ಬುಧವಾರ, ಆಗಸ್ಟ್ 10, 2022
20 °C
ಮಾಂಜ್ರಾ ನದಿ ನೀರು ಹೊಲಕ್ಕೆ ನುಗ್ಗಿ ಬೆಳೆ ಹಾನಿ: ನ್ಯಾಯಾಲಯ ಆದೇಶ ಪಾಲಿಸದ ಅಧಿಕಾರಿಗಳು

ಪರಿಹಾರಕ್ಕಾಗಿ ಮುಖ್ಯ ಕಾರ್ಯದರ್ಶಿ ಮೊರೆ ಹೋದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮಳೆಗಾಲದಲ್ಲಿ ಪ್ರತಿ ವರ್ಷ ಮಾಂಜ್ರಾ ನದಿ ನೀರು ಹೊಲಕ್ಕೆ ನುಗ್ಗಿ ಬೆಳೆ ಹಾನಿ ಅನುಭವಿಸುತ್ತಿರುವ ಔರಾದ್ ತಾಲ್ಲೂಕಿನ ಕೌಠಾ(ಬಿ) ಗ್ರಾಮದ ರೈತ ಕಾಶೀನಾಥ ವೀರಶೆಟ್ಟಿ ಬಿರಾದಾರ ಅವರು ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೊರೆ ಹೋಗಿದ್ದಾರೆ.

ಜಿಲ್ಲಾಧಿಕಾರಿ ಮೂಲಕ ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ, ಬೀದರ್ ಉಪ ವಿಭಾಗಾಧಿಕಾರಿ, ನಗರಸಭೆ ಆಯುಕ್ತ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಔರಾದ್ ತಹಶೀಲ್ದಾರರಿಗೆ ಮನವಿ ಪತ್ರದ ಪ್ರತಿಗಳನ್ನು ಕಳುಹಿಸಿದ್ದಾರೆ.

ಮಾಂಜ್ರಾ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿ ನೀರು ಸಂಗ್ರಹಿಸಿ ಬೀದರ್ ನಗರಕ್ಕೆ ಪೂರೈಸುವುದಕ್ಕಾಗಿ ಬೀದರ್ ನಗರಸಭೆಯು 2001-02 ರಲ್ಲಿ ಕೌಠಾ(ಬಿ) ಗ್ರಾಮದ ಸರ್ವೇ ಸಂಖ್ಯೆ 139/2 ರಲ್ಲಿರುವ ತಮ್ಮ 12 ಗುಂಟೆ ಜಮೀನು ಸ್ವಾಧೀನ ಪಡಿಸಿಕೊಂಡಿದೆ. ಆದರೆ, ತಡೆಗೋಡೆ ವೈಜ್ಞಾನಿಕವಾಗಿ ನಿರ್ಮಿಸದ ಕಾರಣ ಮಳೆ ಸುರಿದಾಗ ಹಾಗೂ ಪ್ರವಾಹ ಬಂದಾಗ ತಮ್ಮ ಪಕ್ಕದ ಜಮೀನಿಗೆ ನದಿ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದೆ. ನೀರಿನ ರಭಸಕ್ಕೆ ಜಮೀನಿನಲ್ಲಿಯ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ ಎಂದು ದೂರಿದ್ದಾರೆ.

ನಗರಸಭೆ ಹಾಗೂ ಸಂಬಂಧಪಟ್ಟವರಿಗೆ ಪ್ರತಿ ವರ್ಷ ಮನವಿ ಸಲ್ಲಿಸುತ್ತಲೇ ಬಂದರೂ, ತಡೆಗೋಡೆಯ ಗೇಟುಗಳನ್ನು ತೆರೆಯುತ್ತಿಲ್ಲ. ಹೀಗಾಗಿ 18 ವರ್ಷಗಳ ಅವಧಿಯಲ್ಲಿ ನದಿ ನೀರಿನಿಂದ ಹಲವಾರು ಬಾರಿ ಬೆಳೆ ನಷ್ಟವಾಗಿದೆ. ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಭೂಮಿ ಸಂಪೂರ್ಣ ಸತ್ವ ಕಳೆದುಕೊಂಡಿದೆ. ಸಮೃದ್ಧ ಬೆಳೆ ಬೆಳೆಯಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಜಮೀನಿನಲ್ಲಿಯ ಮಣ್ಣು ಕೊಚ್ಚಿಕೊಂಡು ಹೋಗಿ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ಕೋರಿ ಹೈಕೋರ್ಟ್‍ನ ಕಲಬುರ್ಗಿ ಪೀಠದ ಮೊರೆ ಹೋಗಿದ್ದು, ನ್ಯಾಯಾಲಯವು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಆದೇಶವನ್ನೂ ನೀಡಿದೆ. ಆದರೆ, ಆರು ತಿಂಗಳು ಕಳೆದರೂ ಸಂಬಂಧಪಟ್ಟವರು ಯಾವುದೇ ಪರಿಹಾರ ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.

ಕೂಡಲೇ ಬೆಳೆ ಹಾನಿ ಹಾಗೂ ಮಣ್ಣು ಕೊಚ್ಚಿಕೊಂಡು ಹೋಗಿ ಆಗಿರುವ ನಷ್ಟಕ್ಕೆ ಪರಿಹಾರ ಒದಗಿಸಲು ಹಾಗೂ ತಡೆಗೋಡೆ ಗೇಟುಗಳನ್ನು ತೆರೆದು ಮುಂದೆ ಆಗಬಹುದಾದ ಹಾನಿ ತಪ್ಪಿಸಲು ಸಂಬಂಧಪಟ್ಟವರಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು