ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರಕ್ಕಿಂತ ರಾಮರಾಜ್ಯದ ಅಗತ್ಯವಿದೆ: ಮುಖ್ಯಮಂತ್ರಿ ಚಂದ್ರು

Published 29 ಜನವರಿ 2024, 16:03 IST
Last Updated 29 ಜನವರಿ 2024, 16:03 IST
ಅಕ್ಷರ ಗಾತ್ರ

ಬೀದರ್‌: ‘ನಮಗೆ ರಾಮ ಮಂದಿರಕ್ಕಿಂತ ರಾಮ ರಾಜ್ಯದ ಅಗತ್ಯವಿದೆ’ ಎಂದು ‘ಆಮ್ ಆದ್ಮಿ ಪಕ್ಷ’ದ‌ (ಎಎಪಿ) ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಅಭಿವೃದ್ಧಿ ವಿಷಯ ಬಿಟ್ಟು ಭಾವನಾತ್ಮಕ‌ ವಿಷಯಗಳ ಮೂಲಕ ಮತ ಕೇಳುತ್ತಿದೆ. ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಮೂಲಕ ದೆಹಲಿ‌ ಸರ್ಕಾರದ‌ ಅಧಿಕಾರ ದುರ್ಬಲಗೊಳಿಸುವ ಹುನ್ನಾರ ನಡೆಸಿದೆ. ಪರಿವಾರವಾದ ಮತ್ತಿತರ ಸುಳ್ಳು ಹೇಳಿಕೆಗಳನ್ನು ನೀಡುವುದನ್ನು ಪ್ರಧಾನಿ‌ ಮೋದಿ ಈಗಲಾದರೂ ಬಿಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಎಎಪಿ ಹೊಸ ಪಡೆ ಕಟ್ಟಿಕೊಂಡು ವಿಭಿನ್ನ ರೂಪ ಕೊಡುವ ಪ್ರಯತ್ನ ನಡೆಸಿದೆ. ಸದ್ಯದ ಪರಿಸ್ಥಿಯಲ್ಲಿ‌ ಬಲಾಢ್ಯ ಪಕ್ಷಗಳ ವಿರುದ್ಧ ಎಎಪಿ ನಿಲ್ಲುವುದು ಅಷ್ಟು ಸುಲಭವಲ್ಲ. ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಪಕ್ಷ ಸ್ಪರ್ಧಿಸುತ್ತಿಲ್ಲ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ ನಡೆದಿದೆ. ಇದಕ್ಕಾಗಿ ಕರ್ನಾಟಕದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಪ್ರವಾಸ ಆರಂಭಿಸಿದ್ದೇನೆ ಎಂದು ತಿಳಿಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳು ದೆಹಲಿ ಎಎಪಿ ಸರ್ಕಾರದ ನಕಲು ಆಗಿದೆ. ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ರಾಜ್ಯದಲ್ಲಿ ಮೂಲಭೂತ ಅಗತ್ಯತೆಗಳಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಒತ್ತು ಕೊಡಬೇಕಾದ ಅಗತ್ಯವಿತ್ತು. ಅದು ಆಗುತ್ತಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಬಜೆಟ್ ನಲ್ಲಿ ಪ್ರತ್ಯೇಕ ಅನುದಾನ‌ ಮೀಸಲಿಟ್ಟಿಲ್ಲ. ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಕಸಿದುಕೊಂಡು ಗ್ಯಾರಂಟಿಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ, ಸಿಎಂ ಇದನ್ನು ನಿರಾಕರಿಸುತ್ತಿದ್ದಾರೆ. ಹಾಗಿದ್ದರೆ ಯೋಜನೆಗಳ ಜಾರಿ ಮತ್ತು ಬಳಕೆ ಅನುದಾನ ಕುರಿತಂತೆ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಎಎಪಿ ರಾಜ್ಯ ಘಟಕದ ಉಪಾಧ್ಯಕ್ಷ ನಸೀಮ್‌ ಪಟೇಲ್, ಯುವ ಘಟಕದ ಅಧ್ಯಕ್ಷ ಅವಿನಾಶ, ಬ್ಯಾಂಕ್ ರೆಡ್ಡಿ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT