ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜಪೂತ್‌ಗೆ ರಾಜ್ಯೋತ್ಸವದ ಕಿರೀಟ

ನಲವತ್ತು ವರ್ಷಗಳಿಂದ ಸಾವಯವ ಕೃಷಿಯಲ್ಲಿ ಅಮೋಘ ಸಾಧನೆ
Last Updated 29 ಅಕ್ಟೋಬರ್ 2020, 3:32 IST
ಅಕ್ಷರ ಗಾತ್ರ

ಭಾಲ್ಕಿ / ಬೀದರ್: ಕೃಷಿಯಲ್ಲಿ ತೊಡಗಿಕೊಳ್ಳುವುದೇ ಕಷ್ಟವೆನ್ನುವ ಈ ಕಾಲದಲ್ಲಿ ಸಾವಯವ ಕೃಷಿಯಲ್ಲಿ ಅವಿರತ ಸಾಧನೆ ಮಾಡಿದ ಸೂರಜ್‌ಸಿಂಗ್ ರಜಪೂತ್‌ ಅವರು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1952ರ ಫೆಬ್ರುವರಿ 2ರಂದು ಭಾಲ್ಕಿ ತಾಲ್ಲೂಕಿನ ಮದಕಟ್ಟಿ ಗ್ರಾಮದಲ್ಲಿ ಕನ್ನುಸಿಂಗ್‌ ಸೂರಜ್‌ಸಿಂಗ್‌ ಹಾಗೂ ಕಾಶೀಬಾಯಿ ಅವರ ಪುತ್ರನಾಗಿ ಜನಿಸಿದರು. ರಮಾದೇವಿ ಅವರನ್ನು ವಿವಾಹವಾಗಿರುವ ಇವರಿಗೆ ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ. ಸೇನೆಯಲ್ಲಿ ಸೇರಬೇಕು ಎನ್ನುವ ಬಯಕೆ ಇವರದ್ದಾಗಿತ್ತು. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ದರು. ಆದರೆ, ತಾಂತ್ರಿಕ ಕಾರಣಗಳಿಂದ ಸೇನೆಗೆ ಸೇರುವ ಅವಕಾಶ ದೊರೆಯದಿದ್ದಾಗ ಕೃಷಿಯತ್ತ ಒಲವು ತೋರಿದರು.

ಭಾಲ್ಕಿ ತಾಲ್ಲೂಕಿನ ಅಂಬೇಸಾಂಗವಿ ಗ್ರಾಮದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. 1997ರಲ್ಲಿ ತಮ್ಮ ಒಂದೂವರೆ ಎಕರೆ ಭೂಮಿಯಲ್ಲಿ ಕುಂಬಳಕಾಯಿ ಬೆಳೆದು ₹5 ಲಕ್ಷ ಆದಾಯ ಪಡೆದಿದ್ದರು. ಈ ಆದಾಯದಿಂದ ಬಂದ ಹಣದಿಂದ ಆರು ಎಕರೆ ಭೂಮಿಯನ್ನು ಖರೀದಿಸಿದ್ದರು. ಅದರಲ್ಲಿ ತೆಂಗು, ಮಾವು, ಶ್ರೀಗಂಧ ಸೇರಿದಂತೆ ವಿವಿಧ ಬಗೆಯ ಆರು ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ಜತೆಗೆ 30 ಗೋವುಗಳನ್ನು ಸಾಕಿದ್ದಾರೆ.

ಕೃಷಿ ಅನುಸಂಧಾನ ಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಸಂಘ– ಸಂಸ್ಥೆಗಳು ಅನೇಕ ಪ್ರಶಸ್ತಿ ಗಳನ್ನು ನೀಡಿ ಗೌರವಿಸಿವೆ. 40 ವರ್ಷಗಳಿಂದ ಸಾವಯವ ಕೃಷಿಯಲ್ಲೇ ತೊಡಗಿಸಿ ಕೊಂಡಿದ್ದಾರೆ. ಸಂಪೂರ್ಣ ಗೋ ಆಧಾರಿತ ಕೃಷಿ ಕೈಗೊಳ್ಳುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಕೃಷಿಯಲ್ಲಿ ನಿರಂತರ ಹೊಸತನಕ್ಕಾಗಿ ತುಡಿಯುವುದರಲ್ಲೇ ಖುಷಿ ಪಡುವ ಇವರು ಸಾವಯವ ಕೃಷಿಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಸಾವಯವ ಕೃಷಿ ಸಂಬಂಧಿತ ಅನೇಕ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ರೈತರಿಗೆ ಮಾರ್ಗದರ್ಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT