ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಸಲ್ಲಿಸುವವರಿಗೆ ಸಹಕಾರ ಕ್ಷೇತ್ರ ಉತ್ತಮ

ಸ್ವಸಹಾಯ ಗುಂಪಿನ ಮೇಲ್ವಿಚಾರಕರ ತರಬೇತಿ ಕಾರ್ಯಕ್ರಮ
Last Updated 11 ಜನವರಿ 2020, 16:09 IST
ಅಕ್ಷರ ಗಾತ್ರ

ಬೀದರ್‌: ‘ಸಮಾಜಕ್ಕೆ ಸೇವೆ ಸಲ್ಲಿಸಬೇಕೆನ್ನುವ ಅಭಿಲಾಷೆ ಹೊಂದಿರುವ ವ್ಯಕ್ತಿಗಳಿಗೆ ಸಹಕಾರ ಉತ್ತಮ ಕ್ಷೇತ್ರವಾಗಿದೆ’ ಎಂದು ರಾಯಚೂರು ವಿಭಾಗದ ಸಹಕಾರ ಇಲಾಖೆಯ ಜಂಟಿ ನಿಬಂಧಕ ಗೋಪಾಲ ಚವಾಣ್ ಹೇಳಿದರು.

ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬಿಡಿಸಿಸಿ ಬ್ಯಾಂಕಿನ ಸ್ವಸಹಾಯ ಗುಂಪಿನ ಮೇಲ್ವಿಚಾರಕರಿಗಾಗಿ ಆಯೋಜಿಸಿರುವ ಮೂರು ದಿನಗಳ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆರ್ಥಿಕ ಪ್ರಗತಿಯ ಜತೆಗೆ ಸಾಮಾಜಿಕ ಪ್ರಗತಿಯನ್ನೂ ಸಾಧಿಸಲು ಸಹಕಾರ ಕ್ಷೇತ್ರ ನೆರವಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಹಬಾಳ್ವೆ ಎನ್ನುವ ತತ್ವದಡಿ ಕಾರ್ಯ ನಿರ್ವಹಿಸುವ ಸಹಕಾರಿ ಸಂಘಗಳು ರೈತರ ಆಶಾಕಿರಣಗಳಾಗಿವೆ’ ಎಂದು ತಿಳಿಸಿದರು.

‘ಡಿಸಿಸಿ ಬ್ಯಾಂಕುಗಳು ಮತ್ತು ಸಂಘಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದಾಗ ಜನರಿಗೆ ಉತ್ತಮ ಆರ್ಥಿಕ ಸೇವೆ ಸಿಗಲು ಸಾಧ್ಯವಿದೆ. ಸಹಕಾರ ಇಲಾಖೆಯು ಸ್ವಸಹಾಯ ಗುಂಪುಗಳ ಮೂಲಕ ಬಡವರಿಗೆ
ಕಾಯಕ ಯೋಜನೆಯಡಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತಿದೆ. ಸ್ವಸಹಾಯ ಗುಂಪುಗಳು ಇದರ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

‘ಸಹಕಾರ ಬ್ಯಾಂಕುಗಳು ಬಡವರ ಬಂಧು ಯೋಜನೆಯ ಮೂಲಕ ಪಟ್ಟಣ ಪ್ರದೇಶದ ಸಣ್ಣ ವ್ಯಾಪಾರಿಗಳಿಗೆ ಸಹ ಕಿರು ಸಾಲ ವಿತರಿಸುತ್ತಿದೆ. ಪ್ರತಿಯೊಬ್ಬರು ವ್ಯಾವಹಾರಿಕ ನಿರ್ವಹಣೆ ಸೂತ್ರ ಹಾಗೂ ಕಂಪ್ಯೂಟರ್ ಆಧಾರಿತ ತಂತ್ರಜ್ಞಾನವನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.

ಬೆಂಗಳೂರು ಉಪ ವಿಭಾಗದ ಜಂಟಿ ನಿಬಂಧಕ ಲೋಕೇಶ ಮಾತನಾಡಿ, ‘ಸಾಲ ಪಡೆದವರು ಆಸ್ತಿ ಮಾರಿ ಸಾಲ ತೀರಿಸಬಾರದು. ದುಡ್ಡು ದುಡಿಸಿ ಸಾಲ ತೀರಿಸುವಂತಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ವಿಠ್ಠಲ ರೆಡ್ಡಿ, ‘ಸ್ವ ಸಹಾಯ ಸಂಘಗಳು ವ್ಯವಹಾರ ಅಭಿವೃದ್ಧಿಸಿಕೊಂಡು ಸ್ವಾವಲಂಬಿಯಾಗಬೇಕು. ಮೇಲ್ವಿಚಾರಕರು ದೂರದೃಷ್ಟಿ ಯೋಜನೆ, ಪ್ರಾಮಾಣಿಕ ದುಡಿಮೆಯ ಮೂಲಕ ಸ್ವಸಹಾಯ ಗುಂಪಿನ ಸದಸ್ಯರಿಗೆ ತಿಳಿವಳಿಕೆ ನೀಡಬೇಕು’ ಎಂದು ಹೇಳಿದರು.

ಪ್ರಧಾನ ವ್ಯವಸ್ಥಾಪಕ ಅನಿಲ ಪಾಟೀಲ ಮಾತನಾಡಿ, ‘ಬೀದರ್ ಜಿಲ್ಲೆಯಲ್ಲಿ 27,600 ಸ್ವಸಹಾಯ ಗುಂಪುಗಳಿವೆ.
12,726 ಗುಂಪುಗಳು ನಬಾರ್ಡನ ಈ- ಶಕ್ತಿ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡಿವೆ. ಇದರಿಂದ
ಒಬ್ಬರೇ ಸದಸ್ಯರು ಎರಡು ಗುಂಪುಗಳಲ್ಲಿ ಸದಸ್ಯರಾಗುವುದನ್ನು ತಡೆಯಬಹುದಾಗಿದೆ. ಬ್ಯಾಂಕುಗಳಿಗೆ ಸಾಲ ನೀಡಲು ಸಹ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಸಹಾರ್ದ ತರಬೇತಿ ಸಂಸ್ಥೆಯ ನಿರ್ದೇಶಕ ಸುಬ್ಯಹ್ಮಣ್ಯ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ತನ್ವೀರ್‌ ರಜಾ ಹಾಗೂ ನಾಗಶೆಟ್ಟಿ ಘೋಡಂಪಳ್ಳಿ ನಿರೂಪಿಸಿದರು. ಸಹಾರ್ದ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಎಸ್.ಜಿ. ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT