ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಮಾರುಕಟ್ಟೆಯಲ್ಲಿ ಹಿರಿಹಿರಿ ಹಿಗ್ಗಿದ ಹಿರೇಕಾಯಿ

Last Updated 7 ಡಿಸೆಂಬರ್ 2018, 19:31 IST
ಅಕ್ಷರ ಗಾತ್ರ

ಬೀದರ್‌: ನಗರದ ಸಗಟು ತರಕಾರಿ ಮಾರುಕಟ್ಟೆಗೆ ಈ ಬಾರಿ ಮೂರು ರಾಜ್ಯಗಳ ಪ್ರಮುಖ ಪಟ್ಟಣಗಳಿಂದ ಕಾಯಿಪಲ್ಲೆ ಬಂದಿದೆ. ತರಕಾರಿಯಲ್ಲೇ ಹಿರೇಕಾಯಿ ಅಧಿಕ ಬೆಲೆ ಪಡೆದುಕೊಂಡು ಹಿರಿಹಿರಿ ಹಿಗ್ಗಿದರೆ, ಗಜ್ಜರಿ ತನ್ನ ಬೆಲೆಯ ಗಾಂಭೀರ್ಯ ಉಳಿಸಿಕೊಂಡಿತು. ಬೆಲೆ ಕುಸಿದು ಎಲೆಕೊಸು ತೊಳಲಾಡಿತು.

ಮೂರು ತಿಂಗಳು ಸಂಗ್ರಹಿಸಿ ಇಟ್ಟರೂ ಗಟ್ಟಿಮುಟ್ಟಾಗಿರುವ ಸೋಲಾಪುರದ ಈರುಳ್ಳಿ ಹಾಗೂ ಬೆಳ್ಳೊಳ್ಳಿ ಮಾರುಕಟ್ಟೆಯಲ್ಲಿ ಮತ್ತೆ ಪ್ರಾಬಲ್ಯ ಮೆರೆಯಿತು. ಹೈದರಾಬಾದ್‌ನ ಮೆಣಸಿನಕಾಯಿ, ಗಜ್ಜರಿ, ಬಿಟ್‌ರೂಟ್‌ ಹಾಗೂ ತೊಂಡೆಕಾಯಿ ಸ್ಥಿರವಾದ ಬೆಲೆ ಉಳಿಸಿಕೊಂಡವು.

ಒಂದು ತಿಂಗಳಿಂದ ಬೆಳಗಾವಿ ಜಿಲ್ಲೆಯಿಂದ ಯಾವುದೇ ತರಕಾರಿ ಬಂದಿರಲಿಲ್ಲ. ಇದೀಗ ಗುಣಮಟ್ಟದ ಬೀನ್ಸ್‌
ಬೀದರ್‌ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಫುಲಾವ್ ಮಾಡುವವರು ಆಸಕ್ತಿಯಿಂದ ಖರೀದಿ ಮಾಡಿದರು.

ಆಗ್ರಾದಿಂದ ಗುಣಮಟ್ಟದ ಆಲೂಗಡ್ಡೆ ಆವಕವಾಗಿದೆ. ಆಗ್ರಾದಲ್ಲಿ ಆಲೂಗಡ್ಡೆಯ ಬೆಲೆ ಹಠಾತ್‌ ಕುಸಿದಿರುವ ಕಾರಣ ಬೀದರ್‌ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಆಲೂಗಡ್ಡೆ ಲಭ್ಯವಾಗಿದೆ. ಹೋಟೆಲ್‌ ಹಾಗೂ ಖಾನಾವಳಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಲೂಗಡ್ಡೆ ಖರೀಸಿದರು. ಗೃಹ ಉದ್ಯೋಗದವರು ಚಿಪ್ಸ್‌ ಮಾಡಲು ಆಲೂಗಡ್ಡೆ ಚೌಕಾಶಿ ಮಾಡಿ ಕೊಂಡುಕೊಳ್ಳುತ್ತಿರುವುದು ಕಂಡು ಬಂದಿತು.

ಚಿಟಗುಪ್ಪ ತಾಲ್ಲೂಕಿನಲ್ಲಿ ಬೆಳೆಯಲಾದ ಎಲೆಕೋಸು, ಹೂಕೋಸು ಹಾಗೂ ಕರಿಬೇವು ಮಾರುಕಟ್ಟೆಯ ಮೇಲೆ ಹಿಡಿತ ಇಟ್ಟುಕೊಂಡಿದೆ. ಎಲೆಕೋಸಿನ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ಅರ್ಧದಷ್ಟು ಕುಸಿದಿದೆ. ಹೂಕೋಸು ಹಾಗೂ ಕರಿಬೇವಿನ ಬೆಲೆ ಸ್ಥಿರವಾಗಿದೆ.

ಭಾಲ್ಕಿ ತಾಲ್ಲೂಕಿನ ಗ್ರಾಮಗಳಿಂದ ಬದನೆಕಾಯಿ ಹಾಗೂ ಬೀದರ್‌ ತಾಲ್ಲೂಕಿನ ಚಿಟ್ಟಾದಿಂದ ಟೊಮೆಟೊ ಮಾರುಕಟ್ಟೆ ಪ್ರವೇಶ ಮಾಡಿವೆ. ಇವುಗಳ ಬೆಲೆ ಕ್ವಿಂಟಲ್‌ಗೆ  ₹ 200 ರಿಂದ 300ಕ್ಕೆ ಏರಿಕೆಯಾಗಿದೆ. ರೈತರಿಗೆ ನಿರೀಕ್ಷಿತ ಲಾಭ ದೊರೆತಿಲ್ಲ. ಬದನೆಕಾಯಿ ಹಾಗೂ ಟೊಮೆಟೊ ಸ್ಥಳೀಯವಾಗಿಯೇ ಲಭ್ಯವಿರುವ ಕಾರಣ ಸಾಗಾಣಿಕೆ ವೆಚ್ಚ ಕಡಿತಗೊಂಡು ಗ್ರಾಹಕರಿಗೆ ಅನುಕೂಲವಾಗಿದೆ.

‘ಕೊತಂಬರಿಯ ಬೆಲೆ ಕುಸಿದಿದೆ. ಮೆಂತೆ ಹಾಗೂ ಕಡಲೆ ಸೊಪ್ಪು ಮಾತ್ರ ಮಾರುಕಟ್ಟೆಗೆ ಬಂದಿದೆ. ಬೇರೆ ಸೊಪ್ಪು ಕೊಳ್ಳುವ ಗ್ರಾಹಕರ ಸಂಖ್ಯೆ ಬಹಳ ಕಡಿಮೆ ಇದೆ. ಸೊಪ್ಪಿನ ಬೆಲೆ ಈ ವಾರ ಸ್ಥಿರವಾಗಿದೆ’ ಎಂದು ಎನ್ನುತ್ತಾರೆ ಭಾರತ ತರಕಾರಿ ಅಂಗಡಿ ಮಾಲೀಕ ಅಬ್ದುಲ್ ನಬಿ.

‘ಕೆಲ ಪ್ರದೇಶದಲ್ಲಿ ಮಂಜು ಕವಿದ ವಾತಾವರಣ ಇರುವ ಕಾರಣ ಸೊಪ್ಪಿಗೆ ಕೀಟಬಾಧೆ ಕಾಣಿಸಿಕೊಂಡಿದೆ. ಕೀಟ ಕಾಣಿಸಿಕೊಂಡರೆ ಗ್ರಾಹಕರು ಕೊಂಡುಕೊಳ್ಳುವುದಿಲ್ಲ. ಹೀಗಾಗಿ ನೆರೆಯ ಜಿಲ್ಲೆಯ ಗುಣಮಟ್ಟದ ಸೊಪ್ಪನ್ನು ಮಾತ್ರ ತಂದು ಮಾರಾಟಕ್ಕೆ ಇಡಲಾಗಿದೆ’ ಎಂದು ಹೇಳುತ್ತಾರೆ.

ಬೀದರ್‌ ತರಕಾರಿ ಸಗಟು ಮಾರುಕಟ್ಟೆ

ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ
ಈರುಳ್ಳಿ, 1,000-2,000, 1,000-1,200
ಮೆಣಸಿನಕಾಯಿ, 2,500-3,000, 1,500-2,000
ಆಲೂಗಡ್ಡೆ, 2,000-2,500, 1,500-2,000
ಎಲೆಕೋಸು, 1,500-2,000, 800-1,000
ಹೂಕೋಸು, 1,800-2,000, 1,500-2,000
ಬೆಳ್ಳೂಳ್ಳಿ, 2,500-3,000, 2,000-2,500
ಗಜ್ಜರಿ, 3,500-4,000, 3,500-4,000
ಬೀನ್ಸ್‌, 3,000-3,500, 3,000-3,500
ಬದನೆಕಾಯಿ, 1,800-2,200, 2,000-2,500
ಮೆಂತೆ ಸೊಪ್ಪು, 2,000-2,500, 2,000-2,500
ಸಬ್ಬಸಗಿ, 2,500-3,000, 3,000-3,500
ಬಿಟ್‌ರೂಟ್‌, 2,500-3,000, 3,500-4,000
ಕರಿಬೇವು, 3,000-3,500, 3,000-3,500
ಕೊತಂಬರಿ, 3,500-4,000, 3,000-3,500
ಕಡಲೆ ಸೊಪ್ಪು, 8,000-9,000, 6,000-7,000
ಟೊಮೆಟೊ, 1,000–1,200, 1,000-1,500
ತೊಂಡೆಕಾಯಿ, 2,500-3,000, 2,500-3,000
ಬೆಂಡೆಕಾಯಿ, 2,500-3,000, 3,000-3,500
ಹಿರೇಕಾಯಿ, 3,000-3,500, 3,000-4,000
ಸೋರೆಕಾಯಿ, 1200–1500, 1500–2000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT