ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ: ಬತ್ತಿದ ಬೀದರ್ ಜಿಲ್ಲೆಯ ಜೀವನಾಡಿ ಮಾಂಜ್ರಾ

ಬೆಳೆ ಉಳಿಸಿಕೊಳ್ಳಲು ಹೊಂಡಗಳಲ್ಲಿ ನಿಂತಿರುವ ನೀರು ಬಳಕೆ ಮಾಡುತ್ತಿರುವ ರೈತರು
ಗುರುಪ್ರಸಾದ ಮೆಂಟೇ
Published 7 ಮಾರ್ಚ್ 2024, 6:00 IST
Last Updated 7 ಮಾರ್ಚ್ 2024, 6:00 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕಿನ ಕೃಷಿಕರ ಜೀವನಾಡಿಯಾಗಿರುವ ಮಾಂಜ್ರಾ ನದಿ ಒಣಗಿ ನಿಂತಿದೆ. ಹೊಂಡಗಳಲ್ಲಿ ನಿಂತಿರುವ ನೀರನ್ನು ಬಳಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹುಲಸೂರ ಸುತ್ತಮುತ್ತಲಿನ 30ಕ್ಕಿಂತಲೂ ಹೆಚ್ಚು ಗ್ರಾಮಗಳ ಸುಮಾರು 90 ಸಾವಿರ ಜನರು ಮಾಂಜ್ರಾ ನದಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ನದಿ ತಟದ ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿಗೆ ಮಾಂಜ್ರಾ ನದಿ ಭರವಸೆಯಾಗಿದೆ. ನದಿ ನೀರನ್ನು ಆಶ್ರಯಿಸಿ ರೈತರು ಸೋಯಾ ಅವರೆ, ತೊಗರಿ, ಜೋಳ, ಗೋಧಿ, ತೋಟಗಾರಿಕೆ ಬೆಳೆಗಳಾದ ಶುಂಠಿ, ಕಬ್ಬು ಹಾಗೂ ತರಕಾರಿ ಬೆಳೆಯುತ್ತಾರೆ.

ಡಿಸೆಂಬರ್‌ನಿಂದಲೇ ಸೊರಗುತ್ತ ಬಂದಿದ್ದ ಮಾಂಜ್ರಾ ನದಿಯ ಒಡಲು ಈಗ ಸಂಪೂರ್ಣವಾಗಿ ಬತ್ತಿ ಹೋಗಿದೆ. ನದಿಯ ಒಡಲೊಳಗೆ ಅಲ್ಲಲ್ಲಿ ಇರುವ ಗುಂಡಿಗಳಲ್ಲಿ ಮಾತ್ರ ಸ್ವಲ್ಪ ನೀರು ನಿಂತಿದೆ. ನದಿ ನೀರು ಆಶ್ರಿತ ಬೆಳೆಗಳು ಒಣಗಿ ಹೋಗುತ್ತಿರುವುದರಿಂದ ರೈತರು ಕೆಲವೆಡೆ ಜೆಸಿಬಿ ಬಳಸಿ ನದಿ ಮಧ್ಯೆಯೇ ಗುಂಡಿಗಳನ್ನು ತೋಡಿದ್ದಾರೆ. ಈ ಗುಂಡಿಗಳಲ್ಲಿ ನಿಂತಿರುವ ನೀರನ್ನು ಕೃಷಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

‘ಬೇಸಿಗೆ ಬೆಳೆಯಾಗಿ ಶೇಂಗಾ ಬೆಳೆಯುತ್ತಿದ್ದೆವು. ಇತ್ತೀಚಿನ ವರ್ಷಗಳಲ್ಲಿ ಡಿಸೆಂಬರ್ ನಂತರ ನದಿಯಲ್ಲಿ ನೀರು ಇರುವುದಿಲ್ಲ. ಅದಕ್ಕಾಗಿ ಬೇಸಿಗೆ ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದೇವೆ’ ಎನ್ನುತ್ತಾರೆ ಕೊಂಗಳಿ ಗ್ರಾಮದ ದತ್ತಾ ಸಾತಬಾಯಿ.

ಅನೇಕ ರೈತರು ನದಿ ನೀರನ್ನು ನಂಬಿ ಬೇಸಿಗೆ ಕೃಷಿ ಮಾಡುತ್ತಿದ್ದರು. ಕಳೆದ ಒಂದು ದಶಕದಿಂದ ಮಾಂಜ್ರಾ ನದಿಯಲ್ಲಿ ವರ್ಷದಿಂದ ವರ್ಷಕ್ಕೆ ನೀರು ಕಡಿಮೆಯಾಗುತ್ತಿದೆ. ತೇವಾಂಶ ಕಳೆದುಕೊಂಡಿರುವ ಭೂಮಿಯಲ್ಲಿ ಈಗ ಬೇಸಿಗೆಯಲ್ಲಿ ಯಾವ ಬೆಳೆಯನ್ನೂ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿವರಿಸಿದರು.

ಅಂತರ್ಜಲ ಕುಸಿತ: ರೈತರ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿರುವುದರಿಂದ ಬೆಳೆ ರಕ್ಷಣೆ ಕಷ್ಟವಾಗುತ್ತಿದೆ ಎಂದು ರೈತರು ಹೇಳುತ್ತಾರೆ.

ಕೂಡಲೇ ಸರ್ಕಾರ ಮಹಾರಾಷ್ಟ್ರದಿಂದ ಮಾಂಜ್ರಾ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹುಲಸೂರ ತಾಲ್ಲೂಕಿನಲ್ಲಿ ಹರಿಯುವ ಮಾಂಜ್ರಾ ನದಿ ಬತ್ತಿರುವುದು

ಹುಲಸೂರ ತಾಲ್ಲೂಕಿನಲ್ಲಿ ಹರಿಯುವ ಮಾಂಜ್ರಾ ನದಿ ಬತ್ತಿರುವುದು

ದನ–ಕರುಗಳು ರೈತರ ಹೊಲಗಳಿಗೆ ಆಸರೆಯಾಗಿದ್ದ ನದಿಯಲ್ಲಿ 15 ದಿನಗಳ ತನಕ ನೀರು ಸಿಗಬಹುದು. ನದಿ ಪೂರ್ತಿ ಬತ್ತಿ ಹೋದ ನಂತರ ಕುಡಿಯಲೂ ನೀರು ಸಿಗದು
-ನಾಗೇಶ ಚೌರೆ ರೈತ ಹುಲಸೂರ
ಅಧಿಕಾರಿಗಳ ಹಾಗೂ ಸರ್ಕಾರದ ಉದಾಸೀನದಿಂದ ಸಾವಿರಾರು ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ 8 ಕೆರೆ ತುಂಬಿಸುವ ಯೋಜನೆ ವಿಫಲವಾಗಿದೆ. ಆದ್ದರಿಂದ ನೀರಿನ ಸಮಸ್ಯೆ ಎದುರಾಗಿದೆ
- ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
ರಾಜ್ಯದಾದ್ಯಂತ ಬರಗಾಲ ಘೋಷಣೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಜಾನುವಾರು ಸೇರಿ ಯಾವುದೇ ಗ್ರಾಮಗಳಿಗೆ ನೀರಿನ ಕೊರತೆಯಾಗದಂತೆ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ
-ಯಲ್ಲಪ್ಪ ಸುಬೇದಾರ ತಹಶೀಲ್ದಾರ್

ನೀರಿನಂತೆ ಹಣ ಹರಿದರೂ ತುಂಬದ ಕೆರೆ

ತಾಲ್ಲೂಕಿನಲ್ಲಿ ಈ ಬಾರಿ ಬರಗಾಲದ ಛಾಯೆ ಆವರಿಸಿದೆ. ತಾಲ್ಲೂಕು ಅಷ್ಟೇ ಅಲ್ಲ; ತಾಲ್ಲೂಕಿನ ಬಹುತೇಕ ಕೆರೆಗಳೂ ಬತ್ತುವ ಹಂತ ತಲುಪಿವೆ. ಗ್ರಾಮದ ಕೆರೆಗಳಿಗೆ ಕಾಯಕಲ್ಪ ನೀಡಲು ಮಾಂಜ್ರಾ ನದಿಗೆ ಅಡ್ಡಲಾಗಿ ₹188 ಕೋಟಿ ವೆಚ್ಚದಲ್ಲಿ ಕೊಂಗಳಿ ಏತ ನಿರಾವರಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಆದರೆ ಬದ್ಧತೆ ಕೊರತೆಯಿಂದಾಗಿ ಅದು ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆಯಿಂದ ತಾಲ್ಲೂಕಿನ ಬೇಲೂರ ಗುತ್ತಿ ಮಿರಕಲ್ ನಾರಾಯಣಪುರ ತ್ರಿಪುರಾಂತ ಬೇಟಬಾಲ್ಕುಂದ ಧನ್ನೂರ ಗ್ರಾಮಗಳ ಕೆರೆಗಳನ್ನು ತುಂಬಿಸಲು ಯೋಜಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈಗ ಕೆರೆಗಳು ಬತ್ತಿ ಹೋಗುವ ಹಂತ ತಲುಪಿವೆ. ಕೊಂಗಳಿ ಏತ ನೀರಾವರಿ ಯೋಜನೆ 2020ರಲ್ಲಿ ಮುಗಿಯಬೇಕಾಗಿತ್ತು. ಇನ್ನೂ ಮುಗಿದಿಲ್ಲ. ₹188 ಕೋಟಿ ಖರ್ಚು ಮಾಡಿದರೂ ಹನಿ ನೀರು ಬಂದಿಲ್ಲ. ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಿರಖಲ್ ಗ್ರಾಮದ ರೈತರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT