ಬುಧವಾರ, ಸೆಪ್ಟೆಂಬರ್ 29, 2021
21 °C
ಪ್ರಕೃತಿಯ ವಿಸ್ಮಯ ವೀಕ್ಷಿಸಿ ಸಂಭ್ರಮಿಸಿದ ಮಕ್ಕಳು

ಸೂರ್ಯಗ್ರಹಣ: ಬೀದರ್ ಅಘೋಷಿತ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಶಿಕ್ಷಣ ಸಂಸ್ಥೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಒಂದು ವಾರದಿಂದ ಜಿಲ್ಲೆಯಲ್ಲಿ ಕಂಕಣ ಸೂರ್ಯಗ್ರಹಣ ಕುರಿತು ತಿಳಿವಳಿಕೆ ನೀಡಿದರೂ ಜಿಲ್ಲೆಯಲ್ಲಿ ಬಹಳಷ್ಟು ಜನ ಗುರುವಾರ ಮಧ್ಯಾಹ್ನದ ವರೆಗೆ ಮನೆಗಳಿಂದ ಹೊರಗೆ ಬರಲಿಲ್ಲ. ಗ್ರಹಣದ ಪ್ರಯುಕ್ತ ಬೀದರ್‌ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.

ಮಧ್ಯಾಹ್ನದ ವರೆಗೆ ನಗರದ ಬಹುತೇಕ ದೇಗಲುಗಳ ಬಾಗಿಲುಗಳು ಮುಚ್ಚಿದ್ದವು. ಮಧ್ಯಾಹ್ನದ ನಂತರ ದೇಗುಲಗಳಲ್ಲಿ ಶುದ್ಧಿ ಕಾರ್ಯ ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆದವು. ಮಹಿಳೆಯರು ಬೆಳಿಗ್ಗೆ ಮನೆಯಂಗಳದಲ್ಲಿ ರಂಗೋಲಿಯನ್ನೂ ಹಾಕಿರಲಿಲ್ಲ. ಬಹುತೇಕ ಜನರು ಟಿವಿಗಳ ಮುಂದೆ ಕುಳಿತುಕೊಂಡಿದ್ದರು.

ಸಾಮಾನ್ಯವಾಗಿ ಬೆಳಿಗ್ಗೆ 9 ಗಂಟೆ ವೇಳೆಗೆ ನಗರದ ಮಾರುಕಟ್ಟೆಯಲ್ಲಿ ಅಂಗಡಿ ಮುಂಗಟ್ಟುಗಳು ತೆರೆದುಕೊಳ್ಳುತ್ತವೆ. ಆದರೆ, ಗುರುವಾರ ಬೆಳಿಗ್ಗೆ 11 ಗಂಟೆಯ ವರೆಗೆ ಅನೇಕ ಹೋಟೆಲ್‌ಗಳ ಬಾಗಿಲುಗಳು ಮುಚ್ಚಿಕೊಂಡಿದ್ದವು. ಇದರಿಂದ ಪ್ರವಾಸಿಗರು ಹಾಗೂ ಹೊರಗಡೆ ಉಪಾಹಾರ ಸೇವಿಸುವವರು ತೊಂದರೆ ಅನುಭವಿಸಬೇಕಾಯಿತು. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿ ತಡ ಮಾಡಿ ಕಚೇರಿಗೆ ಬಂದದ್ದು ಕಂಡು ಬಂದಿತ್ತು. ಜಿಲ್ಲಾಧಿಕಾರಿ, ತಹಶೀಲ್ದಾರ್‌ ಕಚೇರಿ, ನಗರಸಭೆ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲೂ ಜನ ಇರಲಿಲ್ಲ.

 

ಸರ್ಕಾರಿ ಶಾಲೆಗಳಿಗೆ ಎಳ್ಳ ಅಮಾವಾಸ್ಯೆಯ ನಿಮಿತ್ತ ರಜೆ ಘೋಷಿಸಲಾಗಿತ್ತು. ಗುರುವಾರ ಹಬ್ಬ ಇದ್ದರೂ ಗ್ರಹಣದ ಕಾರಣ ಬಹುತೇಕರು ಬುಧವಾರವೇ ಹಬ್ಬ ಆಚರಿಸಿದ್ದಾರೆ. ಕೆಲವರು ಅಮಾವಾಸ್ಯೆಯ ಮೊದಲೇ ಹಬ್ಬ ಆಚರಣೆ ಬೇಡ ಎಂದು ಶುಕ್ರವಾರಕ್ಕೆ ಮುಂದೂಡಿದ್ದಾರೆ.

 

ಸೂರ್ಯಗ್ರಹಣ ವೀಕ್ಷಣೆ:

ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಸ್ಕೂಲ್ ಆವರಣದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಸಂಘಟಕರು ಸೂರ್ಯಗ್ರಹಣ ವೀಕ್ಷಣೆಗೆ ಬಂದಿದ್ದ ಸಾರ್ವಜನಿಕರಿಗೆ 500 ಕನ್ನಡಕಗಳನ್ನು ವಿತರಿಸಿದರು. ಜೀಜಾಮಾತಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯ ಮೂಲಕ ಸಾರ್ವಜನಿಕರಿಗೆ ಸೂರ್ಯಗ್ರಹಣದ ಮಾಹಿತಿ ನೀಡಿದರು.

 

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಶಿವರಾಜ್ ಕಪಲಾಪೂರೆ ಹಾಗೂ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಮುಖ್ಯಸ್ಥ ಬಾಬುರಾವ್ ನೇತೃತ್ವ ವಹಿಸಿದ್ದರು.

ಜೀಜಾಮಾತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪರಮೇಶ್ವರ ಬಿರಾದಾರ ಇದ್ದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ವಿಜ್ಞಾನ ಕೇಂದ್ರ, ಭಾರತ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘ, ನ್ಯೂ ಮದರ್ ತೆರೆಸಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಬೀದರ್‌ನ ಅಂಬೇಡ್ಕರ್ ವೃತ್ತದಲ್ಲೂ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

 

ಡಿಡಿಪಿಐ ಎಚ್‌.ಆರ್. ಚಂದ್ರಶೇಖರ, ಬೀದರ್ ಬಿಇಒ ಗುಲ್ಶನ್, ವಿಜ್ಞಾನ ವಿಷಯ ಪರಿವೀಕ್ಷಕ ಗುಂಡಪ್ಪ ಹುಡಗೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಚಂದ್ರಪ್ಪ ಹೆಬ್ಬಾಳಕರ್, ಅಧ್ಯಕ್ಷ ದೇವಿಪ್ರಸಾದ ಕಲಾಲ, ಕಾರ್ಯದರ್ಶಿ ಮಹೇಶ ಗೋರನಾಳಕರ್‌, ಉಪಾಧ್ಯಕ್ಷ ರಫಿಕ್‌ ತಾಳಿಕೋಟಿ, ರಾಜ್ಯ ಸಮಿತಿ ಸದಸ್ಯ ಎಂ.ಎಸ್.ಮನೋಹರ್‌, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಾಬುರಾವ್‌ ದಾನಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಶಿವಕುಮಾರ ಕಟ್ಟೆ, ಟಿ.ಎ.ಮಚ್ಚೆ, ಡಾ.ಸಿ.ಆನಂದರಾವ್, ಶ್ರೀಕಾಂತ ಸ್ವಾಮಿ, ಸಾಹಿತಿ ಎಂ.ಜಿ. ಗಂಗನಪಳ್ಳಿ, ಶಂಭುಲಿಂಗ ವಾಲ್ದೊಡ್ಡಿ ಇದ್ದರು.

...........BOX1...............

ಮೌಢ್ಯ ಧಿಕ್ಕರಿಸಿ ಬಿರಿಯಾನಿ ಸೇವನೆ
ಬೀದರ್‌: ಮಾನವ ಬಂಧುತ್ವ ವೇದಿಕೆ, ಗೆಳೆಯರ ಬಳಗದವರು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಬೆಳಿಗ್ಗೆ ಕಂಕಣ ಸೂರ್ಯಗ್ರಹಣದ ವೇಳೆ ಚಿಕನ್‌ ಬಿರಿಯಾನಿ ತಿನ್ನುವ ಮೂಲಕ ಮೌಢ್ಯಾಚರಣೆಯನ್ನು ಧಿಕ್ಕರಿಸಿದರು.
ಎಂ.ಎಸ್‌.ಮನೋಹರ, ಮಹೇಶ ಗೋರನಾಳಕರ್, ಉಮೇಶ ಸ್ವಾರಳ್ಳಿಕರ್, ರಾಜರತನ ಶಿಂಧೆ, ಪವನ್‌ ಗುನ್ನಳ್ಳಿಕರ್‌ ಸಾರ್ವಜನಿಕ ಸ್ಥಳದಲ್ಲೇ ಬಿರಿಯಾನಿ ಸೇವಿಸಿ ಜಾಗೃತಿ ಮೂಡಿಸಿದರು.

...........BOX2............

ಬಾಳೆಹಣ್ಣು, ಉಪ್ಪಿಟ್ಟು ತಿಂದರು!
ಬೀದರ್‌: ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ನಗರದ ಸಾಯಿ ಸ್ಕೂಲ್ ಆವರಣದಲ್ಲಿ ಗ್ರಹಣ ವೀಕ್ಷಣೆಗೆ ಬಂದಿದ್ದವರಿಗೆ ಉಪ್ಪಿಟ್ಟು ವಿತರಿಸಲಾಯಿತು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ವಿಜ್ಞಾನ ಕೇಂದ್ರ, ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಬಾಳೆಹಣ್ಣು ಹಾಗೂ ಬಿಸ್ಕತ್‌ ವಿತರಿಸಲಾಯಿತು.

ಪ್ರಕೃತಿಯ ವಿದ್ಯಮಾನವನ್ನು ಸಹಜ ರೀತಿಯಲ್ಲಿ ಒಪ್ಪಿಕೊಳ್ಳಬೇಕು. ಯಾವುದೇ ರೀತಿಯ ಅಂಧಶ್ರದ್ಧೆಗೆ ಒಳಗಾಗಬಾರದು ಎಂದು ಸಂಘಟಕರು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು.

...........BOX3............

ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು
ಬೀದರ್: ಇಲ್ಲಿಯ ಓಲ್ಡ್‌ಸಿಟಿಯ ಮೆಹಮೂದ್‌ ಗವಾನ ಸ್ಮಾರಕದ ರಸ್ತೆಯಲ್ಲಿರುವ ಮರಕಜ್‌ ಮಸೀದಿಯಲ್ಲಿ ಮುಸ್ಲಿಮರು ಬೆಳಿಗ್ಗೆ 8.30ರಿಂದ 9.30ರ ವರೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗ್ರಹಣದ ಸಂದರ್ಭದಲ್ಲಿ ನಗರದ ಮಧ್ಯದಲ್ಲಿರುವ ಮರಕಜ್‌ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯ ಇದೆ. ಗ್ರಹಣದ ಆರಂಭವಾಗುವ ಮನ್ನ ಹಾಗೂ ಗ್ರಹಣದ ಮುಗಿದ ನಂತರ ಮುಸ್ಲಿಮರು ನೂರಾರು ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ವಿಶೇಷ ಪ್ರವಚನ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು