ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣದ ಅಭಿವೃದ್ಧಿ ಆರನೇ ಗ್ಯಾರಂಟಿ: ವಿಜಯಸಿಂಗ್ ಭರವಸೆ

Published 4 ಏಪ್ರಿಲ್ 2024, 16:14 IST
Last Updated 4 ಏಪ್ರಿಲ್ 2024, 16:14 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಸ್ಥಳೀಯರ ಸುರಕ್ಷತೆ ನಮ್ಮ ಆರನೇ ಗ್ಯಾರಂಟಿ ಆಗಿದೆ’ ಎಂದು ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಹೇಳಿದರು.

ನಗರದ ಎಂ.ಎಂ.ಬೇಗ್ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾನು ಸೋತಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣ ನಾನು ಸೂಚಿಸಿದ ಎಲ್ಲ ಕೆಲಸಗಳು ಸುಗಮವಾಗಿ ಆಗುತ್ತಿವೆ. ಕಾರ್ಯಕರ್ತರ ಮೇಲಿನ ದಬ್ಬಾಳಿಕೆ, ಸೌರ್ಜನ್ಯಕ್ಕೆ ಕಡಿವಾಣ ಬಿದ್ದಿದೆ. ಒಂದು ವೇಳೆ ಸಾಗರ ಖಂಡ್ರೆ ಆಯ್ಕೆಯಾದರೆ ಅವರು ಮತ್ತು ಸಚಿವ ಈಶ್ವರ ಖಂಡ್ರೆಯವರು ಈ ಕಡೆ ವಿಶೇಷ ಕಾಳಜಿ ವಹಿಸುವುದು ನಿಶ್ಚಿತ. ಬಸವಕಲ್ಯಾಣದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ದೊರಕುವುದು ಕಠಿಣ ಎನ್ನಲಾಗುತ್ತದೆ. ಅದನ್ನು ಸುಳ್ಳು ಮಾಡುವುದಕ್ಕಾಗಿ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ’ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಮಾತನಾಡಿ,‘ನನ್ನನ್ನು ಬಿಜೆಪಿಯವರು ಸಣ್ಣ ವಯಸ್ಸಿನವ ಎನ್ನುತ್ತಿದ್ದಾರೆ. ಆದರೆ, ಈ ಬಗ್ಗೆ ಇಬ್ಬರೂ ಅಭ್ಯರ್ಥಿಗಳನ್ನು ಮುಖಾಮುಖಿಯಾಗಿ ಕೂಡಿಸಿ ಡಿಬೇಟ್ ನಡೆಸಲಿ. ಆಗ ಯಾರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇದೆ ಮತ್ತು ಯಾರು ಜ್ಞಾನವಂತರು ಎಂಬುದು ಗೊತ್ತಾಗುತ್ತದೆ’ ಎಂದರು.

‘ಭಗವಂತ ಖೂಬಾ 10 ವರ್ಷ ಸಂಸದರಾದರೂ ಈ ಕ್ಷೇತ್ರಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಯಾವುದೇ ಅಭಿವೃದ್ಧಿ ಕೈಗೊಂಡಿಲ್ಲ. ಎರಡೂ ಸಲ ಅನ್ಯರ ಹೆಸರಲ್ಲಿ ಚುನಾವಣೆ ಗೆದ್ದು ಈ ಬಾರಿಯೂ ಹಾಗೆಯೇ ಆಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ’ ಎಂದು ಹೇಳಿದರು.

ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಮಾತನಾಡಿ,‘ಜಿಲ್ಲೆಯ ಅಭಿವೃದ್ಧಿಯಲ್ಲಿ ಖಂಡ್ರೆ ಪರಿವಾರದ ಪಾಲು ದೊಡ್ಡದಿದೆ. ಹಳೆ ಬೇರು ಹೊಸ ಚಿಗುರು ಎನ್ನುವಂತೆ ಆ ಕುಟುಂಬದ ಯುವಕ ಸಾಗರ ಸಹ ಪ್ರತಿಭಾವಂತನಾಗಿದ್ದು ಅವರನ್ನು ಗೆಲ್ಲಿಸಬೇಕು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂಖಾನ್, ವಿಧಾನಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಭೀಮರಾವ್ ಪಾಟೀಲ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ನಗರ ಘಟಕದ ಅಧ್ಯಕ್ಷ ಅಜರಅಲಿ ನವರಂಗ, ಪ್ರಮುಖರಾದ ಧನರಾಜ ತಾಳಂಪಳ್ಳಿ, ಶಾಂತಪ್ಪ ಪಾಟೀಲ, ಬಾಬು ಹೊನ್ನಾನಾಯಕ್, ರವೀಂದ್ರ ಗಾಯಕವಾಡ, ಸುರೇಶ ಮೋರೆ, ಸದಾನಂದ ಬಿರಾದಾರ, ಸಿಕಂದರ ಶಿಂಧೆ, ಅಮೃತ ಚಿಮಕೋಡ ಮಾತನಾಡಿದರು.

ಬಸವಕಲ್ಯಾಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವರಾದ ಈಶ್ವರ ಖಂಡ್ರೆ ರಹೀಂಖಾನ್ ಅಭ್ಯರ್ಥಿ ಸಾಗರ ಖಂಡ್ರೆ ವಿಜಯಸಿಂಗ್ ಅವರನ್ನು ಪುಷ್ಪಮಾಲೆ ಹಾಕಿ ಸತ್ಕರಿಸಲಾಯಿತು
ಬಸವಕಲ್ಯಾಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವರಾದ ಈಶ್ವರ ಖಂಡ್ರೆ ರಹೀಂಖಾನ್ ಅಭ್ಯರ್ಥಿ ಸಾಗರ ಖಂಡ್ರೆ ವಿಜಯಸಿಂಗ್ ಅವರನ್ನು ಪುಷ್ಪಮಾಲೆ ಹಾಕಿ ಸತ್ಕರಿಸಲಾಯಿತು
ಕಾಂಗ್ರೆಸ್ ಸಭೆಯಲ್ಲಿ ಸಚಿವರಾದ ಈಶ್ವರ ಖಂಡ್ರೆ ರಹೀಂಖಾನ್ ಅಭ್ಯರ್ಥಿ ಸಾಗರ ಖಂಡ್ರೆ ವಿಜಯಸಿಂಗ್ ಮಾಲಾ ನಾರಾಯಣರಾವ್ ಕಾರ್ಯಕರ್ತರ ಸಾಲಿನಲ್ಲಿ ಕುಳಿತು ಗಮನ ಸೆಳೆದರು
ಕಾಂಗ್ರೆಸ್ ಸಭೆಯಲ್ಲಿ ಸಚಿವರಾದ ಈಶ್ವರ ಖಂಡ್ರೆ ರಹೀಂಖಾನ್ ಅಭ್ಯರ್ಥಿ ಸಾಗರ ಖಂಡ್ರೆ ವಿಜಯಸಿಂಗ್ ಮಾಲಾ ನಾರಾಯಣರಾವ್ ಕಾರ್ಯಕರ್ತರ ಸಾಲಿನಲ್ಲಿ ಕುಳಿತು ಗಮನ ಸೆಳೆದರು
‘ಖಂಡ್ರೆ ಪರಿವಾರದ ಕೊಡುಗೆ ಅಪಾರ’
ಬಸವಕಲ್ಯಾಣ: ‘ಬಸವಕಲ್ಯಾಣದ ಅಭಿವೃದ್ಧಿಯಲ್ಲಿ ಖಂಡ್ರೆ ಪರಿವಾರದಿಂದ ಸಾಕಷ್ಟು ಕೊಡುಗೆ ನೀಡಿದರೂ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಖಂಡ್ರೆ ಬಸವಣ್ಣನವರಿಗೆ ಲಿಂಗಾಯತರಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ನಗರದ ಶಿವಪುರ ರಸ್ತೆಯಲ್ಲಿ ಗುರುವಾರ ಲೋಕಸಭೆ ಚುನಾವಣೆ ಅಂಗವಾಗಿ ಕಾಂಗ್ರೆಸ್ ಸಂಪರ್ಕ ಕಚೇರಿ ಉದ್ಘಾಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‘ನಮ್ಮ ತಂದೆ ಭೀಮಣ್ಣ ಖಂಡ್ರೆಯವರು ಭಾಲ್ಕಿ ಚನ್ನಬಸವ ಪಟ್ಟದ್ದೇವರ ಜೊತೆಯಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ ಶ್ರಮಿಸಿದ್ದರು. ಈಗ ಕಟ್ಟುತ್ತಿರುವ ಬೃಹತ್ ಮಂಟಪದ ಕಾರ್ಯ ಆರಂಭ ಆಗುವುದಕ್ಕೆ ನಾನು ಸತತವಾಗಿ ಪ್ರಯತ್ನಿಸಿದ್ದೇನೆ’ ಎಂದು ಹೇಳಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಾರೆ. ಭಗವಂತ ಖೂಬಾ ಮಾತ್ರ ಹುಸಿ ಭರವಸೆಗಳನ್ನು ನೀಡಿರುವುದು ಬಿಟ್ಟರೆ 10 ವರ್ಷದಲ್ಲಿ ಯಾವುದೇ ಮಹತ್ವದ ಅಭಿವೃದ್ಧಿ ಕೈಗೊಂಡಿಲ್ಲ’ ಎಂದರು. ‘ಲೋಕಸಭೆ ಚುನಾವಣೆವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ ನೀಡುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಐದು ವರ್ಷ ಇರುವುದರಿಂದ ಅಲ್ಲಿಯ ತನಕ ಜನರಿಗೆ ಯೋಜನೆಗಳ ಲಾಭ ಮುಟ್ಟಲಿದೆ. ಸಾಗರ ಖಂಡ್ರೆ ಕಿರಿಯ ವಯಸ್ಸಿನವರಾದರೂ ಅವರಿಗೆ ಜನರ ಬಗ್ಗೆ ಕಾಳಜಿ ಇದೆ. ಉನ್ನತ ಶಿಕ್ಷಣ ಪಡೆದು ಅಪಾರ ಜ್ಞಾನ ಹೊಂದಿದ್ದಾರೆ. ಅವರನ್ನು ಗೆಲ್ಲಿಸಬೇಕು’ ಎಂದು ಮತದಾರರಿಗೆ ಕೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT