ಬುಧವಾರ, ಮೇ 18, 2022
23 °C
ಇಬ್ಬರು ಅಧಿಕಾರಿಗಳ ಬಿಡುಗಡೆಗೆ ಗೊತ್ತುವಳಿ ಸ್ವೀಕಾರ

ಜಿಲ್ಲಾ ಪಂಚಾಯಿತಿಯಲ್ಲಿ ಪ್ರತಿಧ್ವನಿಸಿದ ಭಾಲ್ಕಿ ವಸತಿ ಅಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಭಾಲ್ಕಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಸತಿ ಯೋಜನೆಗಳಡಿ ಅನರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ ಪ್ರಕರಣ ಶುಕ್ರವಾರ ಇಲ್ಲಿ ನಿರ್ಮಲಾ ಮಾನೆಗೋಪಾಳೆ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ಭಾಲ್ಕಿ ತಾಲ್ಲೂಕಿನ 40 ಗ್ರಾಮ ಪಂಚಾಯಿತಿಗಳಲ್ಲಿ ಅನರ್ಹರನ್ನು ಆಯ್ಕೆ ಮಾಡಿದರೂ ಕೇವಲ ಏಳು ಪಿಡಿಒಗಳನ್ನು ಅಮಾನತು ಮಾಡಲಾಗಿದೆ. ಕೆಲವರನ್ನು ಮಾತ್ರ ಗುರಿಯಾಗಿಸಿಕೊಂಡು ಅಮಾನತು ಮಾಡಿರುವುದು ಸರಿಯಲ್ಲ. ತಪ್ಪು ಮಾಡಿದ ಎಲ್ಲ 40 ಪಿಡಿಒಗಳನ್ನು ಅಮಾನತು ಮಾಡಬೇಕು. ಇಲ್ಲವೇ ಅಮಾನತು ಮಾಡಿರುವ ಏಳು ಪಿಡಿಒಗಳ ಅಮಾನತು ಆದೇಶ ಹಿಂಪಡೆಯಬೇಕು ಎಂದು ಹುಮನಾಬಾದ್‌ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ ಒತ್ತಾಯಿಸಿದರು.

ಸದಸ್ಯ ಪ್ರಕಾಶ ಪಾಟೀಲ ಮಾತನಾಡಿ, ‘ವಸತಿ ಯೋಜನೆ ವಿಧಾನಸಭೆಯಲ್ಲೂ ಸದ್ದು ಮಾಡಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯವಷ್ಟೇ ಸದಸ್ಯರಿಗೆ ಗೊತ್ತಿದೆ. ವಾಸ್ತವದಲ್ಲಿ ಏನಾಗಿದೆ ಎನ್ನುವುದನ್ನು ಅಧಿಕಾರಿಗಳು ಸದಸ್ಯರ ಗಮನಕ್ಕೆ ತರಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌ ಮಾತನಾಡಿ. ‘ವಸತಿ ಯೋಜನೆಗಳ ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿದರೂ ಅದು ಅಂತಿಮವಲ್ಲ. ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಬದಲಾವಣೆ ಮಾಡಲು ಅವಕಾಶ ಇದೆ’ ಎಂದು ಸ್ಪಷ್ಟಪಡಿಸಿದರು.

‘ಭಾಲ್ಕಿ ತಾಲ್ಲೂಕಿಗೆ ಮೂರು ವರ್ಷಗಳಲ್ಲಿ 17 ಸಾವಿರ ಮನೆಗಳು ಮಂಜೂರಾಗಿವೆ. 14 ಸಾವಿರ ಮನೆಗಳಲ್ಲಿ ಆರು ಸಾವಿರ ಮನೆಗಳಿಗೆ ಮಾತ್ರ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 8 ಸಾವಿರ ಫಲಾನುಭವಿಗಳು ಪಡೆದ ವಸತಿ ಯೋಜನೆಯ ಪರಿಶೀಲನಾ ಪತ್ರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ನಾಟ್‌ ಓಕೆ ಎಂದು ಬರೆದಿದ್ದಾರೆ. ತನಿಖೆ ಅವೈಜ್ಞಾನಿಕವಾಗಿದೆ ಎಂದು ಶಾಸಕರು ದೂರಿರುವ ಕಾರಣ ಸರ್ಕಾರ ಮರು ತನಿಖೆಗೆ ಆದೇಶ ನೀಡಿದೆ’ ಎಂದು ತಿಳಿಸಿದರು.

‘ಒಂದು ಚಿಕ್ಕ ಮನೆ ಕಟ್ಟಲು ಕನಿಷ್ಠ 250 ಚದರ ಅಡಿ ಜಾಗ ಬೇಕು. ಆದರೆ ಕೆಲ ಗ್ರಾಮಗಳಲ್ಲಿ 330 ಚದರ ಅಡಿಯ ಜಾಗದಲ್ಲಿ ಮನೆ ನಿರ್ಮಿಸಿ ಎರಡು ಬಾಗಿಲು ಹಚ್ಚಿ ಜಿಪಿಎಸ್‌ ಮಾಡಲಾಗಿದೆ. ಕೆಲ ಕಡೆ ಒಂದೇ ಮನೆಯ ಹೆಸರಲ್ಲಿ ಇಬ್ಬರು ಫಲಾನುಭವಿಗಳನ್ನು ಆಯ್ಕೆ ಮಾಡಿ ಹಣ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.

‘ಒಂದೇ ಮನೆಗೆ ಇಬ್ಬರು ಫಲಾನುಭವಿಗಳನ್ನು ಆಯ್ಕೆ ಮಾಡಿದ ಆರೋಪದ ಮೇಲೆ ಏಳು ಪಿಡಿಒಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ತಪ್ಪು ಮಾಡಿದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಇಒ ಸ್ಪಷ್ಟಪಡಿಸಿದರು.

‘ಕೆಲ ಪಿಡಿಒಗಳು ಸಾಮಾನ್ಯ ವರ್ಗದವರಿಗೆ ಕೊಡಬೇಕಿದ್ದ ವಸತಿಯನ್ನು ಪರಿಶಿಷ್ಟರಿಗೆ ಕೊಟ್ಟಿದ್ದಾರೆ. ಪರಿಶಿಷ್ಟರಿಗೆ ಕೊಡಬೇಕಿದ್ದ ಮನೆಗಳನ್ನು ಸಾಮಾನ್ಯರಿಗೆ ಹಂಚಿಕೆ ಮಾಡಿದ್ದಾರೆ. ಕೆಲ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ 300 ಫಲಾನುಭವಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಸಭೆಗೆ ತಿಳಿಸಿದರು.

‘ಜಿಲ್ಲಾಧಿಕಾರಿ ರಾಮಚಂದ್ರನ್‌ ಅಧ್ಯಕ್ಷತೆಯಲ್ಲಿ ತನಿಖೆಗೆ 40 ತಂಡಗಳನ್ನು ರಚಿಸಲಾಗಿದೆ. ಈ ತಂಡದಲ್ಲಿ ಭಾಲ್ಕಿ ತಾಲ್ಲೂಕಿನ ಅಧಿಕಾರಿಗಳು ಇಲ್ಲ. ವರದಿ ಬರಲು 15 ದಿನಗಳು ಬೇಕಾಗಲಿವೆ. ತಂಡಗಳು ಕೊಡುವ ಮಾಹಿತಿಯನ್ನು ಆಧರಿಸಿ ಕ್ರೋಡೀಕೃತ ವರದಿಯನ್ನು ಜಿಲ್ಲಾಧಿಕಾರಿಗೆ ಕೊಡಲಾಗುವುದು’ ಎಂದು ಹೇಳಿದರು.

ಬೀದರ್ ತಾಲ್ಲೂಕಿನ ಗ್ರಾಮಗಳಲ್ಲೂ ಮನೆಗಳ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಆರೋಪಗಳು ಕೇಳಿ ಬಂದಿವೆ. ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಸಿಪಿಒ, ಇಇ ಹುದ್ದೆಯಿಂದ ಬಿಡುಗಡೆ
ಜಿಲ್ಲಾ ಪಂಚಾಯಿತಿ ಸದಸ್ಯರೊಂದಿಗೆ ಅಸಹಕಾರ, ಕಾರ್ಯನಿರ್ವಹಣೆ ಹಾಗೂ ಅನುದಾನ ಬಳಕೆಗೆ ವಿಳಂಬ ಮಾಡಿದ ಆರೋಪದ ಮೇಲೆ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿ ಶರಣಬಸಯ್ಯ ಮಠಪತಿ ಹಾಗೂ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಬಾಬು ಪವಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ಬಿಡುಗಡೆ ಮಾಡಿ ಬೇರೆ ವಿಭಾಗಕ್ಕೆ ಕಳಿಸಿ ಕೊಡಲು ಸಭೆ ತೀರ್ಮಾನಿಸಿತು.

ಮುಖ್ಯ ಯೋಜನಾ ಅಧಿಕಾರಿ ಹಾಗೂ ಪಂಚಾಯತ್‌ ರಾಜ್‌ ಅಭಿವೃದ್ಧಿ ಇಲಾಖೆಯ ಇಇ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ವಿವಿಧ ಯೋಜನೆಗಳ ಅನುದಾನ ಬಳಕೆಯಾಗಿಲ್ಲ. ಹಲವು ಬಾರಿ ಸೂಚನೆ ನೀಡಿದರೂ ಸದಸ್ಯರ ಮಾತಿಗೆ ಬೆಲೆ ಕೊಡುತ್ತಿಲ್ಲ. ಕಳೆದ ವರ್ಷ ಇದೇ ಕಾರಣಕ್ಕೆ ಜಿಲ್ಲಾ ಪಂಚಾಯಿತಿ ಹಣ ಸರ್ಕಾರಕ್ಕೆ ಮರಳಿ ಹೋಗಿದೆ. ಈ ಬಾರಿಯೂ ವಾಪಸ್‌ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸದಸ್ಯರು ಫೈಲ್‌ಗಳನ್ನು ಹಿಡಿದುಕೊಂಡು ಕಚೇರಿ ಕಚೇರಿ ಅಲೆಯಬೇಕಾಗಿದೆ. ಕಡತಗಳ ವಿಲೇವಾರಿ ಸಕಾಲದಲ್ಲಿ ಆಗುತ್ತಿಲ್ಲ ಎಂದು ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಕೆಲಸ ಮಾಡದ ಅಧಿಕಾರಿಗಳು ನಮಗೆ ಅಗತ್ಯವಿಲ್ಲ. ತಕ್ಷಣ ಅವರನ್ನು ಬಿಡುಗಡೆ ಮಾಡಿ ಬೇರೆ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಖಟಕಚಿಂಚೋಳಿ ಸದಸ್ಯ ರವೀಂದ್ರ ರೆಡ್ಡಿ, ಗುಂಡು ರೆಡ್ಡಿ, ರಮೇಶ ಡಾಕುಳಗಿ, ಶಕುಂತಲಾ ಬೆಲ್ದಾಳೆ ಒತ್ತಾಯಿಸಿದರು. ಇದಕ್ಕೆ ಉಳಿದ ಸದಸ್ಯರೂ ಸಹಮತ ವ್ಯಕ್ತಪಡಿಸಿದರು.

ಉದ್ದೇಶಪೂರ್ವಕ ವಸತಿ ನಿಲಯಗಳ ನಿರ್ಲಕ್ಷ್ಯ
‘ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಳೆದ ವರ್ಷದ ಅನುದಾನವನ್ನು ಈವರೆಗೂ ವಿನಿಯೋಗಿಸಿಲ್ಲ. ವಿದ್ಯಾರ್ಥಿ ವಸತಿ ನಿಲಯಗಳಿಗೆ ಭೇಟಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸುತ್ತಿಲ್ಲ. ಅನೇಕ ವಿದ್ಯಾರ್ಥಿ ವಸತಿ ನಿಲಯಗಳು ಇನ್ನೂ ನಿರ್ಮಾಣದ ಹಂತದಲ್ಲಿಯೇ ಇವೆ. ಜಿಲ್ಲೆಯಲ್ಲಿ ಮೇಲ್ವಿಚಾರಣೆ ಮಾಡುವವರೇ ಇಲ್ಲ’ ಎಂದು ರಮೇಶ ಡಾಕುಳಗಿ ಆರೋಪಿಸಿದರು.

‘ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಪರಿಶಿಷ್ಟ ವಿದ್ಯಾರ್ಥಿಗಳ ವಸತಿ ನಿಲಯಗಳ ನಿರ್ಲಕ್ಷ್ಯ ಮಾಡುತ್ತಿದ್ದಾರೆ, ಅನುದಾನವನ್ನು ಬಳಸಿಕೊಳ್ಳುತ್ತಿಲ್ಲ. ಎಸ್‌ಸಿಪಿ, ಟಿಎಸ್‌ಪಿ ಅನುದಾನದ ಸ್ಥಿತಿಯೂ ಇದೇ ರೀತಿಯಾಗಿದೆ. ಪರಿಶಿಷ್ಟರಿಗೆ ಮೀಸಲಾದ ಹಣ ಬಳಸದಿದ್ದರೆ ಅಪರಾಧವಾಗಲಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಬೇಕು ಎನ್ನುವ ನಿಯಮ ಇದೆ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.

ಅನರ್ಹರ ಅರ್ಜಿ ಪುರಸ್ಕೃತ
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಸಲ್ಲಿಸಿದ 57 ಜನರಲ್ಲಿ 50 ಜನರ ಅರ್ಜಿಗಳು ತಿರಸ್ಕೃತವಾಗಿವೆ. ಏಳು ಅರ್ಜಿಗಳು ಮಾತ್ರ ಪುರಸ್ಕೃತವಾಗಿವೆ. ತಿರಸ್ಕೃತ ಅರ್ಜಿಯಲ್ಲಿನ ಒಬ್ಬ ಮಹಿಳೆಯ ಅರ್ಜಿಯನ್ನು ಅಧಿಕಾರಿಗಳು ಮತ್ತೆ ಪರಿಶೀಲಿಸಿ ಅವಕಾಶ ಮಾಡಿಕೊಟ್ಟಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸದಸ್ಯ ಗುಂಡು ರೆಡ್ಡಿ ಆರೋಪಿಸಿದರು.

ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ₹ 6.2 ಕೋಟಿ ಅನುದಾನ ಬಾಕಿ ಉಳಿದಿದೆ. ಜಿಲ್ಲೆಯ ಎಲ್ಲ ಅಂಗನವಾಡಿಗಳ ದುರಸ್ತಿ ಸಾಧ್ಯವಾಗುವಂತೆ ಎಲ್ಲ ಕ್ಷೇತ್ರಗಳಿಗೂ ಅನುದಾನ ಸಮಾನ ಹಂಚಿಕೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ನಂತರ ಸಭೆ ಅದಕ್ಕೆ ಅನುಮೋದನೆ ನೀಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು