ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ಬಿತ್ತನೆ ಬೀಜ ಪಡೆಯಲು ಪರದಾಟ: ರೈತರ ಆಕ್ರೋಶ

Published 11 ಜೂನ್ 2024, 14:21 IST
Last Updated 11 ಜೂನ್ 2024, 14:21 IST
ಅಕ್ಷರ ಗಾತ್ರ

ಔರಾದ್: ಪಟ್ಟಣದ ಹೊರ ವಲಯದ ನಾರಾಯಣಪುರದ ಕೃಷಿ ತರಬೇತಿ ಕೇಂದ್ರದಲ್ಲಿ ರೈತರು ಬಿತ್ತನೆ ಬೀಜ ಪಡೆಯಲು ಪರದಾಡುತ್ತಿದ್ದಾರೆ.

ಸೋಮವಾರ ರಾತ್ರಿ ಮಳೆಯಾದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆಯೇ ಇಲ್ಲಿಯ ರೈತ ಸಂಪರ್ಕ ಕೇಂದ್ರದ ಬಳಿ ವಿವಿಧ ಗ್ರಾಮಗಳ ರೈತರು ಸರತಿ ಸಾಲಿನಲ್ಲಿ ನಿಂತರು.

ಸಂಜೆ 4 ಗಂಟೆಯಾದರೂ ಹಲವರಿಗೆ ಬೀಜ ಸಿಗದ ಹಿನ್ನೆಲೆಯಲ್ಲಿ ಅವ್ಯಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಎರಡು ದಿನದಿಂದ ಇಲ್ಲಿ ಸರತಿ ಸಾಲಿನಲ್ಲಿ ನಿಂತರೂ ಬೀಜ ಸಿಗುತ್ತಿಲ್ಲ. ತಮಗೆ ಬೇಕಾದವರಿಗೆ ಬೀಜ ಹಂಚುತ್ತಿರುವುದರಿಂದ ಈ ರೀತಿಯ ಅವ್ಯವಸ್ಥೆ ಆಗುತ್ತಿದೆ’ ಎಂದು ಕೆಲ ರೈತರು ಕಿಡಿಕಾರಿದರು.

‘ನಾನು ಎರಡು ದಿನದಿಂದ ಬೀಜಕ್ಕಾಗಿ ಸಾಲಿನಲ್ಲಿ ನಿಂತಿದ್ದೇನೆ. ಆದರೆ ಈ ನೂಕುನುಗ್ಗಲು ನೋಡಿದರೆ ಇಂದೂ ನನಗೆ ಬೀಜ ಸಿಗುವುದು ಕಷ್ಟ ಎನಿಸುತ್ತಿದೆ’ ಎಂದು ಬೋರಾಳ ರೈತ ಹಣಮಂತ ಬಿರಾದಾರ ಅಸಹಾಯಕತೆ ವ್ಯಕ್ತಪಡಿಸಿದರು.

‘ಬೀಜ ಖಾಲಿ ಆಗಿದೆ ಔರಾದ್‍ಗೆ ಬನ್ನಿ ಎಂದು ಹೇಳಿದರು. ಸೋಮವಾರ ಹಾಗೂ ಮಂಗಳವಾರ ಎರಡು ದಿನ ಬಂದು ಇಲ್ಲಿ ಸರತಿಯಲ್ಲಿ ನಿಂತಿದ್ದೇನೆ. ಆದರೂ ಬೀಜ ಸಿಕ್ಕಿಲ್ಲ’ ಎಂದು ಬೋಂತಿ ಗ್ರಾಮದ ರೈತ ಬಸವರಾಜ ಈ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಮೊದಲು ಚೀಟಿ ಪಡೆಯಲು ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲಬೇಕು. ನಂತರ ಬೀಜ ಪಡೆಯಲು ಮತ್ತಷ್ಟು ಹರಸಹಾಸ ಪಡಬೇಕಿದೆ. ಕೃಷಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಈ ರೀತಿ ಅವ್ಯವಸ್ಥೆ ಆಗುತ್ತಿದೆ. ಕೆಲವರಿಗೆ ರಾತ್ರಿ ಹೊತ್ತು ಬೀಜ ಕೊಡುತ್ತಿದ್ದಾರೆ. ಬೇಕಿದ್ದರೆ ಬಂದು ನೋಡಿ’ ಎಂದು ಇಲ್ಲಿ ಸೇರಿದ ಅನೇಕ ರೈತರು ಕಿಡಿ ಕಾರಿದರು.

ವಿತರಣೆ ವ್ಯವಸ್ಥೆ ಸರಿ ಇಲ್ಲ: ಶಾಸಕ ಚವಾಣ್ ಗರಂ

ಔರಾದ್: ಇಲ್ಲಿನ ಬೀಜ ವಿತರಣೆ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕ ಪ್ರಭು ಚವಾಣ್ ‘ಅಧಿಕಾರಿಗಳು ಸರಿಯಾಗಿ ಸಿದ್ಧತೆ ಮಾಡಿಕೊಳ್ಳದ ಕಾರಣ ಬೀಜ ಬಿತ್ತನೆ ಬೀಜ ವಿತರಣೆಯಲ್ಲಿ ರೈತರಿಗೆ ಸಮಸ್ಯೆಯಾಗುತ್ತಿದೆ’ ಎಂದು ಅಸಮಾಧಾನ ಹೊರ ಹಾಕಿದರು.

‘ಬೀಜ ವಿತರಣೆ ಶುರುವಾದಾಗಿನಿಂದ ರೈತರಿಂದ ದೂರುಗಳು ಬರುತ್ತಿದೆ. ಯಾರಿಗೂ ತೊಂದರೆಯಾಗದಂತೆ ಎಲ್ಲ ರೈತರಿಗೂ ಬೀಜ ಹಾಗೂ ಗೊಬ್ಬರ ಸಿಗಬೇಕು. ಈ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ಕಾಳಜಿ ವಹಿಸಬೇಕು. ರೈತರಿಗೆ ಇದೇ ರೀತಿ ಸಮಸ್ಯೆ ಆದರೆ ನಾನು ಸುಮ್ಮನಿರಲ್ಲ’ ಎಂದು ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT