ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ನೌಕರರ ಸಂಘದ ಚುನಾವಣೆಗೆ ಜಟಾಪಟಿ

ಮತದಾರರ ಕರಡು ಪಟ್ಟಿ ಘೋಷಿಸದ್ದಕ್ಕೆ ಆಕ್ಷೇಪ, ಜಿಲ್ಲಾಧಿಕಾರಿಗೆ ದೂರು
Published : 21 ಸೆಪ್ಟೆಂಬರ್ 2024, 5:33 IST
Last Updated : 21 ಸೆಪ್ಟೆಂಬರ್ 2024, 5:33 IST
ಫಾಲೋ ಮಾಡಿ
Comments

ಬೀದರ್‌: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಚುನಾವಣೆಗೂ ಮುನ್ನವೇ ಜಟಾಪಟಿ ಆರಂಭಗೊಂಡಿದೆ. ಇದರಿಂದ ಚುನಾವಣೆಯ ಕಾವು ಹೆಚ್ಚಾಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ.

ಈಗಾಗಲೇ ಸಂಘದ ತಾಲ್ಲೂಕು ಶಾಖೆಗಳಿಂದ ರಾಜ್ಯ ಶಾಖೆಗೆ ಚುನಾವಣಾ ದಿನಾಂಕ ಘೋಷಿಸಲಾಗಿದೆ. ಆಯಾ ಕಡೆಗಳಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಿ, ಆಕ್ಷೇಪಣೆಗೂ ಕಾಲಾವಕಾಶ ನೀಡಲಾಗಿದೆ. ಆದರೆ, ಬೀದರ್‌ನಲ್ಲಿ ಇದುವರೆಗೆ ಕರಡು ಮತದಾರರ ಪಟ್ಟಿ ಪ್ರಕಟಿಸದ್ದಕ್ಕೆ ನೌಕರರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಷಯವೇ ನೌಕರರನ್ನು ಇಬ್ಭಾಗ ಮಾಡುತ್ತಿದೆ.

ಐದು ವರ್ಷಗಳ ಹಿಂದೆ ಚುನಾವಣೆ ನಡೆದಾಗಲೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಘದಲ್ಲಿ ಜಟಾಪಟಿಗೆ ಕಾರಣವಾಗಿತ್ತು. ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಈಗಲೂ ಅಂತಹುದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಮತದಾರರ ಕರಡು ಪಟ್ಟಿ ಪ್ರಕಟಿಸಬೇಕೆಂದು ಒತ್ತಾಯಿಸಿ ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಮಾಳಗೆ ಅವರು ಸಂಘದ ರಾಜ್ಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿಗೂ ದೂರು ಸಲ್ಲಿಸಿದ್ದಾರೆ.

‘ಚುನಾವಣಾಧಿಕಾರಿ ಚುನಾವಣಾ ದಿನಾಂಕ ಘೋಷಿಸಿದ್ದರೂ ಬೀದರ್‌ನಲ್ಲಿ ಕರಡು ಮತದಾರರ ಪಟ್ಟಿಯನ್ನೇ ಇದುವರೆಗೆ ಘೋಷಿಸಿಲ್ಲ. ಮತದಾರರ ಪಟ್ಟಿಯಲ್ಲಿ ಯಾರ ಹೆಸರಿದೆ, ಯಾರ ಹೆಸರು ಇಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳುವುದು ಹೇಗೆ?. ಒಂದುವೇಳೆ ಯಾರದ್ದಾದರೂ ಹೆಸರು ಬಿಟ್ಟು ಹೋದರೆ, ಸಂಘಕ್ಕೆ ಸಂಬಂಧವಿರದವರ ಹೆಸರು ಸೇರಿಸಿದರೆ ಅದಕ್ಕೆ ಆಕ್ಷೇಪಣೆ ಸಲ್ಲಿಸಬಹುದು. ಇದಕ್ಕೆ ಜಿಲ್ಲಾ ಸಂಘ ಅವಕಾಶವೇ ಮಾಡಿಕೊಡುತ್ತಿಲ್ಲ. ಹೀಗಾಗಿಯೇ ಸಂಘದ ರಾಜ್ಯ ಅಧ್ಯಕ್ಷರು, ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ’ ಎಂದು ರಾಜಕುಮಾರ ಮಾಳಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘ತಮ್ಮ ಪ್ರತಿಸ್ಪರ್ಧಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ ಚುನಾವಣೆಯಲ್ಲಿ ಗೆಲ್ಲಬೇಕೆಂದು ಹಾಲಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರು ಹುನ್ನಾರ ನಡೆಸಿದ್ದಾರೆ. ಹಿಂದಿನ ಚುನಾವಣೆಯಲ್ಲೂ ಇದೇ ರೀತಿ ಮಾಡಿ ಗೆದ್ದು ಬಂದಿದ್ದರು. ಈ ಸಲ ಅದಕ್ಕೆ ಅವಕಾಶ ಕೊಡುವುದಿಲ್ಲ. ಚುನಾವಣೆಯಲ್ಲಿ ಯಾರು ಬೇಕಾದರೂ ಗೆಲ್ಲಲಿ. ಆದರೆ, ಚುನಾವಣೆ ಪಾರದರ್ಶಕವಾಗಿ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ. ಆದರೆ, ಈ ಆರೋಪಗಳನ್ನು ಗಂದಗೆ ಅವರು ತಳ್ಳಿ ಹಾಕಿದ್ದಾರೆ. ‘ಚುನಾವಣೆಯಲ್ಲಿ ನನ್ನದೇನೂ ಪಾತ್ರವಿಲ್ಲ. ಸಂಘದ ಕೇಂದ್ರ ಕಚೇರಿ ಸೂಚನೆಯ ಪ್ರಕಾರ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಬೀದರ್‌ ಜಿಲ್ಲೆಯಲ್ಲಿ ಸರಿಸುಮಾರು 28 ಸಾವಿರ ಸರ್ಕಾರಿ ನೌಕರರಿದ್ದಾರೆ. ಆದರೆ, ಮತದಾರರ ಪಟ್ಟಿಯಲ್ಲಿ 12ರಿಂದ 13 ಸಾವಿರ ಜನರ ಹೆಸರಷ್ಟೇ ಇವೆ. ಅರ್ಧಕ್ಕೂ ಹೆಚ್ಚಿನ ನೌಕರರ ಹೆಸರುಗಳೇ ಇಲ್ಲ. ಅನೇಕರಿಗೆ ಸಂಘದ ಸದಸ್ಯ ಹೇಗೆ ಆಗಬೇಕೆಂಬುದು ಗೊತ್ತಿಲ್ಲ. ಉದ್ದೇಶಪೂರ್ವಕವಾಗಿ ಅದರ ಬಗ್ಗೆ ತಿಳಿಸುವುದಿಲ್ಲ. ತಮಗೆ ಬೇಕಾದವರ ಹೆಸರುಗಳಷ್ಟೇ ಸೇರಿಸುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಜಿಲ್ಲಾ ಸಂಘದ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.

ರಾಜೇಂದ್ರಕುಮಾರ ಗಂದಗೆ ಅವರು ಹತ್ತು ವರ್ಷಗಳಿಂದ ಜಿಲ್ಲಾ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂರನೇ ಅವಧಿಗೆ ಪುನರಾಯ್ಕೆ ಬಯಸಿ ಚುನಾವಣೆಗೆ ನಿಲ್ಲುವುದು ಬಹುತೇಕ ಖಾತ್ರಿಯಾಗಿದೆ. ಅವರ ವಿರುದ್ಧ ಚುನಾವಣೆಗೆ ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

‘ಸಂಘದ ಆದೇಶದ ಪ್ರಕಾರ ಚುನಾವಣೆ’

ರಾಜ್ಯ ಸರ್ಕಾರಿ ನೌಕರರ ಸಂಘದ ಕೇಂದ್ರ ಕಚೇರಿ ಆದೇಶದ ಪ್ರಕಾರ ಜಿಲ್ಲೆಯಲ್ಲೂ ಚುನಾವಣೆ ನಡೆಸಲಾಗುತ್ತದೆ. ಅದರ ಸೂಚನೆ ಪ್ರಕಾರ ಮತದಾರರ ಕರಡು ಪಟ್ಟಿ ಬಿಡುಗಡೆಗೊಳಿಸಲಾಗುತ್ತದೆ. ಜಿಲ್ಲೆಯಲ್ಲಿ ಅಂದಾಜು 12 ರಿಂದ 13 ಸಾವಿರ ಮತದಾರರಿದ್ದಾರೆ. ಯಾರು ಐದು ವರ್ಷಗಳವರೆಗೆ ನಿರಂತರವಾಗಿ ಸಂಘಕ್ಕೆ ಶುಲ್ಕ ಸಂದಾಯ ಮಾಡಿರುತ್ತಾರೆ ಅಂತಹವರು ಸಂಘದ ಸದಸ್ಯರಾಗಿರುತ್ತಾರೆ. ಚುನಾವಣೆ ಸಂಬಂಧ ಈಗಾಗಲೇ ಎಲ್ಲ ಇಲಾಖೆಗಳಿಗೂ ಮಾಹಿತಿ ಕೊಡಲಾಗುತ್ತಿದೆ. –ರಾಜೇಂದ್ರಕುಮಾರ ಗಂದಗೆ ಜಿಲ್ಲಾಧ್ಯಕ್ಷ ಸರ್ಕಾರಿ ನೌಕರರ ಸಂಘ ಬೀದರ್‌

‘ಪಾರದರ್ಶಕ ಚುನಾವಣೆ ನಡೆಯಲಿ’

ಈಗಾಗಲೇ ಕೇಂದ್ರ ಸಂಘ ಚುನಾವಣಾ ದಿನಾಂಕ ಘೋಷಿಸಿದೆ. ಆದರೆ ಬೀದರ್‌ ಜಿಲ್ಲೆಯಲ್ಲಿ ಇದುವರೆಗೆ ಮತದಾರರ ಕರಡು ಪಟ್ಟಿ ಘೋಷಿಸಿಲ್ಲ. ಚುನಾವಣೆಗೆ ಎರಡ್ಮೂರು ದಿನಗಳಿರುವಾಗ ಕರಡು ಪಟ್ಟಿ ಘೋಷಿಸಿದರೆ ನ್ಯಾಯಾಲಯದ ಮೊರೆ ಹೋಗಲು ಅವಕಾಶ ಇರುವುದಿಲ್ಲ. ತಮಗೆ ಬೇಕಾದವರ ಹೆಸರು ಸೇರಿಸಿ ಬೇಡವಾದವರ ಹೆಸರುಗಳನ್ನು ತೆಗೆಸಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಚುನಾವಣೆ ನಡೆಸಲು ಹುನ್ನಾರ ನಡೆಸಲಾಗುತ್ತಿದೆ. ಹಿಂದಿನ ಚುನಾವಣೆಯಲ್ಲೂ ಇದೇ ರೀತಿ ನಡೆದಿತ್ತು. ಸರ್ಕಾರಿ ನೌಕರರು ಪ್ರಜ್ಞಾವಂತರು. ನೌಕರರ ಸಂಘದ ಚುನಾವಣೆ ಪಾರದರ್ಶಕವಾಗಿ ನಡೆಸಬೇಕು. –ರಾಜಕುಮಾರ ಮಾಳಗೆ ಅಧ್ಯಕ್ಷ ಆರೋಗ್ಯ ಇಲಾಖೆ ನೌಕರರ ಸಂಘ 

ಅಧಿಸೂಚನೆಯಲ್ಲಿ ಏನಿದೆ?

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಯಿಂದ ಆರಂಭಗೊಂಡ ರಾಜ್ಯ ಸಂಘದ ಅಧ್ಯಕ್ಷರು ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಸೆಪ್ಟೆಂಬರ್‌ 17ರಿಂದ ಡಿಸೆಂಬರ್‌ 27ರ ವರೆಗೆ ವಿವಿಧ ಹಂತಗಳಲ್ಲಿ ನಡೆಸಲು ಚುನಾವಣಾಧಿಕಾರಿ ಎ. ಹನುಮ ನರಸಯ್ಯ ಸೆ. 17ರಂದು ಅಧಿಸೂಚನೆ ಹೊರಡಿಸಿದ್ದಾರೆ.

ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆಯ ರಾಜ್ಯ ಪರಿಷತ್‌ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸೆ. 17ರಂದು ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು 26ಕ್ಕೆ ಕೊನೆಗೊಳ್ಳಲಿದೆ. ಅಕ್ಟೋಬರ್‌ 8ರಿಂದ ಡಿಸೆಂಬರ್‌ 4ರ ವರೆಗೆ ಆಯಾ ಇಲಾಖೆ ಕ್ಷೇತ್ರವಾರು ಮತದಾನ ನಡೆಯಲಿದೆ. ತಾಲ್ಲೂಕು ಶಾಖೆಗಳ ಕಾರ್ಯಕಾರಿ ಸಮಿತಿಗಳ ಚುನಾವಣೆ ಅಕ್ಟೋಬರ್‌ 9ರಿಂದ 28ರ ವರೆಗೆ ತಾಲ್ಲೂಕು ಶಾಖೆಗಳ ಅಧ್ಯಕ್ಷರ ಆಯ್ಕೆ ಅ. 30ರಿಂದ ನ. 16ರ ವರೆಗೆ ಜಿಲ್ಲಾ ಶಾಖೆಗಳ ಕಾರ್ಯಕಾರಿ ಸಮಿತಿಗಳಿಗೆ ಅ. 28ರಿಂದ ನ. 16ರ ವರೆಗೆ ಜಿಲ್ಲಾ ಶಾಖೆಗಳ ಅಧ್ಯಕ್ಷರ ಚುನಾವಣೆ ನ. 19ರಿಂದ ಡಿ. 4ರ ವರೆಗೆ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ರಾಜ್ಯ ಖಜಾಂಚಿ ಸ್ಥಾನಗಳಿಗೆ ಡಿ. 12ರಿಂದ 27ರ ವರೆಗೆ ಚುನಾವಣೆಗಳು ನಡೆಯಲಿವೆ. ಡಿ. 27ಕ್ಕೆ ಚುನಾವಣೆ ಪ್ರಕ್ರಿಯೆ ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT