ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಶಾಲೆ ಶಿಕ್ಷಕರು ಅನ್ಯ ವೃತ್ತಿ ಕಡೆಗೆ

ವೇತನ ನೀಡದ ಖಾಸಗಿ ಶಿಕ್ಷಣ ಸಂಸ್ಥೆಗಳು, ಪರಿಹಾರ ಘೋಷಿಸದ ಸರ್ಕಾರ
Last Updated 16 ಮೇ 2021, 2:52 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಹೇಳಲಾಗುತ್ತದೆ. ಆದರೆ ಕೊರೊನಾ ದಿಂದಾಗಿ ರಾಜ್ಯದಾದ್ಯಂತ ಶಾಲೆಗಳು ಬಂದ್ ಆಗಿರುವುದರಿಂದ ಖಾಸಗಿ ಶಾಲೆಯ ಶಿಕ್ಷಕರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿಕ್ಷಕ ವೃತ್ತಿಯೇ ಬೇಡವೆನ್ನುವಷ್ಟು ಜಿಗುಪ್ಸೆ ಹೊಂದಿದ್ದಾರೆ.

ಕಳೆದ ವರ್ಷದಲ್ಲಿ ಕಾಣಿಸಿಕೊಂಡ ಕೊರೊನಾದಿಂದಾಗಿ ಖಾಸಗಿ ಶಾಲೆಗಳ ಶಿಕ್ಷಕರು ಇಲ್ಲಿಯವರೆಗೆ ಒಂದಿಲ್ಲೊಂದು ಸಮಸ್ಯೆಯ ಸುಳಿಗೆ ಸಿಲುಕಿ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.

‘ನಾವು ಶಾಲೆಯ ಆಡಳಿತ ಮಂಡಳಿಗೂ ಬೇಡವಾಗಿದ್ದೇವೆ. ಸರ್ಕಾರಕ್ಕೂ ಬೇಡವಾಗಿದ್ದೇವೆ. ನಮ್ಮ ಶಾಲೆಗಳು ಮುಚ್ಚಿದಾಗಿನಿಂದ ಕೆಲಸ, ವೇತನವಿಲ್ಲದೆ ಬೀದಿಗೆ ಬಿದ್ದಿದ್ದೇವೆ’ ಎಂದು ಅನೇಕ ಶಿಕ್ಷಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

‘ಕಳೆದ ವರ್ಷ ಲಾಕ್‌ಡೌನ್‌ ಆದಾಗಿನಿಂದ ನಮಗೆ ವೇತನ ನೀಡುತ್ತಿಲ್ಲ. ಬೇರೆ ಕೆಲಸ ಗೊತ್ತಿಲ್ಲ. ಮತ್ತೊಂದು ಆದಾಯದ ಮೂಲವೂ ಇಲ್ಲ. ಹೀಗಾಗಿ ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಖಾಸಗಿ ಶಾಲೆ ಶಿಕ್ಷಕ ಗದಗಯ್ಯ ಸ್ವಾಮಿ.

‘ನಾನು ದೈಹಿಕವಾಗಿ ಅಂಗವಿಕಲನಾಗಿದ್ದೇನೆ. ಬೋಧನೆ ಬಿಟ್ಟರೆ ಬೇರೆ ಕೆಲಸ ಮಾಡಲು ಆಗುವುದಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ನನ್ನ ಮಡದಿ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಾಳೆ. ಇದರಿಂದ ಬಂದ ಹಣದಿಂದ ಸದ್ಯ ಜೀವನ ಸಾಗಿಸುತ್ತಿದ್ದೇವೆ’ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ ಶಿಕ್ಷಕ ವೈಜಿನಾಥ ಬಿರಾದಾರ.

‘ನನ್ನ ಮನೆಯವರು ಜೀಪ್ ನಡೆಸುತ್ತಾರೆ. ನಾನು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಇದರಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದೆವು. ಆದರೆ ಕೋವಿಡ್ ಹರಡುವಿಕೆಯಿಂದ ಎಲ್ಲೆಡೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ನನಗೂ ವೇತನ ಇಲ್ಲ, ಗಂಡನ ಕೈಯಲ್ಲೂ ಕೆಲಸವಿಲ್ಲ. ಹೀಗಾಗಿ ಹಣಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದು ಖಾಸಗಿ ಶಾಲಾ ಶಿಕ್ಷಕಿ ಗಂಗಾಂಬಿಕಾ ಬಿರಾದಾರ.

‘ಕೋವಿಡ್‌ನಿಂದಾಗಿ ಶಾಲೆಗಳು ಮುಚ್ಚಿದ್ದು, ಶಾಲೆಗಳ ಆಡಳಿತ ಮಂಡಳಿಗಳು ವೇತನ ನೀಡಿಲ್ಲ. ಶಿಕ್ಷಕರು, ಸಿಬ್ಬಂದಿ ತಮ್ಮ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ರಾಜ್ಯ ಸರ್ಕಾರ ನೆರವಿಗೆ ಬರಬೇಕು’ ಎಂದು ಶಿಕ್ಷಕ ರಮೇಶ ತಿಬಶೆಟ್ಟಿ ಆಗ್ರಹಿಸುತ್ತಾರೆ.

‘ಖಾಸಗಿ ಆಡಳಿತ ಮಂಡಳಿಯವರಲ್ಲಿ ಹಣವಿಲ್ಲ’

‘ಯಾವುದೇ ಪಾಲಕರಿಗೆ ಶುಲ್ಕ ಕಟ್ಟಲು ಒತ್ತಾಯ ಮಾಡಬಾರದು ಎಂದು ಸರ್ಕಾರ ಆದೇಶ ಮಾಡಿತ್ತು. ಇದರಿಂದ ದುಡ್ಡಿರುವ ಅನೇಕ ಪಾಲಕರು ಸಹ ಶುಲ್ಕವನ್ನು ಪಾವತಿಸಿಲ್ಲ. ಈ ಕಾರಣದಿಂದ ಆಡಳಿತ ಮಂಡಳಿಯವರಲ್ಲಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ವೇತನ ನೀಡಿಲ್ಲ’ ಎಂದು ಖಾಸಗಿ ಶಾಲೆಯ ಮುಖ್ಯಸ್ಥ ಮುಕರಮ್ ತಿಳಿಸುತ್ತಾರೆ.

ಜಿಲ್ಲೆಯಲ್ಲಿ 10 ಸಾವಿರ ಶಿಕ್ಷಕರು

‘ಜಿಲ್ಲೆಯಲ್ಲಿ ಸುಮಾರು 800ಕ್ಕೂ ಹೆಚ್ಚಿನ ಖಾಸಗಿ ಶಾಲೆಗಳ ಸುಮಾರು ಹತ್ತು ಸಾವಿರ ಶಿಕ್ಷಕರು ಕಾರ್ಯ ನಿರ್ವಹಿಸುತ್ತಾರೆ. ಆದರೆ ಸದ್ಯ ಎಲ್ಲರೂ ಕೆಲಸವಿಲ್ಲದೆ ಹತಾಶರಾಗಿದ್ದಾರೆ’ ಎಂದು ಖಾಸಗಿ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಪತಂಗೆ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT