ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ‘ಶತಕ’ ಬಿಡದ ಟೊಮೊಟೊ, ತರಕಾರಿ ರಾಜ ಬದನೆಕಾಯಿಗೂ ಬಂತು ಬೆಲೆ

Last Updated 26 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ತರಕಾರಿ ಮಾರುಕಟ್ಟೆಯ ಮೇಲೆ ಟೊಮೆಟೊ ಹಿಡಿತ ಸಾಧಿಸಿದೆ. ಎರಡು ವಾರಗಳಿಂದ ಟೊಮೆಟೊ ಬೆಲೆ ಕೆಜಿಗೆ ₹ 100 ಇದೆ. ಟೊಮೆಟೊ ಬೆಳೆದ ರೈತರಿಗೆ ಕೈತುಂಬ ಹಣ ಸಂಪಾದನೆಯಾಗುತ್ತಿದೆ. ಅಧಿಕ ಬೆಲೆ ಇರುವ ಕಾರಣ ವ್ಯಾಪಾರಸ್ಥರು ಟೊಮೆಟೊ ಹುಡುಕಿಕೊಂಡು ರೈತರ ಹೊಲಗಳಿಗೆ ಹೋಗುತ್ತಿದ್ದಾರೆ.

ಟೊಮೆಟೊ ಬಳಸದೇ ಮಾಡುವ ಅಡುಗೆ ಸ್ವಾದ ಕಡಿಮೆ. ಹೀಗಾಗಿ ಗೃಹಿಣಿಯರು ಟೊಮೆಟೊ ಬಿಟ್ಟು ಅಡುಗೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ.

ಚಿನ್ನದ ಬೆಲೆ ಇಳಿದರೆ, ಟೊಮೆಟೊ ಬೆಲೆ ಏರಿದೆ. ಗೃಹಿಣಿಯರು ಆಭರಣದ ಬದಲು ಟೊಮೆಟೊ ಸರ ಕೊರಳಲ್ಲಿ ಹಾಕಿಕೊಂಡು ಸಂಭ್ರಮಿಸುತ್ತಿರುವ ಹಾಸ್ಯಭರಿತ ಕಾರ್ಟೂನ್‌ ಹಾಗೂ ಸಂದೇಶಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ.

ಹೊಸ ಟೊಮೆಟೊ ಮಾರುಕಟ್ಟೆಗೆ ಬರಲು ವಿಳಂಬವಾಗಲಿದೆ. ಪ್ರತಿಕೂಲ ಹವಾಮಾನ ಇರುವ ಕಾರಣ ಟೊಮೆಟೊ ಬೆಲೆ ಇನ್ನೂ ಒಂದು ವಾರ ಕಡಿಮೆಯಾಗದು ಎಂದು ತರಕಾರಿ ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಟೊಮೆಟೊಗೆ ಅಧಿಕಾರ ಕೊಟ್ಟು ಕೈಚೆಲ್ಲಿದ್ದ ತರಕಾರಿ ರಾಜ ಬದನೆಕಾಯಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ. ಪ್ರತಿ ಕೆ.ಜಿಗೆ ₹ 30 ಇದ್ದ ಬದನೆಕಾಯಿ ಬೆಲೆ ₹ 50ಗೆ ಏರಿದ್ದು, ಅರ್ಧ ಶತಕ ಬಾರಿಸಿದ ಖುಷಿಯಲ್ಲಿದೆ. ಬೀಟ್‌ರೂಟ್‌ ಹಾಗೂ ಬೆಂಡೆಕಾಯಿ ಬೆಲೆಯೂ ದುಪ್ಪಟ್ಟಾಗಿದೆ.

ಪ್ರತಿ ಕ್ವಿಂಟಲ್‌ಗೆ ಬೀಟ್‌ರೂಟ್‌ ಬೆಲೆ ₹ 4 ಸಾವಿರ, ಬದನೆಕಾಯಿ, ಬೆಂಡೆಕಾಯಿ ₹ 3 ಸಾವಿರ, ಗಜ್ಜರಿ, ಪಾಲಕ್‌ ಹಾಗೂ ಮೆಂತೆ ಸೊಪ್ಪು ₹ 1 ಸಾವಿರ ಹೆಚ್ಚಾಗಿದೆ.

ಹಸಿ ಮೆಣಸಿನಕಾಯಿ ಬೆಲೆ ಅರ್ಧಕ್ಕೆ ಇಳಿದಿದೆ. ಪ್ರತಿಕ್ವಿಂಟಲ್‌ಗೆ ₹ 8 ಸಾವಿರ ತಲುಪಿದ್ದ ಮೆಣಸಿನಕಾಯಿ ₹ 4 ಸಾವಿರಕ್ಕೆ ಕುಸಿದಿದೆ. ಬೆಳ್ಳುಳ್ಳಿ ಹಾಗೂ ಬೀನ್ಸ್‌ ಬೆಲೆ ₹ 2 ಸಾವಿರ ಕಡಿಮೆಯಾಗಿದೆ. ಹೂಕೋಸು ₹ 3 ಸಾವಿರ, ಹಿರೇಕಾಯಿ, ಚವಳೆಕಾಯಿ ₹ 2 ಸಾವಿರ, ನುಗ್ಗೆಕಾಯಿ ₹ 6 ಸಾವಿರ, ಡೊಣ ಮೆಣಸಿನಕಾಯಿ ಹಾಗೂ ಸಬ್ಬಸಗಿ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಇಳಿದಿದೆ.

ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಸೋರೆಕಾಯಿ, ಅವರೆಕಾಯಿ, ಎಲೆಕೋಸು, ತೊಂಡೆಕಾಯಿ, ಕೊತಂಬರಿ ಹಾಗೂ ಕರಿಬೇವು ಬೆಲೆ ಮಾತ್ರ ಸ್ಥಿರವಾಗಿದೆ.

ಬೆಳಗಾವಿಯಿಂದ ಹಸಿ ಮೆಣಸಿನಕಾಯಿ, ಸೋಲಾಪುರದಿಂದ ಬೆಳ್ಳುಳ್ಳಿ, ಈರುಳ್ಳಿ, ತೆಲಂಗಾಣದ ಜಿಲ್ಲೆಗಳಿಂದ ಆಲೂಗಡ್ಡೆ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಸೋರೆಕಾಯಿ, ಅವರೆಕಾಯಿ, ಚವಳೆಕಾಯಿ ಆವಕವಾಗಿದೆ. ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಂದ ಎಲೆಕೋಸು, ಹೂಕೋಸು, ಸಬ್ಬಸಗಿ, ಬದನೆಕಾಯಿ ಮಾರುಕಟ್ಟೆಗೆ ಬಂದಿದೆ.

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಕಾರಣ ಕಟಾವಿಗೆ ಬಂದಿದ್ದ ಟೊಮೆಟೊ ಬೆಳೆ ಹಾಳಾಗಿದೆ. ಗುಣಮಟ್ಟದ ಟೊಮೆಟೊ ಸ್ಥಳೀಯವಾಗಿ ಲಭ್ಯವಿಲ್ಲ. ಹೀಗಾಗಿ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗಿದೆ. ಇನ್ನುಳಿದ ತರಕಾರಿ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ

ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ

ಈರುಳ್ಳಿ 30-40,30-40
ಮೆಣಸಿನಕಾಯಿ 60-80,30-40
ಆಲೂಗಡ್ಡೆ 20-30,25-30
ಎಲೆಕೋಸು 20-30,20-30
ಬೆಳ್ಳುಳ್ಳಿ 70-80,50-60
ಗಜ್ಜರಿ 40-45,40-50
ಬೀನ್ಸ್‌ 80-100,60-80
ಬದನೆಕಾಯಿ 20-30,40-50
ಮೆಂತೆ ಸೊಪ್ಪು 20-30,30-40
ಹೂಕೋಸು 60-80,40-50
ಸಬ್ಬಸಗಿ 40-50,30-40
ಬೀಟ್‌ರೂಟ್‌ 35-40,60-80
ತೊಂಡೆಕಾಯಿ 40-50,40-50
ಕರಿಬೇವು 28-30,25-30
ಕೊತಂಬರಿ 20-30,20-30
ಟೊಮೆಟೊ 80-100,80-100
ಪಾಲಕ್‌ 40-50,50-60
ಬೆಂಡೆಕಾಯಿ 40-50,60-80
ಹಿರೇಕಾಯಿ 60-80,50-60
ನುಗ್ಗೆಕಾಯಿ 120-140,60-80
ಡೊಣ ಮೆಣಸಿನಕಾಯಿ 40-50,30-40
ಚವಳೆಕಾಯಿ 50-60,60-80
ಸೋರೆಕಾಯಿ 40-60, 40-60
ಅವರೆಕಾಯಿ 40-50, 40-50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT