ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ವೀಸಾ ನಿರಾಕರಣೆ: ಚೀನಾ ಕ್ರಮಕ್ಕೆ ಭಾರತ ಪ್ರತಿಭಟನೆ

ಅರುಣಾಚಲ ಪ್ರದೇಶದ ಮೂವರು ವುಶು ಸ್ಪರ್ಧಿಗಳಿಗೆ ವೀಸಾ ನಕಾರ* ಅನುರಾಗ್ ಠಾಕೂರ್‌ ಚೀನಾ ಪ್ರವಾಸ ರದ್ದು
Published 22 ಸೆಪ್ಟೆಂಬರ್ 2023, 16:02 IST
Last Updated 22 ಸೆಪ್ಟೆಂಬರ್ 2023, 16:02 IST
ಅಕ್ಷರ ಗಾತ್ರ

ನವದೆಹಲಿ: ಹಾಂಗ್‌ ಝೌ ಏಷ್ಯನ್ ಗೇಮ್ಸ್‌ಗೆ ಭಾರತ ವುಶು ತಂಡದಲ್ಲಿದ್ದ ಅರುಣಾಚಲ ಪ್ರದೇಶದ ಮೂವರು ಮಹಿಳಾ ಸ್ಪರ್ಧಿಗಳಿಗೆ ವೀಸಾ ನಿರಾಕರಿಸಿರುವ ಚೀನಾದ ಕ್ರಮವನ್ನು ಭಾರತ ಶುಕ್ರವಾರ ಬಲವಾಗಿ ಖಂಡಿಸಿದೆ. ಪ್ರತಿಭಟನೆಯಾಗಿ ಹಾಂಗ್‌ ಝೌ ಕ್ರೀಡಾಕೂಟಕ್ಕೆ ತೆರಳಬೇಕಿದ್ದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಚೀನಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಮಹಿಳಾ ವುಶು ಪಟುಗಳಾದ ನ್ಯೇಮನ್ ವಾಂಗ್ಶು, ಒನಿಲು ತೇಗಾ ಮತ್ತು ಮೆಪುಂಗ್ ಲಮ್ಗು ಅವರಿಗೆ ಚೀನಾ ಮಾನ್ಯತಾ ಪತ್ರ (ಇದನ್ನು ವೀಸಾ ಆಗಿ ಪರಿಗಣಿಸಲಾಗುತ್ತದೆ) ನೀಡಿಲ್ಲ.

ಪ್ರತಿಭಟನೆ ದಾಖಲು:

ವೀಸಾ ನಿರಾಕರಣೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ತನ್ನ ಉಗ್ರ ಪ್ರತಿಭಟನೆಯನ್ನು ದಾಖಲಿಸಿದೆ. ತನ್ನ ಹಿತಾಸಕ್ತಿಗಳ ರಕ್ಷಣೆಗೆ ‘ಸೂಕ್ತ ಕ್ರಮಗಳನ್ನು’ ಕೈಗೊಳ್ಳುವ ಅಧಿಕಾರನ್ನು ಸರ್ಕಾರ ಹೊಂದಿದೆ ಎಂದೂ ಹೇಳಿದೆ.

ಚೀನಾದ ಈ ತಾರತಮ್ಯದ ಧೋರಣೆಯನ್ನು ಪ್ರತಿಭಟಿಸಿ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಉದ್ದೇಶಿತ ಚೀನಾ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

ಚೀನಾದ ಕ್ರಮವು ಕ್ರೀಡಾಪಟುಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವ ರೀತಿಯಲ್ಲಿದೆ. ಈ ಧೋರಣೆಯು ಕ್ರೀಡಾಕೂಟದ ಆಶಯಕ್ಕೆ ವಿರುದ್ಧವಾಗಿದೆ ಮತ್ತು ಸದಸ್ಯ ರಾಷ್ಟ್ರಗಳ ಕ್ರೀಡಾಪಟುಗಳ ವಿರುದ್ಧ ತಾರತಮ್ಯ ಮಾಡುವಂತಿಲ್ಲ ಎಂಬ ನಿಯಮಗಳನ್ನು ಉಲ್ಲಂಘಿಸಿದೆ’ ಎಂದು ಟೀಕಿಸಿದ್ದಾರೆ.

ಇದೇ ಮೊದಲಲ್ಲ:

ಚೀನಾದ ಈ ವರ್ತನೆ ಇದೇ ಮೊದಲನೆಯದಲ್ಲ. ಕಳೆದ ಜುಲೈನಲ್ಲಿ ಅದೇ ದೇಶದ ಚೆಂಗ್ಡುವಿನಲ್ಲಿ ನಡೆದ ವಿಶ್ವ ಯುನಿವರ್ಸಿಟಿ ಕ್ರೀಡಾಕೂಟಕ್ಕೆ ಭಾಗವಹಿಸಲು ತೆರಳಬೇಕಿದ್ದ ಅರುಣಾಚಲ ಪ್ರದೇಶದ ಮೂವರು ವುಶುಪಟುಗಳಿಗೆ ಚೀನಾ ‘ಸ್ಟೇಪಲ್ಡ್‌ ವೀಸಾ’ ನೀಡಿತ್ತು. ಇದಕ್ಕೆ ಪ್ರತಿಭಟನೆ ರೂಪದಲ್ಲಿ ಭಾರತ ಉಳಿದ ವುಶು ಸ್ಪರ್ಧಿಗಳನ್ನು ಹಿಂದಕ್ಕೆ ಕರೆಸಿಕೊಂಡಿತ್ತು.

‘ಏಷ್ಯನ್ ಕ್ರೀಡಾಕೂಟಕ್ಕೆ ತೆರಳಬೇಕಿದ್ದ ಮೂವರು ವುಶು ಪಟುಗಳಿಗೆ ಮಾನ್ಯತೆ ನಿರಾಕರಿಸಿರುವ ವಿಷಯದಲ್ಲಿ ಚೀನಾ ಅಧಿಕಾರಿಗಳ ಜೊತೆ ಸತತ ಸಂಪರ್ಕದಲ್ಲಿದ್ದೇವೆ’ ಎಂದು ಏಷ್ಯಾ ಒಲಿಂಪಿಕ್‌ ಕೌನ್ಸಿಲ್ (ಒಸಿಎ) ಹಂಗಾಮಿ ಅಧ್ಯಕ್ಷ ರಣಧೀರ್ ಸಿಂಗ್ ಹಾಂಗ್‌ಝೌನಲ್ಲಿ ತಿಳಿಸಿದ್ದಾರೆ.

ವೀಸಾ ನಿರಾಕರಣೆಗೆ ಒಳಗಾಗಿರುವ ಮೂವರು ಸ್ಪರ್ಧಿಗಳು, ಇತರ ಎಂಟು ಮಂದಿ ವುಶು ಸ್ಪರ್ಧಿಗಳ ಜೊತೆ ಶುಕ್ರವಾರ ರಾತ್ರಿ ವಿಮಾನದಲ್ಲಿ ಚೀನಾಕ್ಕೆ ತೆರಳಬೇಕಾಗಿತ್ತು. ಆದರೆ ಅವರ ಮಾನ್ಯತಾ ಪತ್ರ ಡೌನ್‌ಲೋಡ್‌ ಆಗದ ಕಾರಣ ಅನುಮತಿ ಸಿಗದೇ ಉಳಿಯಬೇಕಾಗಿದೆ. ಶನಿವಾರ ಏಷ್ಯನ್ ಕ್ರೀಡಾಕೂಟದ ಉದ್ಘಾಟನೆ ನಿಗದಿಯಾಗಿದೆ.

‘ನಾವು ಕ್ರೀಡಾಕೂಟದ ಕಾರ್ಯಪಡೆ ಜೊತೆ ಗುರುವಾರ ಸಭೆ ನಡೆಸಿದ್ದೆವು. ಅಲ್ಲಿ ಈ ವಿಷಯ ಚರ್ಚಿಸಿದ್ದೇವೆ. ಅವರೂ (ಕಾರ್ಯಪಡೆ) ಸರ್ಕಾರದ ಜೊತೆ ಈ ವಿಷಯ ಚರ್ಚಿಸಲಿದ್ದಾರೆ. ನಾವೂ ಸರ್ಕಾರದ ಜೊತೆ ಚರ್ಚಿಸುತ್ತೇವೆ’ ಎಂದು ಹಿರಿಯ ಆಡಳಿತಗಾರ ರಣಧೀರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ವುಶು ಕ್ರೀಡೆಯು ಸಮರ ಕಲೆ (ಮಾರ್ಷಲ್‌ ಆರ್ಟ್‌)ಯಾಗಿದ್ದು, ಚೀನಾ ಮೂಲದ್ದು ಎನ್ನಲಾಗುತ್ತಿದೆ.

‘ವೀಸಾ ನಿರಾಕರಣೆ ವಿಷಯ ಗುರುವಾರವಷ್ಟೇ ನಮ್ಮ ಗಮನಕ್ಕೆ ಬಂದಿದೆ. ಕ್ರೀಡಾಕೂಟದ ಸಂಘಟನಾ ಸಮಿತಿಯ ಜೊತೆ ನಾವು ವಿಷಯ ಎತ್ತಿದ್ದೇವೆ. ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದ್ದೇವೆ. ನಂತರ ಈ ಬಗ್ಗೆ ಮಾಹಿತಿ ನೀಡುತ್ತೇವೆ’ ಎಂದು ಒಸಿಎನ ಹಂಗಾಮಿ ಮಹಾ ನಿರ್ದೇಶಕ ವಿನೋದ್‌ ತಿವಾರಿ ತಿಳಿಸಿದರು.

ಇನ್ನೊಂದೆಡೆ, ‘ಚೀನಾ ಪ್ರವೇಶಿಸಲು ಭಾರತದ ಅಥ್ಲೀಟುಗಳಿಗೆ ವೀಸಾ ನೀಡಲಾಗಿದೆ’ ಎಂದು ಒಲಿಂಪಿಕ್‌ ಕೌನ್ಸಿಲ್‌ನ ಎಥಿಕ್ಸ್ ಸಮಿತಿ ಅಧ್ಯಕ್ಷ ವೀ ಜಿಝೋಂಗ್ ತಿಳಿಸಿದರು. ‘ಚೀನಾ ಪ್ರವೇಶಕ್ಕೆ ಈಗಾಗಲೇ ವೀಸಾ ನೀಡಲಾಗಿದೆ. ಚೀನಾ ಯಾವುದೇ ವೀಸಾ ನಿರಾಕರಿಸಿಲ್ಲ. ಚೀನಾ ಸರ್ಕಾರದ ನಿಯಮಾವಳಿಗಳ ಪ್ರಕಾರ ನಾವು ಬೇರೆ ಬೇರೆ ರೀತಿಯ ವೀಸಾ ನೀಡಬಹುದಾಗಿದೆ. ನಮ್ಮಲ್ಲಿ ಅರೈವಲ್ ವೀಸಾ, ಪೇಪರ್‌ ವೀಸಾ ಮತ್ತು ಪಾಸ್‌ಪೋರ್ಟ್‌ ಅನ್ನೇ ವೀಸಾ ರೀತಿ ಬಳಸುವ ವ್ಯವಸ್ಥೆಯೂ ಇದೆ’ ಎಂದರು.

ರಿಜಿಜು ಖಂಡನೆ:

ವುಶು ಪಟುಗಳಿಗೆ ವೀಸಾ ನಿರಾಕರಿಸಿರುವ ಚೀನಾದ ಕ್ರಮವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ತೀವ್ರವಾಗಿ ಖಂಡಿಸಿದ್ದಾರೆ. ‘ಈಶಾನ್ಯ ಭಾರತದ ಅರುಣಾಚಲಪ್ರದೇಶ ವಿವಾದಿತ ಪ್ರದೇಶವಲ್ಲ. ಅದು ಭಾರತದ ಅವಿಭಾಜ್ಯ ಅಂಗ. ಚೀನಾದ ವಾದವನ್ನು ಅರುಣಾಚಲ ಪ್ರದೇಶ ಉಗ್ರವಾಗಿ ವಿರೋಧಿಸುತ್ತದೆ’ ಎಂದು ಅರುಣಾಚಲ ಪ್ರದೇಶದ ಸಂಸದರೂ ಆಗಿರುವ ಕಿರಣ್‌ ರಿಜಿಜು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT