ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಂದ ಮಕ್ಕಳ ವಿಚಾರಣೆ ಪ್ರಕರಣ: ಎಸ್ಪಿ ವರದಿ ಕೇಳಿದ ಮಕ್ಕಳ ಆಯೋಗ

ಶಾಹೀನ್ ಶಾಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ನಾಟಕ ಪ್ರಕರಣ ಮಕ್ಕಳ ವಿಚಾರಣೆ
Last Updated 5 ಫೆಬ್ರುವರಿ 2020, 14:45 IST
ಅಕ್ಷರ ಗಾತ್ರ

ಬೀದರ್: ಶಾಹೀನ್ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಕ್ಕಳ ವಿಚಾರಣೆ ಮಾಡಿದ್ದಕ್ಕೆ ಮಕ್ಕಳ ಆಯೋಗವು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಿಂದ ವರದಿ ಕೇಳಿದೆ.

ರಾಜ್ಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷರ ಸೂಚನೆಯ ಮೇರೆಗೆ ಸದಸ್ಯೆ ಜಯಶ್ರೀ ಅವರು ಬುಧವಾರ ಬೀದರ್‌ಗೆ ಬಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿದರು.

ಮಕ್ಕಳಿಂದ ಮಾಹಿತಿ ಪಡೆಯುವಾಗ ತನಿಖಾ ಅಧಿಕಾರಿ ಬಿಟ್ಟು ಇಬ್ಬರು ಕಾನ್‌ಸ್ಟೆಬಲ್‌ಗಳು ಸಮವಸ್ತ್ರದಲ್ಲಿ ಇರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ನಿಯಮಾವಳಿಯಂತೆ ಮಕ್ಕಳಿಂದ ಮಾಹಿತಿ ಪಡೆಯಬೇಕು. ಮಕ್ಕಳ ಮೇಲೆ ಒತ್ತಡ ಹಾಕಬಾರದೆಂದು ತಿಳಿಸಿದರು ಎಂದು ಹೇಳಲಾಗಿದೆ.

ಬಾಲಕಿಯ ಕ್ಷೇಮ ವಿಚಾರಣೆ:ದೇಶದ್ರೋಹ ಪ್ರಕರಣದಲ್ಲಿ ಬಂಧಿಸಲಾದ ಮಹಿಳೆಯ 10 ವರ್ಷದ ಮಗಳು ವಾಸ್ತವ್ಯ ಮಾಡಿರುವ ಸ್ಥಳಕ್ಕೆ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಭೇಟಿ ನೀಡಿ ಬಾಲಕಿಯ ಕ್ಷೇಮ ವಿಚಾರಿಸಿದರು .

ಮಕ್ಕಳ ಹಕ್ಕು ಕಲ್ಯಾಣ ಸಮಿತಿಯ ಅಧ್ಯಕ್ಷೆ ಕವಿತಾ ಹುಷಾರೆ, ಸದಸ್ಯರಾದ ಧನಲಕ್ಷ್ಮಿ ಪಾಟೀಲ, ಮಂಜುಳಾ ಎಂ. ಹಾಗೂ ಫಾದರ್‌ ಸ್ಟಿವನ್‌ ನೇತೃತ್ವ ತಂಡವು ಬಾಲಕಿಯನ್ನು ನೋಡಿಕೊಳ್ಳುತ್ತಿರುವ ಕುಟುಂಬದ ಸದಸ್ಯರೊಂದಿಗೂ ಸಮಾಲೋಚನೆ ನಡೆಸಿತು.

ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿಕೆ:

ಶಾಹೀನ್ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ವಿವಾದಾತ್ಮಕ ನಾಟಕ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಹೀನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯ ಫೆಬ್ರುವರಿ 11ಕ್ಕೆ ಮುಂದೂಡಿದೆ.

ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್, ಪ್ರಮುಖರಾದ ಹಕ್‌ ಕಾಲೊನಿಯ ಅಲ್ಲಾವುದ್ದಿನ್‌ ಸಯ್ಯದ್‌ ಪಾಶಾ ಹುಸೇನಿ, ಅಬ್ದುಲ್‌ ಖಾಲಿಕ್‌ ಅಬ್ದುಲ್‌ ರಜಾಕ್, ಸಿದ್ಧಿ ತಾಲೀಂನ ಮಹಮ್ಮದ್‌ಬಿಲ್ಲಾ ಇನಾಮದಾರ್ ಗುಲಾಂನಬಿ ಇನಾಮದಾರ್, ಗೋಲೆಖಾನಾದ ಮಹಮ್ಮದ್‌ ಮೆಹತಾಬ್ ಮಹಮ್ಮದ್‌ ಅಬ್ದುಲ್‌ ಕರೀಂ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ ವಿಚಾರಣೆಯನ್ನು ಮಂದೂಡಿತು.

ವಿಡಿಯೊ ವೈರಲ್‌ ಮಾಡಿದ ಯುಸೂಫ್‌ ರಹೀಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಫೆಬ್ರುವರಿ 12ಕ್ಕೆ ಮುಂದೂಡಿದೆ.

‘ಶಾಹೀನ್‌ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕ ಮಾಡಿದ 6ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ತಾಯಿ ಅಂಜುಮುನ್ನೀಸಾ ಬಂಧನದ ಅವಧಿಯನ್ನು 2ನೇ ಹೆಚ್ಚುವರಿ ಸಿವಿಲ್‌ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಫೆಬ್ರುವರಿ 10ರ ವರೆಗೆ ವಿಸ್ತರಿಸಿದೆ’ ಎಂದು ವಕೀಲ ಕೇಶವರಾವ್ ಶ್ರೀಮಾಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT