ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ವಿವಿಧ ಯೋಜನೆಗೆ ಒಂದೇ ಬಾರಿ ದಾಖಲೆ ಸಲ್ಲಿಸಿ– ಪಾಟೀಲ ಹೇಳಿಕೆ

ಸಹಕಾರಿ ಸಂಘಗಳ ಅಧಿಕಾರಿಗಳ ತರಬೇತಿ
Last Updated 13 ಜನವರಿ 2022, 13:53 IST
ಅಕ್ಷರ ಗಾತ್ರ

ಬೀದರ್: ‘ರೈತರು ಒಂದೇ ಸಲ ದಾಖಲೆ ನೀಡಿ ವಿವಿಧ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವಂತೆ ಫ್ರೂಟ್ಸ್ ಹೆಸರಲ್ಲಿ ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ರೂಪಿಸಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಇಂಥ ವ್ಯವಸ್ಥೆ ಮಾಡಲಾಗಿದೆ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಸಂಗಪ್ಪ ಪಾಟೀಲ ಹೇಳಿದರು.

ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ಬೆಳಗಾವಿಯ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರು ವಿವಿಧ ಯೋಜನೆಗಳ ಫಲಾನುಭವಿಯಾಗಲು ಒಂದೇ ದಾಖಲೆಯನ್ನು ಹಲವು ಬಾರಿ ನೀಡಬೇಕಾಗುತಿತ್ತು. ಈಗ ಸಮಸ್ಯೆಯನ್ನು ಆ್ಯಪ್‌ ಮೂಲಕ ನಿವಾರಿಸಲಾಗಿದೆ’ ಎಂದು ತಿಳಿಸಿದರು.

‘ಅಂತರ್ಜಾಲ ಆಧಾರಿತ ವ್ಯವಸ್ಥೆಯಿಂದ ರೈತರು ಮನೆ ಬಾಗಿಲಿನಲ್ಲಿಯೇ ಯೋಜನೆ ಫಲಾನುಭವಿಯಾಗಲು ಸಾಧ್ಯವಾಗುತ್ತಿದೆ. ರೈತರು ಇಲ್ಲಿ ಹೆಸರು ನೋಂದಾಯಿಸಿಕೊಂಡು ಇದರ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಸಾಲ ಪಡೆಯಲು ಬೇಕಾಗಿರುವ ಜಮೀನಿನ ಪಹಣಿ ಋಣಭಾರ ಏರಿಸಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಸಾಧ್ಯವಾಗಲಿದೆ. ಕಾವೇರಿ ಪೋರ್ಟಲ್‍ನ ತಂತ್ರಾಂಶ ವ್ಯವಸ್ಥೆಯಲ್ಲಿ ನೋಂದಣಿ ಮಾಡುವ ಅಧಿಕಾರವನ್ನು ಸಹಕಾರಿ ಸಂಘಗಳಿಗೆ ನೀಡಲಾಗಿದೆ. ಇದರಿಂದ ಸಂಘಗಳ ಮುಖ್ಯ ಕಾರ್ಯ ನಿರ್ವಾಹಕರ ಜವಾಬ್ದಾರಿ ಜಾಸ್ತಿಯಾಗಿದೆ’ ಎಂದು ಹೇಳಿದರು.

‘ಸಹಕಾರಿ ಸಂಘಗಳು ತನ್ನ ಗ್ರಾಹಕರಿಗೆ ಗಣಕೀಕೃತ ಸೇವೆಗಳನ್ನು ಒದಗಿಸುವುದರ ಮೂಲಕ ರೈತರಿಗೂ ಸಮರ್ಪಕ ಮಾಹಿತಿ ನೀಡಬೇಕು. 2022 ರ ಜನೇವರಿ 15 ರಿಂದ ಎಲ್ಲಾ ಸಹಕಾರಿ ಸಂಘಗಳಿಗೆ ಈ ಅವಕಾಶ ದೊರಕುತ್ತಿದ್ದು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು’ ಎಂದರು.

ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಮಹಾಜನ ಮಾತನಾಡಿ, ‘ಕೌಶಲ ಹೆಚ್ಚಿಸಿಕೊಳ್ಳಲು ತರಬೇತಿಗಳು ಸಹಕಾರಿಯಾಗಿವೆ. ಗ್ರಾಹಕ ಸೇವೆಯ ಅಭಿವೃಧ್ದಿಗಾಗಿ ಇಂತಹ ತರಬೇತಿಗಳು ನಿರಂತವಾಗಿ ನಡೆಯಬೇಕಿದೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಚನಬಸಯ್ಯ ಸ್ವಾಮಿ ಮಾತನಾಡಿ, ‘ಬೀದರ್‌ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಗಣಕೀಕರಣಗೊಂಡಿವೆ. ಕಂಪ್ಯೂಟರ್ ಬಳಸಲು ಗೊತ್ತಿಲ್ಲದವರು ಅನಕ್ಷರಸ್ಥರ ಸಾಲಿನಲ್ಲಿ ಗುರುತಿಸಿ ಕೊಳ್ಳುತ್ತಿದ್ದಾರೆ. ಆದ್ದರಿಂದ ಎಲ್ಲ ನೌಕರರು ಕಂಪ್ಯೂಟರ್ ಶಿಕ್ಷಣ ಪಡೆಯಬೇಕು’ ಎಂದರು.

ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಎಸ್.ಜಿ.ಪಾಟೀಲ ವಂದಿಸಿದರು. ಅನಿಲ ಅಪ್ಪಣ್ಣ ನಿರೂ‍ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT