ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಬದುಕಿಗೆ ವಚನಗಳು ಪ್ರೇರಣೆ: ನಿಜಗುಣಾನಂದ ಸ್ವಾಮೀಜಿ

ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿಕೆ
Last Updated 5 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೀದರ್: ‘ಜಗತ್ತಿನ ಎಲ್ಲ ತತ್ವ, ಸಿದ್ಧಾಂತಗಳು ಕರ್ಮದ ಬಗೆಗೆ ಹೇಳುತ್ತವೆ. ಆದರೆ, ಬಸವಾದಿ ಶರಣರ ವಚನಗಳು ಬದುಕಿನಲ್ಲಿ ಹತಾಶರಾದವರಿಗೆ ಬದುಕಲು ಪ್ರೇರಣೆ ನೀಡುತ್ತವೆ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಇಲ್ಲಿಯ ವಿದ್ಯಾನಗರ ಕಾಲೊನಿಯ ಬಸವ ಕೇಂದ್ರದಲ್ಲಿ ಭಾನುವಾರ ಶ್ರಾವಣ ಪ್ರಯುಕ್ತ ಆಯೋಜಿಸಿದ್ದ ‘ಅರಿದೊಡೆ ಶರಣ, ಮರೆದೊಡೆ ಮಾನವ’ ಪ್ರವಚನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಸನ್ಯಾಸಿ ಆಗುವುದು ಸಾಮಾನ್ಯ ಸಂಗತಿ ಅಲ್ಲ. ಮಲ್ಲಿಕಾರ್ಜುನ ಶ್ರೀಗಳು ಆಸ್ತಿ ಅಂತಸ್ತು ಎಲ್ಲವನ್ನು ತೊರೆದು ಬಂದವರಾಗಿದ್ದಾರೆ. ಅವರ ಮಾತು ಕತ್ತಲೆಯಿಂದ ಕೂಡಿದ ಮನದಲ್ಲಿ ಬೆಳಕು ಚೆಲ್ಲುತ್ತವೆ’ ಎಂದು ನುಡಿದರು.

‘ನಾವು ಲಿಂಗವಿಡಿದು ಕುರುಹು ನೋಡಿದವರು ಅವರು ಅರಿವು ಪಡೆದವರು. ಲಿಂಗವಿಡಿದವರಿಗೂ ಇನ್ನೂ ಅರಿವು ಬರಲಿಲ್ಲವೆಂದರೆ ಲಿಂಗದ ಪರಿಯೆಂತು’ ಎಂದರು.

‘ ಬಸವಣ್ಣನಿಗಾಗಿ ಲೇಸೆನಿಸಿಕೊಂಡು ಒಂದೇ ದಿನ ಬದುಕೋಣ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳೊಣ.ಕತ್ತಲಲ್ಲಿದ್ದವರಿಗೆ ಬೆಳಕಿನೆಡೆ ಒಯ್ಯುವ ಸಾಮರ್ಥ್ಯ ಶರಣರ ವಚನಗಳಿಗೆ ಇವೆ’ ಎಂದು ಹೇಳಿದರು.

‘ಪ್ರವಚನ ನಿತ್ಯದ ಬದುಕನ್ನು ಹಸನುಗೊಳಿಸಬೇಕು. ಅಹಂಕಾರದಿಂದ ಸತ್ಯ ಮರೆಯುತಿದ್ದೇವೆ. ಕಷ್ಟ ಪರಿಹಾರಕ್ಕಾಗಿ ದೇವರಿದ್ದಾನೆ ಎಂದರೆ ಸಾಧ್ಯವೆ? 50 ಸಾವಿರ ಜನರಿಗೆ ಕೆಲಸ ಕೊಟ್ಟವರು ಆತ್ಮಹತ್ಯೆ ಮಾಡಿಕೊಂಡಿದ್ದು ಅಧೈರ್ಯವೇ ಕಾರಣವಾಗಿದೆ’ ಎಂದು ತಿಳಿಸಿದರು.
‘ಬಸವಣ್ಣನವರು ಕಳ್ಳನಲ್ಲಿ ದೇವರು ಕಂಡರು. ಆ ಕಳ್ಳನ ಮನ ಪರಿವರ್ತನೆ ಮಾಡಿದರು. ವೇಶ್ಯೆಯರಿಗೂ ಸಾಮಾಜಿಕ ನ್ಯಾಯ ನೀಡಿ ಹೊಸ ಬದುಕನ್ನು ನೀಡಿದ್ದು ಅಪೂರ್ವ ಸಂಗತಿ. ಆದ್ದರಿಂದ ಎಲ್ಲರನ್ನೂ ಮನುಷ್ಯತ್ವದಿಂದ ನೋಡಬೇಕು’ ಎಂದು ತಿಳಿಸಿದರು.
‘ಮಾಧ್ಯಮಗಳು ಆಧುನಿಕ ಜೀವನ ಶೈಲಿಯ ಹೊರಗಣ್ಣನ್ನು ತೊಳೆಯುವುದನ್ನು ತೋರಿಸುತ್ತವೆ. ಆದರೆ ಪ್ರವಚನಗಳು ಒಳಗಣ್ಣನ್ನು ತೊಳೆಯುತ್ತವೆ’ ಎಂದು ನುಡಿದರು.

ಲಿಂಗಾಯತ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ರಾಜಕುಮಾರ ಪಾಟೀಲ ಬಗದಲ್ ಮಾತನಾಡಿ, ‘ಬಸವ ತತ್ವದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವಿದೆ. ಅವುಗಳನ್ನು ಆಚರಣೆ ಮೂಲಕ ಅನುಷ್ಠಾನಗೊಳಿಸಬೇಕಿದೆ’ ಎಂದರು.

‘ಅನುಭವ ಮಂಟಪ ಮೊದಲ ಪಾರ್ಲಿಮೆಂಟ್ ಆಗಿದೆ. ಆದ್ದರಿಂದಲೇ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ವಿಶ್ವದ ವಿವಿಧೆಡೆಯಿಂದ ಅನೇಕ ಶರಣರು ಅನುಭವ ಮಂಟಪಕ್ಕೆ ಬಂದರು’ ಎಂದು ತಿಳಿಸಿದರು.

ಪ್ರವಚನಕಾರ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ,‘ ಬುದ್ದಿಗೆ ಸಾಧ್ಯವಾಗದ್ದು ಭಾವಕ್ಕೆ ಸಾಧ್ಯವಾಗುತ್ತದೆ. ಗುರು ಶಿಷ್ಯ ಎಂಬ ಭೇದ ಮುರಿಯುವುದೇ ಶರಣ ಧರ್ಮ. ಐಹಿಕ ಎಲ್ಲ ಸುಖಗಳಿವೆ. ಆದರೆ ಪ್ರಬಲವಾದ ಧರ್ಮ ಚಿಂತನೆ ಅಗತ್ಯವಿದೆ. ಅದನ್ನು ಪ್ರವಚನದ ಮೂಲಕ ಸಾಕಾರಗೊಳ್ಳಬೇಕು’ ಎಂದು ಹೇಳಿದರು.

ಯುವ ಬಸವ ಕೇಂದ್ರದ ಅಧ್ಯಕ್ಷ ಸುರೇಶ ಚನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಪ್ರಭುರಾವ್ ವಸ್ಮತೆ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶೀಲಾವತಿ ಶೀಲವಂತ ಹಾಗೂ ಚಿಂತಕಿ ಮೇನಕಾ ಪಾಟೀಲ ಇದ್ದರು.

ರೇಖಾ ನಿಂಗದಳ್ಳಿ, ಶಿವಲಿಂಗ ಯರಗಲ್ ಹಾಗೂ ರೇವಣಪ್ಪ ಮೂಲಗೆ ವಚನ ಸಂಗೀತ ನಡೆಸಿಕೊಟ್ಟರು. ಅರುಣಾ ಚಂದ್ರಪ್ಪ ಜಾಬಾ ಭಕ್ತಿ ದಾಸೋಹ ನಡೆಸಿಕೊಟ್ಟರು. ಮಹಿಳಾ ಬಸವಕೇಂದ್ರ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ ಸ್ವಾಗತಿಸಿದರು. ಉಪನ್ಯಾಸಕಿ ಧನಲಕ್ಷ್ಮಿ ಪಾಟೀಲ ನಿರೂಪಿಸಿದರು. ಕರುಣಾ ಶೆಟಕಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT