ಶನಿವಾರ, ಜನವರಿ 18, 2020
20 °C
ಚಿಂತಾಕಿಯಲ್ಲಿ ಗಿರಿಜನ ಉತ್ಸವ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಅಭಿಮತ

ಜಾನಪದ ಸಂಸ್ಕೃತಿಯಿಂದ ನೈತಿಕ ಮೌಲ್ಯ ಗಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ‘ಭಾರತೀಯ ಪ್ರಾಚೀನ ಕಲೆ, ಸಂಸ್ಕೃತಿ ನೈತಿಕ ಮೌಲ್ಯದಿಂದ ಕೂಡಿದೆ. ಅಂತಹ ಶ್ರೀಮಂತ ಸಂಸ್ಕೃತಿ ಉಳಿಸಿ ಬೆಳೆಸುವುದು ತೀರಾ ಅಗತ್ಯ ಎನಿಸಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಲ್ಲೂಕಿನ ಗಡಿ ಗ್ರಾಮ ಚಿಂತಾಕಿಯಲ್ಲಿ ಸೋಮವಾರ ಆಯೋಜಿಸಿದ್ದ ಗಿರಿಜನ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಆಧುನಿಕರಣದ ಪ್ರಭಾವದ ನಡುವೆಯೂ ಗ್ರಾಮೀಣ ಪ್ರದೇಶದ ಜಾನಪದ ಕಲೆ ಇಂದಿಗೂ ವಿಜೃಂಭಿಸುತ್ತಿರುವುದಕ್ಕೆ ಈ ಉತ್ಸವ ಸಾಕ್ಷ್ಯಿಯಾಗಿದೆ. ಈ ಕಲಾವಿದರ ಕಲೆ ನೋಡಿ ನನಗೆ ನಿಜಕ್ಕೂ ಅಚ್ಚರಿಯಾಗಿದೆ. ಇಂತಹ ಅದ್ಭುತ ಕಲೆ ಎಷ್ಟು ಹಣ ಕೊಟ್ಟರೂ ನೋಡಲು ಸಿಗುವುದಿಲ್ಲ’ ಎಂದರು.

‘ಗ್ರಾಮೀಣ ಭಾಗದ ಕಲಾವಿದರು ಮುಗ್ಧರು. ಅವರಿಗೆ ಯಾವುದೇ ಆಸೆ, ಆಕಾಂಕ್ಷೆಗಳಿಲ್ಲ. ತಮ್ಮಲ್ಲಿಯ ಕಲೆ ಅಭಿವ್ಯಕ್ತಿಪಡಿಸಿ ಜನರನ್ನು ಖುಷಿ ಮಾಡುವುದೇ ಅವರ ಉದ್ದೇಶವಾಗಿದೆ. ಸರ್ಕಾರ ಇಂತಹ ಕಲಾವಿದರನ್ನು ಗುರುತಿಸಿ ಒಂದಿಷ್ಟು ಗೌರವಧನ ಕೊಟ್ಟರೆ ಖುಷಿಪಡುತ್ತಾರೆ. ಈ ತಾಲ್ಲೂಕಿನಲ್ಲಿ 500ಕ್ಕೂ ಹೆಚ್ಚು ಕಲಾವಿದರಿದ್ದಾರೆ. ಎಲ್ಲರಿಗೂ ಮಾಸಾಶನ ಕೊಡಿಸಬೇಕು’ ಎಂದು ಅಧಿಕಾರಿಗಳಿಗೆ
ಸೂಚಿಸಿದರು.

ಕುರಿ ಮತ್ತು ಉಣ್ಣೆ ಮಂಡಳಿ ಅಧ್ಯಕ್ಷ ಪಂಡಿತರಾವ ಚಿದ್ರಿ ‘ಮನಷ್ಯ ನಮ್ಮ ಶ್ರೀಮಂತ ಜಾನಪದ ಸಂಸ್ಕೃತಿ ಮರೆತಿದ್ದಾನೆ. ಈ ಕಾರಣದಿಂದ ಅವನು ಮಾನಸಿಕ ಒತ್ತಡಕ್ಕೆ ಸಿಲುಕಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾನೆ. ನಮ್ಮ ಹಿರಿಯರು ಕೆಲಸದ ದಣಿವು ನೀಗಿಸಿಕೊಳ್ಳಲು ಹಾಡುಗಳ ಮೊರೆ ಹೋಗುತ್ತಿದ್ದರು. ಹಿಂದೆ ಜಾನಪದ ಕಲೆ ನಿತ್ಯದ ಬದುಕಿನೊಂದಿಗೆ ಬೆಸೆದುಕೊಂಡಿತ್ತು’ ಎಂದು ನೆನಪಿಸಿದರು.

‘ನಾವು ನಮ್ಮತನ ಮರೆತು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದೇವೆ. ಯುವಕರು ದಾರಿ ತಪ್ಪಿ ನಡೆಯುತ್ತಿದ್ದಾರೆ. ಪ್ರೀತಿಸಿ ಪೂಜಿಸಬೇಕಾದ ಗುರುಹಿರಿಯರು ವೃದ್ಧಾಶ್ರಮ ಸೇರುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಾರೆಡ್ಡಿ ಜ್ಞಾನರೆಡ್ಡಿ ಮಾತನಾಡಿ,‘ನಾವು ಆಧುನಿಕವಾಗಿ ಎಷ್ಟೇ ಬೆಳೆದರೂ ನಮ್ಮ ಸಂಸ್ಕೃತಿ ಮರೆಯಬಾರದು. ಮಕ್ಕಳ ಭವಿಷ್ಯ ಉಜ್ವಲವಾಗಲು ಗುರುಹಿರಿಯರು ಹೇಳಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ನಮ್ಮ ಜಾನಪದ ಕಲೆ ಮತ್ತು ಕಲಾವಿದರಿಗೆ ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚೆನ್ನಮ್ಮ ಗುರಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನೆಹರು ಪಾಟೀಲ, ಸದಸ್ಯ ನರಸಾರೆಡ್ಡಿ, ಮುಖ್ಯಾಧಿಕಾರಿ ಮಾಣಿಕರಾವ ಪಾಟೀಲ, ರಾಜ್ಯ ಸಕರ್ಾರಿ ನೌಕರ ಸಂಘದ ಅಧ್ಯಕ್ಷ ಶಿವಕುಮಾರ ಘಾಟೆ, ಶಿವಾನಂದ ಔರಾದೆ, ಗುಂಡಯ್ಯ ಸ್ವಾಮಿ, ಬಸವಂತರಾವ ಪಾಟೀಲ, ಎಪಿಎಂಸಿ ಉಪಾಧ್ಯಕ್ಷ ಈರಾರೆಡ್ಡಿ, ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಸಂಜೀವಕುಮಾರ ಜುಮ್ಮಾ, ಶರಣಪ್ಪ ಚಿಟ್ಮೆ, ಶಾಲಾ ಸಮಿತಿ ಅಧ್ಯಕ್ಷ ರಾಜರೆಡ್ಡಿ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು