ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ, ಗುಡಿಯಲ್ಲಿ ಜನರಿಗೆ ಲಸಿಕೆ

ಪಾಳುಬಿದ್ದ ಆರೋಗ್ಯ ಉಪಕೇಂದ್ರ; ಆರೋಗ್ಯಕ್ಕಾಗಿ ಸಾರ್ವಜನಿಕರ ಅಲೆದಾಟ
Last Updated 17 ಮೇ 2021, 3:12 IST
ಅಕ್ಷರ ಗಾತ್ರ

ನಾವದಗಿ (ಖಟಕಚಿಂಚೋಳಿ): ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮದಲ್ಲಿನ ಆರೋಗ್ಯ ಉಪಕೇಂದ್ರ ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಇದರಿಂದ ಸಾರ್ವಜನಿಕರು ಚಿಕಿತ್ಸೆಗಾಗಿ ಸುತ್ತಮುತ್ತಲಿನ ಗ್ರಾಮಗಳ ಆರೋಗ್ಯ ಕೇಂದ್ರಗಳಿಗೆ ಅಲೆಯುವಂತಾಗಿದೆ. ಅಲ್ಲದೇ, ಕೋವಿಡ್‌ ಲಸಿಕೆಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದ ಅಂಗನವಾಡಿ ಅಥವಾ ಗುಡಿಯಲ್ಲಿ ನೀಡುತ್ತಿದ್ದಾರೆ.

ನಾವದಗಿಯಲ್ಲಿನ ಉಪಕೇಂದ್ರ ಬಳಸದಿರುವುದರಿಂದ ಸಂಪೂರ್ಣ ಧೂಳು ತುಂಬಿದೆ. ಕಟ್ಟಡದ ಬಾಗಿಲು, ಕಿಟಕಿಗಳು ಮುರಿದಿವೆ. ಅದರ ಸುತ್ತಲೂ ಗಿಡಗಂಟಿ ಬೆಳೆದಿವೆ. ಕಟ್ಟಡದ ‌‌‌‌‌‌‌‌‌‌‌‌‌‌‌‌‌‌‌‌‌ಆವರಣ ದಲ್ಲಿ ಹೊಲಸು ಸಂಗ್ರಹಗೊಂಡು ಗಬ್ಬು ವಾಸನೆ ಬರುತ್ತಿದೆ.

ಗ್ರಾಮದಲ್ಲಿ 2,500ಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಉಪಕೇಂದ್ರ ಆರಂಭಿಸುವ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿ ಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.

‘ಎಲ್ಲೆಡೆ ಕೋವಿಡ್ ಹರಡುತ್ತಿರು ವುದರಿಂದ ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ಕಳೆದ ತಿಂಗಳಿಂದ 20 ಜನರು ಸಾವನ್ನಪ್ಪಿದ್ದಾರೆ. ಈಗಲು ಸಹ ಕೆಲ ಮನೆಗಳಲ್ಲಿ ಕೆಮ್ಮು, ಜ್ವರ, ನೆಗಡಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಬಡವರು ಖಾಸಗಿ ಆಸ್ಪತ್ರೆಗೆ ಹೋಗಲು ಹಣವಿಲ್ಲದೆ ಮನೆಯಲ್ಲಿ ಸುಮ್ಮನೆ ಕುಳಿತ್ತಿದ್ದಾರೆ. ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಇದ್ದರೂ ಸಾರ್ವಜನಿಕರು ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ’ ಎಂದು ಗ್ರಾಮದ ಗುರುನಾಥ ಕನಕಟ್ಟೆ ಬೇಸರ ವ್ಯಕ್ತಪಡಿಸುತ್ತಾರೆ.

‘ಕೋವಿಡ್ ಹರಡುವುದನ್ನು ತಡೆಗಟ್ಟಲು ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಉಪಕೇಂದ್ರದ ಬಾಗಿಲು ತೆರೆಯದೆ ಗ್ರಾಮದ ಅಂಗನವಾಡಿ ಹಾಗೂ ಗುಡಿಯಲ್ಲಿ ಕುಳಿತು ಲಸಿಕೆ ನೀಡುತ್ತಿದ್ದಾರೆ. ಇದರಿಂದ ಗ್ರಾಮದ ಅನೇಕ ಜನರಿಗೆ ಗೊತ್ತಾಗುತ್ತಿಲ್ಲ. ಇಲಾಖೆಯವರು ಲಸಿಕೆ ನೀಡಲು ಮತ್ತೆ ಯಾವಾಗ ಬರುವರೋ ಎನ್ನುವುದನ್ನು ತಿಳಿಯದೆ ಹಿರಿಯರು ಗಾಬರಿಗೊಂಡು 6 ಕಿ.ಮೀ ದೂರದ ಕುಮಾರಚಿಂಚೋಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ಗ್ರಾಮದ ಮುಖಂಡ ಸಂಗಶೆಟ್ಟಿ ಬಿರಾದಾರ ತಿಳಿಸುತ್ತಾರೆ.

ಗ್ರಾಮದ ಬಹುತೇಕ ಹಿರಿಯರು ಮೊದಲನೇ ಬಾರಿಯ ಲಸಿಕೆ ಪಡೆಯಲು ಮುಂದೆ ಬಂದಿದ್ದರು. ಆದರೆ, ಎರಡನೇ ಬಾರಿಯ ಲಸಿಕೆ ಪಡೆಯಲು ಧೈರ್ಯ ತೋರುತ್ತಿಲ್ಲ. ತಾಲ್ಲೂಕು ಮಟ್ಟದ ಅಧಿಕಾರಿಗಳು ಲಸಿಕೆ ಬಗ್ಗೆ ತಿಳಿಹೇಳಿದರೂ ಮುಂದೆ ಬರುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಅಧಿಕಾರಿಗಳ ಹಾಗೂ ಜನಪ್ರತಿನಿಧಿ ಗಳ ನಡುವೆ ಗ್ರಾಮದ ಜನರಿಗೆ ಆರೋಗ್ಯ ಸೌಲಭ್ಯವೂ ಸಿಗುತ್ತಿಲ್ಲ. ಲಸಿಕೆಯೂ ದೊರೆಯುತ್ತಿಲ್ಲ’ ಎಂದು ಗ್ರಾಮದ ಬಸವರಾಜ ಉಚ್ಚೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂಲಸೌಕರ್ಯಕ್ಕೆ ಪಿಡಿಒಗೆ ಮನವಿ

‘ಆರೋಗ್ಯ ಕೇಂದ್ರದ ಕಟ್ಟಡ ಹಳೆಯದಾಗಿದ್ದು ಊರ ಹೊರಗಡೆ ಇದೆ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳಿಲ್ಲ. ಬಾಗಿಲು ಮುರಿದು ಹೋಗಿದೆ. ಕಿಟಕಿ ಹಾಳಾಗಿವೆ. ವಾಸಿಸಲು ಯೋಗ್ಯವಾಗಿಲ್ಲ. ಕಟ್ಟಡ ದುರಸ್ತಿಗಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಗೆ ತಿಳಿಸಲಾಗಿದೆ. ಕಟ್ಟಡಕ್ಕೆ ಅವರು ಭೇಟಿ ನೀಡಿ ಪರಿಶೀಲಿಸಿದ್ದು, ಬೇಕಾದ ಮೂಲ ಸೌಕರ್ಯ ಒದಗಿಸುವುದಾಗಿ ಹೇಳಿದ್ದಾರೆ’ ಎಂದು ಕಿರಿಯ ಆರೋಗ್ಯ ಸಹಾಯಕಿ ಪ್ರತಿಭಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT