ದೊಡ್ಡ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ. ರಾಕೆಟ್‌ ದಾಳಿ ಮುಂದುವರಿದಿದೆ. ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತರಲು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸತತ ಪ್ರಯತ್ನ ನಡೆಸಿದ್ದಾರೆ’ ಎಂದರು.

’ಉಕ್ರೇನ್‌ನಲ್ಲಿ ಗುಣಮಟ್ಟದ ಶಿಕ್ಷಣ ಇದೆ. ಒಂದು ತರಗತಿಯಲ್ಲಿ 15 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ವ್ಯಕ್ತಿತ್ವ ವಿಕಸನ ಸೇರಿದಂತೆ ಸಮಗ್ರ ಶಿಕ್ಷಣ ನೀಡಲಾಗುತ್ತದೆ. ನೀಟ್‌ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ದೊರಕದು. ಪೇಮೆಂಟ್‌ ಸೀಟ್‌ನಲ್ಲಿ ಎಂಬಿಬಿಎಸ್‌ ಮಾಡಿಸಲು ಇಲ್ಲಿ ₹ 1 ಕೋಟಿ ವರೆಗೂ ಖರ್ಚಾಗುತ್ತದೆ. ಆದರೆ, ಉಕ್ರೇನ್‌ಲ್ಲಿ ₹ 30 ಲಕ್ಷದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯ. ಹೀಗಾಗಿ ಅಧ್ಯಯನಕ್ಕೆ ಅಲ್ಲಿ ನನ್ನ ಪುತ್ರನನ್ನು ಕಳಿಸಿದ್ದೇನೆ‘ ಎಂದರು.

ತಹಶೀಲ್ದಾರ್ ಸಾವಿತ್ರಿ ಸಲಗರ ಅವರು ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದ ಎಂಬಿಬಿಎಸ್ ವಿದ್ಯಾರ್ಥಿನಿ ವೈಷ್ಣವಿ ವಿಷ್ಣುರೆಡ್ಡಿ ಪಾಟೀಲ ಅವರೊಂದಿಗೆ ಮಾತನಾಡಿ ಧೈರ್ಯ ತುಂಬಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT