ಶನಿವಾರ, ಜೂನ್ 19, 2021
21 °C

ನರೇಗಾ ಪರಿಣಾಮಕಾರಿಯಾಗಿ ಬಳಸಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ‘ಈ ಲಾಕ್‍ಡೌನ್‍ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿಯಾಗಿ ಬಳಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡ ಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸೂಚಿಸಿದರು.

ಗುರುವಾರ ತಾಲ್ಲೂಕಿನ ಎಕಂಬಾ, ಬಾದಲಗಾಂವ್, ಸುಂದಾಳ, ನಾಗಮಾರಪಳ್ಳಿ, ರಾಯಪಳ್ಳಿ, ಚಿಂತಾಕಿ, ನಾಗನಪಲ್ಲಿ, ಗುಡಪಳ್ಳಿ, ವಡಗಾಂವ್, ಚಿಕ್ಲಿ(ಜೆ), ಜಮಗಿ, ಜೋಜನಾ, ಕೊಳ್ಳೂರ, ಎಕಲಾರ ಗ್ರಾಮಗಳಿಗೆ ಭೇಟಿ ನೀಡಿ, ‘ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಪಿಡಿಒಗಳಿಗೆ ಸೂಚಿಸಿದರು.

‘ಕೋವಿಡ್ ಮತ್ತು ಲಾಕ್‍ಡೌನ್‍ನಿಂದಾಗಿ ಎಲ್ಲರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಕೆಲಸ ಕೇಳಿಕೊಂಡು ಬರುವ ಪ್ರತಿಯೊಬ್ಬರಿಗೂ ನರೇಗಾ ಯೋಜನೆಯಡಿ ಉದ್ಯೋಗ ಕಲ್ಪಿಸಿಕೊಡಬೇಕು. ಈ ವಿಷಯದಲ್ಲಿ ಯಾರಿಂದಲೂ ದೂರುಗಳು ಬಾರದ ಹಾಗೆ ನೋಡಿಕೊಳ್ಳಬೇಕು’ ಎಂದರು.

‘ಗ್ರಾಮಗಳಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಚರಂಡಿಗಳಿಲ್ಲದ ಕಡೆ ಹೊಸ ಚರಂಡಿಗಳನ್ನು ನಿರ್ಮಿಸಲು ಕ್ರಮ ವಹಿಸಬೇಕು. ಊರಲ್ಲಿ ಆಗಾಗ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಎಲ್ಲ ಗ್ರಾಮಗಳನ್ನು ಸ್ಯಾನಿಟೈಸ್ ಹಾಗೂ ಫಾಗಿಂಗ್ ಮಾಡಿಸಿ ವರದಿ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಗ್ರಾಮಗಳಲ್ಲಿರುವ ಶಾಲೆ ಆವರಣ, ಅಂಗನವಾಡಿ ಕಟ್ಟಡ, ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳ ಆವರಣಗಳಲ್ಲಿ ಸಸಿಗಳನ್ನು ನೆಡಲು ಮುಂದಾಗಬೇಕು. ಯಾವುದೇ ಗ್ರಾಮಗಳಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಮೋಟಾರ್ ಕೆಟ್ಟು ಹೋಗಿದೆ. ವಿದ್ಯುತ್ ತಂತಿ ಸರಿಯಿಲ್ಲ. ಪೈಪ್ ಸೋರಿಕೆಯಾಗುತ್ತಿದೆ ಎಂಬ ಸಬೂಬುಗಳನ್ನು ನೀಡದೇ ಎಲ್ಲ ಗ್ರಾಮಗಳಲ್ಲಿ ಸರಿಯಾಗಿ ನೀರು ಪೂರೈಸಬೇಕು’ ತಿಳಿಸಿದರು.

‘ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಇನ್ನೂ ಕೆಲವು ಗ್ರಾಮಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಎಲ್ಲ ಕಡೆಗಳಲ್ಲಿ ಜಾಗೃತಿ ಮೂಡಿಸಬೇಕು. ಲಸಿಕೆ ನೀಡಲು ಹೆಚ್ಚು ಗಮನ ಹರಿಸ ಬೇಕು’ ಎಂದು ವೈದ್ಯರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ, ತಾಲೂಕು ಆರೋಗ್ಯ ಅಧಿಕಾರಿ ಡಾ.ಶರಣಯ್ಯಾ ಸ್ವಾಮಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಬಂಡೆಪ್ಪಾ ಕಂಟೆ, ರಮೇಶ ಉಪಾಸೆ, ಕಾಶಿನಾಥ ಜಾಧವ, ಶೇಷಾರಾವ ಕೋಳಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು