ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಿತಾ, ಪ್ರಕೃತಿ ಸಹೋದರಿಯರು ಜಿಲ್ಲೆಗೆ ಪ್ರಥಮ

ಸಹೋದರಿಯರ ಸಾಧನೆಗೆ ಮೆಚ್ಚುಗೆ; ಜಿಲ್ಲೆಯ 2,170 ವಿದ್ಯಾರ್ಥಿಗಳಿಗೆ ಎ+ ಶ್ರೇಣಿ
Last Updated 10 ಆಗಸ್ಟ್ 2021, 4:00 IST
ಅಕ್ಷರ ಗಾತ್ರ

ಬೀದರ್: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಾಯಂ ಆಗಿ ಕೊನೆಯ ಸಾಲುಗಳಲ್ಲೇ ಗುರುತಿಸಿಕೊಳ್ಳುತ್ತಿದ್ದ ಬೀದರ್ ಜಿಲ್ಲೆ ಈ ಬಾರಿ ಉತ್ತಮ ಫಲಿತಾಂಶ ಪಡೆದಿದೆ. ‘ಎ’ ಗ್ರೇಡ್‌ನಲ್ಲಿ ಗುರುತಿಸಿಕೊಂಡಿದೆ.

ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಸಂಚಾಲಿತ ಪ್ರೌಢಶಾಲೆಯ ಅವಳಿ ಸಹೋದರಿಯರಾದ ವಿನಿತಾ ಸಂಗಶೆಟ್ಟಿ ಹಾಗೂ ಪ್ರಕೃತಿ ಸಂಗಶೆಟ್ಟಿ 625ಕ್ಕೆ 625 ಅಂಕಗಳನ್ನು ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

‘ಬೀದರ್‌ ಜಿಲ್ಲೆಯ 23,728 ರೆಗ್ಯುಲರ್, 2,660 ರೆಗ್ಯುಲರ್ ಪುನರಾವರ್ತಿತ, 1303 ಖಾಸಗಿ ಹಾಗೂ 583 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 28,274 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಾಸಾದವರಲ್ಲಿ 15,425 ಬಾಲಕರು ಹಾಗೂ 12,249 ಬಾಲಕಿಯರು ಇದ್ದಾರೆ’ ಎಂದು ಡಿಡಿಪಿಐ ಗಂಗಣ್ಣ ಸ್ವಾಮಿ ತಿಳಿಸಿದರು.

‘ಎ+’ ಶ್ರೇಣಿಯಲ್ಲಿ 2,170 ವಿದ್ಯಾರ್ಥಿಗಳು. ‘ಎ‘ ಶ್ರೇಣಿಯಲ್ಲಿ 7,911, ‘ಬಿ’ ಶ್ರೇಣಿಯಲ್ಲಿ 11, 217 ಹಾಗೂ ‘ಸಿ‘ ಶ್ರೇಣಿಯಲ್ಲಿ 2,430 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ಕೋವಿಡ್‌ ಮೊದಲ ಅಲೆ, ಪ್ರಸಕ್ತ ವರ್ಷ ಎರಡನೇ ಅಲೆ ಕಾಣಿಸಿಕೊಂಡು ವಿದ್ಯಾರ್ಥಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿತು. 12,289 ಬಾಲಕರು ಹಾಗೂ 11,634 ಬಾಲಕಿಯರು ಸೇರಿ ಒಟ್ಟು 27,999 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದರು. ಕೋವಿಡ್‌ ಭಯದ ನೆರೆಳಿನಲ್ಲಿಯೇ 27,679 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಈ ವರ್ಷವೂ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಜಿಲ್ಲೆಗಳ ಪಟ್ಟಿಯನ್ನು ಮಾಡಿಲ್ಲ. ಆದರೆ, ಕಳೆದ ವರ್ಷದಂತೆ ಜಿಲ್ಲೆಗಳ ಸಾಧನೆಯನ್ನು ಮೂರು ಶ್ರೇಣಿಗಳಲ್ಲಿ ವರ್ಗೀಕರಿಸಲಾಗಿದೆ. ಕಳೆದ ವರ್ಷ ಬೀದರ್ ಜಿಲ್ಲೆ ‘ಬಿ’ ಗ್ರೇಡ್‌ ಪಡೆದು ಸಮಾಧಾನ ಪಟ್ಟುಗೊಂಡಿತ್ತು. ಈ ವರ್ಷ ‘ಎ’ ಗ್ರೇಡ್‌ ಪಡೆದಿರುವುದು ಇಲಾಖೆ ಅಧಿಕಾರಿಗಳಲ್ಲಿ ಹರ್ಷ ಉಂಟು ಮಾಡಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲೆಯಲ್ಲಿ ನಿರಂತರವಾಗಿ ಪ್ರಯತ್ನಗಳು ನಡೆಯುತ್ತಲೇ ಇವೆ. ಕೋವಿಡ್‌ ಕಾರಣ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪಾಠ ಆಲಿಸಬೇಕಾಯಿತು. ಒಟ್ಟಾರೆ ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದೆ’ ಎಂದು ಶಿಕ್ಷಣಾಧಿಕಾರಿ ಟಿ.ಆರ್‌.ದೊಡ್ಡೆ ತಿಳಿಸಿದರು.

‘ತಂದೆ ಇದ್ದಿದ್ದರೆ ತುಂಬಾ ಖುಷಿಪಡ್ತಿದ್ರು’:ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಸತಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು, ಅವಳಿ ಸಹೋದರಿಯರಾದ ವಿನಿತಾ ಸಂಗಶೆಟ್ಟಿ, ಪ್ರಕೃತಿ ಸಂಗಶೆಟ್ಟಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ತಳವಾಡ ಗ್ರಾಮದವರಾದ ಅವಳಿ ಸಹೋದರಿಯರು 1ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮದ ಚನ್ನಬಸವೇಶ್ವರ ಗುರುಕುಲ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಅಭ್ಯಸಿಸಿದ್ದಾರೆ. ಬಾಲ್ಯದಿಂದಲೇ ಓದಿನಲ್ಲಿ ಮುಂದೆ ಇದ್ದ ಸಹೋದರಿಯರು ಪ್ರತಿ ತರಗತಿಯಲ್ಲೂ ಪ್ರಥಮ ಸ್ಥಾನ ಪಡೆಯುತ್ತಿದ್ದರು ಎಂದು ಶಿಕ್ಷಕರು ಹೇಳಿದರು.

ನಿತ್ಯ 5ರಿಂದ 6 ಗಂಟೆ ಓದುತ್ತಿದ್ದೆವು. ಎಲ್ಲ ವಿಷಯಗಳಿಗೂ ಮಹತ್ವ ನೀಡಿ ವೇಳಾಪಟ್ಟಿ ಮಾಡಿಕೊಂಡು ಓದಿದೆವು. ಸಂಯೋಜಕ ಪ್ರವೀಣ ಖಂಡಾಳೆ ಅವರು ಪ್ರತಿಷ್ಠಿತ ಶಾಲೆಗಳ ವಿಷಯ ಪರಿಣಿತರು ತಯಾರಿಸಿದ ಪ್ರಶ್ನೆಪತ್ರಿಕೆಯನ್ನು ಕಳುಹಿಸುತ್ತಿದ್ದರು. ಅವುಗಳನ್ನು ಬಿಡಿಸುತ್ತಿದ್ದೆವು ಎಂದು ವಿದ್ಯಾರ್ಥಿನಿಯರಾದ ವಿನಿತಾ, ಪ್ರಕೃತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂದೆಗೆ ನಮ್ಮ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಕಾಳಜಿ ಇತ್ತು. 2019ರಲ್ಲಿ ನಿಧನರಾಗಿದ್ದಾರೆ. ನಮ್ಮ ತಂದೆ ಎನ್‌ಐಟಿ ಸೂರತ್ಕಲ್‌ನಿಂದ ಕೆಮಿಕಲ್‌ ಎಂಜಿಯರಿಂಗ್‌ ಪದವಿ ಪಡೆದಿದ್ದರು. ಅವರು ಇಂದು ಜೀವಂತವಾಗಿದ್ದರೆ ನಮ್ಮ ಸಾಧನೆ ಕಂಡು ತುಂಬಾ ಖುಷಿ ಪಡುತ್ತಿದ್ದರು’ ಎಂದು ಹೇಳುವಾಗ ಸಹೋದರಿಯರ ಕಣ್ಣುಗಳು ತೇವವಾಗಿದ್ದವು.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯಬಸವರಾಜ ಮೊಳಕೀರೆ, ಪ್ರವೀಣ ಖಂಡಾಳೆ, ನಾಗರಾಜ ಮಠಪತಿ, ಲಕ್ಷ್ಮಣ ಮೇತ್ರೆ ಹರ್ಷ ವ್ಯಕ್ತಪಡಿಸಿದ್ದಾರೆ.

ರಮ್ಯಾಗೆ 623, ಅಭಿಷೇಕಗೆ 621 ಅಂಕ:ಖಟಕಚಿಂಚೋಳಿ: ಸಮೀಪದ ಹಳ್ಳಿಖೇಡ ಬಿ ಗ್ರಾಮದ ಬಸವತೀರ್ಥ ವಿದ್ಯಾಪೀಠ ಪ್ರೌಢಶಾಲೆಯ ವಿದ್ಯಾರ್ಥಿನಿ ರಮ್ಯಾ ಶ್ರೀಮಂತ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಪಡೆದು ಅಗ್ರಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.

ವಿದ್ಯಾರ್ಥಿಯ ಈ ಸಾಧನೆಗೆ ಸಂಸ್ಥೆಯ ಕೇಶವರಾವ್ ತಳಘಟಕರ್, ಗುಂಡಯ್ಯ ತೀರ್ಥಾ, ಮುಖ್ಯ ಶಿಕ್ಷಕ ಚಂದ್ರಕಾಂತ ಬಿರಾದಾರ ಹಾಗೂ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ.

ಅಭಿಷೇಕ ಸಾಧನೆ
ಖಟಕಚಿಂಚೋಳಿ:
ಸಮೀಪದ ಹಳ್ಳಿಖೇಡ (ಬಿ) ಗ್ರಾಮದ ಮಾತೋಶ್ರೀ ಕಸ್ತೂರಬಾಯಿ ತಾಳಂಪಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿ ಅಭಿಷೇಕ ನರಸಿಂಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 621 ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಯ ಈ ಸಾಧನೆಗೆ ಸಂಸ್ಥೆಯ ಗೌರವಾಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ, ಅಧ್ಯಕ್ಷೆ ಮಂಜುಳಾ ಸುಭಾಷ ಗಂಗಾ, ಮುಖ್ಯ ಶಿಕ್ಷಕ ಶರಣಪ್ಪ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT