ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಟಕಚಿಂಚೋಳಿ | ಹೆಚ್ಚುತ್ತಿರುವ ಬಿಸಿಲು: ತಂಪು ಪಾನೀಯಗಳತ್ತ ಜನರ ಚಿತ್ತ

ಕಲ್ಲಂಗಡಿ, ಮಜ್ಜಿಗೆ, ಸೌತೆಕಾಯಿಗೆ ಹೆಚ್ಚಿದ ಬೇಡಿಕೆ
ಗಿರಿರಾಜ ವಾಲೆ
Published 30 ಏಪ್ರಿಲ್ 2024, 5:36 IST
Last Updated 30 ಏಪ್ರಿಲ್ 2024, 5:36 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಸದ್ಯ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಬಿಸಿಲಿನ ತಾಪದಿಂದ ಬೇಸತ್ತ ಜನತೆ ತಂಪು ಪಾನೀಯ ಹಾಗೂ ತಂಪಾದ ಜಾಗವನ್ನೇ ಹುಡುಕುತ್ತಾ ಹೊರಟಿದ್ದಾರೆ.

ಬಿಸಿಲಿನ ತಾಪ ಹೆಚ್ಚುತ್ತಾ ಹೋಗುತ್ತಿರುವುದರಿಂದ ಜನ ದೇಹಕ್ಕೆ ತಂಪು ನೀಡುವ ಕಲ್ಲಂಗಡಿ, ಮಜ್ಜಿಗೆ, ಸೌತೆಕಾಯಿ ಸೇರಿದಂತೆ ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಿರುವುದು ಕಂಡು ಬರುತ್ತಿದೆ.

ಹೋಬಳಿಯ ಚಳಕಾಪುರ, ದಾಡಗಿ ಸೇರಿದಂತೆ ಬಹುತೇಕ ಗ್ರಾಮಗಳ ನಿವಾಸಿಗಳು ಮಧ್ಯಾಹ್ನದ ಹೊತ್ತಿನಲ್ಲಿ ಬಿಸಿಲಿನಿಂದ ಪಾರಾಗಲು ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಹೀಗೆ ಕುಳಿತವರು ಸದ್ಯದ ಲೋಕಸಭಾ ಚುನಾವಣೆಯ ಬಿಸಿ ಬಿಸಿ ಮಾತುಗಳನ್ನಾಡುತ್ತಿರುವುದು ಕಂಡು ಬರುತ್ತಿದೆ.

‘ಕಳೆದೆರಡು ವರ್ಷಗಳಿಂದ ಸರಿಯಾದ ಸಮಯಕ್ಕೆ ಮಳೆಯಾಗದಿರುವುದರಿಂದ ಬಿಸಿಲಿನ ಪ್ರಖರತೆಯ ಮಟ್ಟ ಹೆಚ್ಚಾಗಿದೆ. ಹೀಗಾಗಿ ಭೂಮಿ ಕಾದು ಕೆಂಡದಂತಾಗಿದೆ. ಅಲ್ಲದೇ ಗಾಳಿಯೂ ಸಹ ಬಿಸಿಯಾಗಿ ಬೀಸುತ್ತಿದೆ. ಇದರಿಂದ ತಂಪಾದ ಗಾಳಿ ಸಿಗುವುದು ಕಷ್ಟವಾಗಿದೆ’ ಎಂದು ಹಿರಿಯರಾದ ಸಂಗಪ್ಪ ಪಾಟೀಲ ಹೇಳುತ್ತಾರೆ.

ಮಧ್ಯಾಹ್ನ 12 ಗಂಟೆಯಾದರೆ ಸಾಕು ಬಿಸಿಲಿನ ತಾಪ ಹೆಚ್ಚಾಗಿ ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಮಧ್ಯಾಹ್ನ ಕಣ್ಣು ಕುಕ್ಕುವಂತಹ ಬಿಸಿಲಿನಿಂದ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಜನ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹೊಲ, ಗದ್ದೆಗಳಲ್ಲಿ, ದೇವಾಲಯಗಳಲ್ಲಿ ಬೀಡು ಬಿಡುತ್ತಿದ್ದಾರೆ.

‘ಸದ್ಯ ಮದುವೆ, ತೊಟ್ಟಿಲು, ನಾಮಕರಣ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳು ನಡೆಯುವ ಸಮಯವಿದೆ. ಆದರೆ ಬಿಸಿಲಿನಿಂದ ಬಸವಳಿದ ಜನ ಸಮಾರಂಭಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಕೆಲವರು ಒಲ್ಲದ ಮನಸ್ಸಿನಿಂದ ಹೋಗುತ್ತಿರುವುದು’ ಕಂಡು ಬರುತ್ತಿದೆ.

ಸದ್ಯ ಒಂದು ಎಳನೀರಿನ ಬೆಲೆ ಬರೋಬ್ಬರಿ ₹50 ಇದ್ದು, ಇದು ಸ್ಥಿತಿವಂತರಿಗೆ ಮಾತ್ರ ಕೈಗೆಟಕುತ್ತಿದೆ. ಇನ್ನು ಕಲ್ಲಂಗಡಿ ಹಣ್ಣಿನ ಬೆಲೆಯೂ ಹೆಚ್ಚಾಗಿದ್ದು ಕೆಜಿಗೆ ₹ 50–60 ಕ್ಕೆ ಮಾರಾಟ ಆಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಇದು ಕೂಡ ದುಬಾರಿಯಾಗಿದೆ’ ಎಂದು ಶಿವಕುಮಾರ ಖಾಶೆಂಪುರ ಬೇಸರ ವ್ಯಕ್ತಪಡಿಸಿದ್ದಾರೆ.

ಬೇಸಿಗೆ ಬಂತೆಂದರೆ ಸಾಕು ಪಾಲಕರಿಗೆ ಮಕ್ಕಳನ್ನು ಹಿಡಿಯುವುದೇ ದೊಡ್ಡ ಸವಾಲಾಗುತ್ತದೆ. ಗಂಟೆಗೊಮ್ಮೆ ಕಿರಾಣಿ ಅಂಗಡಿ, ಐಸ್ ಕ್ರೀಮ್ ಬಂಡಿಗಳ ಸುತ್ತ ತಿರುಗುವ ಮಕ್ಕಳು ಎಷ್ಟು ಹೇಳಿದರು ಕೇಳುವುದಿಲ್ಲ. ಬಿಸಿಲು ಹೆಚ್ಚಾದಷ್ಟು ತಂಪು ಪಾನೀಯ ಮತ್ತು ಐಸ್‌ಕ್ರೀಮ್‌ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರ ನಡೆಯುತ್ತಿದೆ.

ಸ್ಥಿತಿವಂತರು ಫ್ರಿಜ್‌ನಲ್ಲಿನ ನೀರು ಕುಡಿದರೆ ಬಡವರು ಕುಂಬಾರರು ಮಣ್ಣಿನ ಬಿಂದಿಗೆ, ಹರವಿಗಳಲ್ಲಿನ ತಂಪು ನೀರನ್ನು ಕುಡಿಯುತ್ತಿದ್ದಾರೆ. ಮನೆಯಿಂದ ಹೊರಗೆ ಬರುವವರು ಬಿಸಿಲಿನ ತಾಪಕ್ಕೆ ಹೆದರಿ ಛತ್ರಿಗಳ ಆಶ್ರಯ ಪಡೆಯುತ್ತಿದ್ದು ಒಟ್ಟಾರೆ ಈ ವರ್ಷದ ಬೇಸಿಗೆಗೆ ಜನರು ಕಂಗಾಲಾಗಿದ್ದಾರೆ.

ಜನರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿಂಬೆರಸ ಮಜ್ಜಿಗೆ ಹೆಚ್ಚಾಗಿ ಸೇವಿಸಬೇಕು. ಮಕ್ಕಳು ಹೆಚ್ಚಾಗಿ ಐಸ್‌ಕ್ರೀಮ್‌ ಸೇವಿಸದಂತೆ ಎಚ್ಚರ ವಹಿಸಬೇಕು. ಎಲ್ಲರೂ ಮಿತವಾಗಿ ಆಹಾರ ಸೇವನೆ ಮಾಡಬೇಕು
- ಡಾ.ಶೇಷನಾಗ ಹಿಬಾರೆ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT