ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಸಂಸ್ಥೆಯಾಗಿ ವಿಟಿಯು ಬೆಳೆಸುವ ಗುರಿ: ವಿದ್ಯಾಶಂಕರ

ಜಿಎನ್‍ಡಿ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಗುರುಫೆಸ್ಟ್‌ನಲ್ಲಿ ಕುಲಪತಿ ಎಸ್. ವಿದ್ಯಾಶಂಕರ ಹೇಳಿಕೆ
Last Updated 24 ಮಾರ್ಚ್ 2023, 15:19 IST
ಅಕ್ಷರ ಗಾತ್ರ

ಬೀದರ್‌: ‘ವಿಟಿಯು ಅನ್ನು ಜಾಗತಿಕ ಸಂಸ್ಥೆಯನ್ನಾಗಿ ಬೆಳೆಸುವ ಗುರಿ ಇದೆ. ಶ್ರೀಲಂಕಾ ಸೇರಿದಂತೆ ವಿದೇಶಗಳಲ್ಲೂ ಕ್ಯಾಂಪಸ್ ಆರಂಭಿಸಲು ಉದ್ದೇಶಿಸಿದೆ. ಇದಕ್ಕಾಗಿ ವಿವಿ ನಿಯಮ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್. ವಿದ್ಯಾಶಂಕರ ಹೇಳಿದರು.

ನಗರದ ಗುರುನಾನಕದೇವ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ, ಸಾಂಸ್ಕೃತಿಕ ಹಬ್ಬ`ಗುರುಫೆಸ್ಟ್’ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಂತ್ರಿಕ ಕ್ಷೇತ್ರ ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ. ಕೃಷಿ, ಆಹಾರ, ಹವಾಮಾನ ಬದಲಾವಣೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿದೆ. ಹೊಸ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಕೆಯಾಗಲು ಹೊಸ ಹೊಸ ಶೋಧ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿಟಿಯು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗೆ ಇರುವ ಮಹತ್ವವನ್ನು ವಿಟಿಯು ಅರಿತಿದೆ ಎಂದು ತಿಳಿಸಿದರು.

‘ಬದಲಾದ ಸಂದರ್ಭದಲ್ಲಿ ಶಿಸ್ತಿನ ಅಧ್ಯಯನ, ಕೌಶಲ ಹೊಂದಿದವರಿಗೆ ವಿಪುಲ ಅವಕಾಶಗಳಿವೆ’ ಎಂದು ತಿಳಿಸಿದರು.

‘ಮೆಕ್ಯಾನಿಕಲ್ ಓದಿದವರು ಕಂಪ್ಯೂಟರ್ ಸೈನ್ಸ್ ವಿಷಯ ಕುರಿತು ಪಾಠ ಮಾಡುವ ಕೌಶಲ ಬೆಳೆಸಿಕೊಳ್ಳಬಹುದು. ಹೊಸ ಶಿಕ್ಷಣ ನೀತಿಯು ಈ ರೀತಿಯ ಬಹುಶಿಸ್ತೀಯ ಅಧ್ಯಯನಕ್ಕೆ ಅವಕಾಶ ನೀಡಿದೆ. ಯಾವುದೇ ಒಂದು ಕೋರ್ಸ್ ಪೂರ್ಣಗೊಳಿಸಿದವರು ಅದೇ ಕೋರ್ಸ್ ಅಥವಾ ವಿಷಯಕ್ಕೆ ಸೀಮಿತವಾದಲ್ಲಿ ಉದ್ಯೋಗಾವಕಾಶ ಕಡಿಮೆ’ ಎಂದು ಕುಲಪತಿಯವರು ಹೇಳಿದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಅವಕಾಶಗಳ ಹೆಬ್ಬಾಗಿಲನ್ನು ತೆರೆದಿದೆ. ವಿಟಿಯು ಈ ನೀತಿಯನ್ನು ಜಾರಿಗೊಳಿಸಿದೆ. ಶಿಕ್ಷಣ ಕ್ರಮದಲ್ಲಿ ಹಲವು ಬದಲಾವಣೆ ಆಗಿವೆ. ಪಠ್ಯ ಹೊಸ ಸ್ವರೂಪ ಪಡೆದುಕೊಂಡಿದೆ. ವಿದ್ಯಾರ್ಥಿಗಳು ಬಹು ವಿಷಯಗಳಲ್ಲಿ ಪರಿಣಿತಿ ಹೊಂದುವಂತಾಗಿದ್ದು, ಇದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತಿದೆ’ ಎಂದು ತಿಳಿಸಿದರು.

ಕಾಲೇಜಿನ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರಬರಲು ತಾಂತ್ರಿಕ, ಸಾಂಸ್ಕೃತಿಕ ಉತ್ಸವದಂತಹ ಕಾರ್ಯಕ್ರಮಗಳು ನೆರವಾಗುತ್ತವೆ’ ಎಂದರು.

‘ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇಷ್ಟವಿರುವ ವಿಷಯದ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.

ಐಎಸಿಸಿ ದಕ್ಷಿಣ ಭಾರತ ಅಧ್ಯಕ್ಷ ಡಾ. ಸಿ. ಮನೋಹರ ಮಾತನಾಡಿದರು. ಜಿಎನ್‍ಡಿಇಸಿ ಅಧ್ಯಕ್ಷ ಸರ್ದಾರ್ ಬಲಬೀರಸಿಂಗ್, ಶ್ರೀ ನಾನಕಜೀರಾ ಸಾಹೇಬ್ ಫೌಂಡೇಶನ್‍ನ ಸರ್ದಾರ್ ನಾನಕಸಿಂಗಜಿ, ಸರ್ದಾರ್ ಪ್ರೀತಂಸಿಂಗ್, ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಬಸವರಾಜ ಗಾದಗೆ, ಜಿಎನ್‍ಡಿ ಕಾಲೇಜಿನ ಪ್ರಾಚಾರ್ಯ ಧನಂಜಯ, ಗುರುಫೆಸ್ಟ್ ಸಂಯೋಜಕ ನೀಲಶೆಟ್ಟಿ, ಪ್ರೊ. ಬಿ.ಬಿ. ಕೋರಿ, ಡಾ. ಸಂಗಮೇಶ ಕಿವಡೆ, ನಾಗಶೆಟ್ಟಿ ಬಿರಾದಾರ್, ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT