ಗುರುವಾರ , ಮಾರ್ಚ್ 4, 2021
23 °C
ನಿತ್ಯ ಸರಾಸರಿ 350 ಕೃಷಿಕರಿಂದ ಸಹಾಯವಾಣಿಗೆ ಕರೆ

ಬೀದರ್ ಜಿಲ್ಲೆಯ ರೈತರಿಗೆ ಧ್ವನಿ ಮಾಹಿತಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯಲ್ಲಿ ರೇಡಿಯೊ ಕೇಂದ್ರ ಇಲ್ಲ. ಮಹಾನಗರಗಳಲ್ಲಿ ಎಫ್‌.ಎಂ. ರೇಡಿಯೊಗಳು ಜನಪ್ರಿಯತೆ ಹೆಚ್ಚಿಸಿಕೊಂಡರೂ ಬೀದರ್‌ ಜಿಲ್ಲೆಯ ಜನರಿಗೆ ಅದರ ಗಾಳಿ ಸಹ ಬೀಸಿಲ್ಲ. ಹೈದರಾಬಾದ್ ಹಾಗೂ ಔರಂಗಾಬಾದ್‌ನ ಎಫ್‌.ಎಂ. ರೇಡಿಯೊ ತರಂಗಾಂತರಗಳು ಜಿಲ್ಲೆಯ ವರೆಗೆ ಬರುತ್ತಿದ್ದರೂ ಇಲ್ಲಿನ ರೈತರಿಗೆ ಅನುಕೂಲವಾಗಿಲ್ಲ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ರಿಲಯನ್ಸ್‌ ಪ್ರತಿಷ್ಠಾನವು ರೈತರ ಅನುಕೂಲಕ್ಕಾಗಿ ಉಚಿತ ಸಹಾಯವಾಣಿಯ ಮೂಲಕ ‘ಧ್ವನಿ ಮಾಹಿತಿ’ ಸೇವೆ ಆರಂಭಿಸಿದೆ.

ರಿಲಯನ್ಸ್‌ ಪ್ರತಿಷ್ಠಾನದ ಯೋಜನೆಯಡಿ ರೈತರಿಗೆ ಪ್ರಯೋಜನಕಾರಿಯಾದ ಧ್ವನಿ ಮಾಹಿತಿ ಸೇವೆಗೆ ಜೂನ್‌ 11 ರಂದು ಚಾಲನೆ ನೀಡಲಾಗಿದೆ. ಜಿಲ್ಲೆಯ 1.40 ಲಕ್ಷ ರೈತರಿಗೆ ಮಾಹಿತಿ ಒದಗಿಸುವ ಗುರಿಯೊಂದಿಗೆ ಆರಂಭಿಸಲಾಗಿರುವ ಈ ಯೋಜನೆ ಅಡಿಯಲ್ಲಿ ಈಗಾಗಲೇ 46,900 ರೈತರ ಹೆಸರುಗಳನ್ನು ನೋಂದಾಯಿಸಲಾಗಿದೆ.

‘ಧ್ವನಿ ಮಾಹಿತಿ’ ಸೇವೆ ಆರಂಭವಾದಾಗಿನಿಂದ 50 ಸಾವಿರ ರೈತರು ಮಾಹಿತಿ ಆಲಿಸಿದ್ದಾರೆ. ಸಹಾಯವಾಣಿಗೆ ನಿತ್ಯ 350 ರಿಂದ 400 ರೈತರು ಕರೆ ಮಾಡಿ ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಧ್ವನಿ ಮಾಹಿತಿಯಲ್ಲಿ ಹವಾಮಾನ, ಬೀಜೋಪಚಾರ ಹಾಗೂ ಬೆಳೆಯ ಮಾಹಿತಿ ನೀಡಲಾಗುತ್ತಿದೆ. ಇದಲ್ಲದೆ ಸರ್ಕಾರದ ಯೋಜನೆಗಳ ಬಗೆಗೂ ಮಾಹಿತಿ ಒದಗಿಸಲಾಗುತ್ತಿದೆ.

ಪ್ರಸ್ತುತ ಸಹಾಯವಾಣಿ ಕೇಂದ್ರದ ನಿಯಂತ್ರಣ ಕೊಠಡಿ ಉಡುಪಿಯಲ್ಲಿದೆ. ಜಿಲ್ಲೆಯಿಂದ ಕರೆ ಮಾಡಿದ ರೈತರಿಂದ ಮಾಹಿತಿ ಸಂಗ್ರಹಿಸುವ ಸಹಾಯವಾಣಿ ಕೇಂದ್ರದ ಸಿಬ್ಬಂದಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಚರ್ಚಿಸಿ ನಂತರ ರೈತರನ್ನು ಸಂಪರ್ಕಿಸಿ ಅವರ ಸಮಸ್ಯೆಗೆ ಪರಿಹಾರ ಹೇಳುತ್ತಿದ್ದಾರೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಬೆಳೆಯ ಬೆಳವಣಿಗೆ, ಕೀಟಬಾಧೆ ಮತ್ತಿತರ ಅಂಶಗಳನ್ನು ಅರಿತುಕೊಂಡು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಕೃಷಿ ವಿಜ್ಞಾನಿಗಳಿಗೂ ಮಾಹಿತಿ ಪೂರೈಸುತ್ತಿದ್ದಾರೆ.

‘ರಿಲಯನ್ಸ್‌ ಪ್ರತಿಷ್ಠಾನವು 2012ರಿಂದ ಬೀದರ್ ಜಿಲ್ಲೆಯ ಭಾಲ್ಕಿ, ಬೀದರ್ ಹಾಗೂ ಔರಾದ್ ತಾಲ್ಲೂಕಿನ 26 ಗ್ರಾಮಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ರಿಲಯನ್ಸ್‌ ಫೌಂಡೇಷನ್ ಇನ್ ಫಾರ್ಮೇಷನ್ ಸರ್ವಿಸಸ್ ಮೂಲಕ ಜಿಲ್ಲೆಯ ಸುಮಾರು 1.40 ಲಕ್ಷ ರೈತರಿಗೆ ಅನುಕೂಲವಾಗುವಂತೆ ಧ್ವನಿ ಸಂದೇಶದ ಮಾಹಿತಿ ಒದಗಿಸಲಾಗುತ್ತಿದೆ’ ಎಂದು ರಿಲಯನ್ಸ್‌ ಧ್ವನಿ ಮಾಹಿತಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಶಿವಾನಂದ ಮಠಪತಿ ಹೇಳುತ್ತಾರೆ.

‘ಕೃಷಿ, ತೋಟಗಾರಿಕೆ, ಸರ್ಕಾರದ ಯೋಜನೆಗಳು, ಮಳೆ, ಪಶುಪಾಲನೆ, ಕಿರು ಉದ್ದಿಮೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಉಚಿತವಾಗಿ ಕೊಡಲಾಗುತ್ತಿದೆ. ರೈತರು ರಿಲಯನ್ಸ್‌ ಯೋಜನೆಯ ಉಚಿತ ಸಹಾಯವಾಣಿ ಸಂಖ್ಯೆ18004198800ಗೆ ಕರೆ ಮಾಡಿ ಸಮಗ್ರ ಮಾಹಿತಿ ಪಡೆಯಬಹುದು’ ಎನ್ನುತ್ತಾರೆ ಅವರು.

‘ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆ ಅಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ರೈತರು ಪರದಾಡುತ್ತಿದ್ದಾಗ ಪ್ರತಿಷ್ಠಾನದ ಸಂಪನ್ಮೂಲ ವ್ಯಕ್ತಿಗಳು ಜಿಲ್ಲೆಯ 4,048 ರೈತರ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಸಿದ್ದಾರೆ. ಗ್ರಾಮ ಪಂಚಾಯಿತಿ ಹಾಗೂ ಸೊಸೈಟಿಗಳಲ್ಲಿ ಕೆಲಸ ಮಾಡುತ್ತಿರುವ ಆಪರೇಟರ್‌ಗಳಿಗೂ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಹೇಗೆ ಭರ್ತಿ ಮಾಡಬೇಕು ಎನ್ನುವ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ’ ಎಂದು ತಿಳಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು