ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲ ಬಂದರೂ ತಪ್ಪದ ಕುಡಿಯುವ ನೀರಿನ ಬವಣೆ

Last Updated 7 ಜುಲೈ 2019, 10:46 IST
ಅಕ್ಷರ ಗಾತ್ರ

ಬೀದರ್‌: ನಗರದ ಕೇಂದ್ರ ಸ್ಥಾನದಲ್ಲಿರುವ ನಗರಸಭೆಯ ವಾರ್ಡ್‌ ಸಂಖ್ಯೆ 5 ಅಭಿವೃದ್ಧಿ ವಿಷಯದಲ್ಲಿ ಅಕ್ಷರಶಃ ದೀಪದ ಕೆಳಗಿನ ಕತ್ತಲಂತೆ ಆಗಿದೆ. ನಗರದ ಮಧ್ಯೆ ವಾಸವಾಗಿರುವುದು ಬಿಟ್ಟರೆ ಇಲ್ಲಿಯ ಜನರಿಗೆ ಅಗತ್ಯ ಸೌಕರ್ಯಗಳು ಸಮರ್ಪಕವಾಗಿ ದೊರಕುತ್ತಿಲ್ಲ.

ಪನ್ಸಾಲ್ ತಾಲೀಮ್, ನೂರಖಾನ್‌ ತಾಲೀಮ್, ತೇಲಿ ಗಲ್ಲಿ, ಅರ್ಕಟ್ ಗಲ್ಲಿ ನಿವಾಸಿಗಳು ಒಂದೇ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಗರಸಭೆಯ ನಲ್ಲಿಗಳಿಗೆ ಸರಿಯಾಗಿ ನೀರು ಬರುತ್ತಿರಲಿಲ್ಲ. ವಾರಕ್ಕೊಮ್ಮೆ ನೀರು ಬಂದಾಗ ಜನ ಮುಗಿಬಿದ್ದು ನೀರು ತುಂಬಿಕೊಳ್ಳುತ್ತಿದ್ದರು. ನಿರಂತರ ಕುಡಿಯುವ ನೀರಿನ ಯೋಜನೆ ಪ್ರಕಟಿಸಿದಾಗ ಮಹಿಳೆಯರ ಸಂತಸಕ್ಕೆ ಪಾರವೇ ಇರಲಿಲ್ಲ. ಸ್ವತಃ ಭಾಗೀರಥಿಯೇ ಮನೆಯ ಬಾಗಿಲಿಗೆ ಬರಲಿದ್ದಾಳೆ ಎಂದು ಆಸೆ ಇಟ್ಟುಕೊಂಡಿದ್ದರು.

ನಾಲ್ಕು ವರ್ಷಗಳ ಹಿಂದೆ ದಿನದ 24 ಗಂಟೆಯೂ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿ ರಸ್ತೆಗಳನ್ನು ಅಗೆದು ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲಾಯಿತು. ಆದರೆ ಈ ನಲ್ಲಿಗಳಲ್ಲಿ ಇವತ್ತಿಗೂ ಸರಿಯಾಗಿ ನೀರು ಬರುತ್ತಿಲ್ಲ. ಮಹಿಳೆಯರು ಮತ್ತೆ ನಿತ್ಯ ಕೊಡ ಹಿಡಿದು ನೀರಿಗಾಗಿ ಅಲೆಯುವುದು ಮುಂದುವರಿದಿದೆ. ಎಲ್ಲಿಯೂ ನೀರು ಸಿಗದಿದ್ದಾಗ ಹಣಕೊಟ್ಟು ನೀರು ಕೊಂಡುಕೊಳ್ಳುವುದು ಅನಿವಾರ್ಯವಾಗುತ್ತಿದೆ.

‘ಮಳೆಗಾಲ ಆರಂಭವಾದರೂ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ದಿನದ 24 ಗಂಟೆ ನೀರು ಪೂರೈಸುವ ಯೋಜನೆಯಿಂದ ನಮಗೆ ಎಳ್ಳಷ್ಟು ಪ್ರಯೋಜನ ಆಗಿಲ್ಲ. ಫತೇ ದರ್ವಾಜಾ ಮತ್ತಿತರ ಕಡೆಯಿಂದ ಕುಡಿಯುವ ನೀರನ್ನು ಹೊತ್ತು ತರಬೇಕಾಗಿದೆ’ ಎಂದು ಹೇಳುತ್ತಾರೆ ಅನುಸೂಯಾ ಗೌಳಿ.

‘ನಗರಸಭೆ ಅಳವಡಿಸಿದ್ದ ಹಳೆಯ ಪೈಪ್‌ಲೈನ್‌ನಲ್ಲಿ ಈ ಮುಂಚೆ ಕನಿಷ್ಠ ಮೂರು ದಿನಕ್ಕೊಮ್ಮೆಯಾದರೂ ನೀರು ಸರಬರಾಜು ಆಗುತ್ತಿತ್ತು. ನಿರಂತರ ನೀರು ಪೂರೈಸುವ ಪೈಪ್‌ನಲ್ಲಿ ನೀರೇ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ವಾರ್ಡ್‌ ಸಂಖ್ಯೆ 5 ರಲ್ಲಿ ಇದ್ದ ಒಂದು ಕೊಳವೆ ಬಾವಿ ಕೆಟ್ಟು ಹೋಗಿದೆ. ಅದನ್ನು ದುರಸ್ತಿ ಮಾಡುವಂತೆ ನಿವಾಸಿಗಳು ನಗರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ. ಅದನ್ನು ದುರಸ್ತಿ ಪಡಿಸಿದರೆ ಜನರಿಗೆ ನಿತ್ಯ ಕನಿಷ್ಠ 5,6 ಕೊಡ ನೀರು ದೊರೆಯಲಿದೆ ಎಂದು ಇಲ್ಲಿಯ ನಿವಾಸಿಗಳು ಹೇಳುತ್ತಾರೆ.

‘ನಲ್ಲಿಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ. ನಗರಸಭೆಯವರು ಕೊಳವೆ ಬಾವಿಯನ್ನೂ ದುರಸ್ತಿ ಮಾಡಿಸುತ್ತಿಲ್ಲ. ಟ್ಯಾಂಕರ್ ಮೂಲಕವೂ ನೀರು ಪೂರೈಕೆ ಮಾಡುತ್ತಿಲ್ಲ. ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಗರಸಭೆಯಲ್ಲಿ ಜನರ ಸಮಸ್ಯೆಯನ್ನು ಕೇಳುವವರೇ ಇಲ್ಲದಿದ್ದರೆ ಯಾರಿಗೆ ದೂರಬೇಕು. ಇನ್ನು ಮಹಿಳೆಯರು ಮಕ್ಕಳೊಂದಿಗೆ ಕೊಡಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎನ್ನುತ್ತಾರೆ ಪನ್ಸಾಲ್ ತಾಲೀಮ್ ನಿವಾಸಿಗಳು

ಒಳ ಚರಂಡಿ ನಿರ್ಮಿಸಿದರೂ ಅದರಲ್ಲಿ ನೀರು ಹರಿದು ಹೋಗುತ್ತಿಲ್ಲ. ಕಳಪೆ ಕಾಮಗಾರಿಯಿಂದಾಗಿ ಅಲ್ಲಲ್ಲಿ ಬ್ಲಾಕ್‌ ಆಗಿದೆ. ಗಟಾರಗಳಲ್ಲಿ ಕಸ ತುಂಬಿಕೊಂಡಿದೆ. ಒಂದೇ ಕಡೆ ಸಂಗ್ರಹವಾಗಿರುವ ಕೊಳಕು ನೀರು ಗಬ್ಬು ನಾರುತ್ತಿದೆ. ಕೊಳಚೆ ನೀರಿನಿಂದಾಗಿ ಸೊಳ್ಳೆಗಳು ಹೆಚ್ಚಾಗಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಅನೇಕ ಬಾರಿ ಇಲ್ಲಿಯ ನಿವಾಸಿಗಳಿಗೆ ಡೆಂಘಿ ಕಾಣಿಸಿಕೊಂಡಿದೆ ಎಂದು ಹೇಳುತ್ತಾರೆ.

ರೋಗ ಬಂದ ತಕ್ಷಣ ನಗರಸಭೆಯವರು ಅಪರೂಪಕ್ಕೆ ಫಾಗಿಂಗ್‌ ಮಾಡಿ, ಕೆಮಿಕಲ್‌ ಸಿಂಪಡಿಸುತ್ತಾರೆ. ಕೆಮಿಕಲ್‌ ಸಿಂಪರಣೆ ಮಾಡುವ ಸಿಬ್ಬಂದಿ ಈ ವರ್ಷ ಒಂದು ಬಾರಿಯೂ ಕಾಣಿಸಿಲ್ಲ. ನಗರಸಭೆಯ ಕಸ ಸಾಗಿಸುವ ವಾಹನ ನಿರಂತರವಾಗಿ ಬರುವುದಿಲ್ಲ. ಹೀಗಾಗಿ ಇಲ್ಲಿಯ ನಿವಾಸಿಗಳು ರಸ್ತೆ ಬದಿಗೆ ಕಸ ಎಸೆಯುತ್ತಿದ್ದಾರೆ. ರಸ್ತೆ ಬದಿಯಲ್ಲಿ ಸಂಗ್ರಹವಾದ ಕಸವನ್ನು ಪೌರ ಕಾರ್ಮಿಕರು ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ.

‘ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ಗಳಿಗೆ ಎಷ್ಟೇ ದೂರವಾಣಿ ಕರೆಗಳನ್ನು ಮಾಡಿದರೂ ಅವರು ಸ್ವೀಕರಿಸುವುದೇ ಇಲ್ಲ. ಆರು ತಿಂಗಳಿಂದ ನಗರಸಭೆಗೆ ಆಯುಕ್ತರು ಇಲ್ಲ. ನಗರಸಭೆ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮೂಗುದಾರ ಹಾಕುವವರು ಇಲ್ಲವಾಗಿದ್ದಾರೆ. ಜಿಲ್ಲೆಯಲ್ಲಿ ಮೂವರು ಸಚಿವರು ಇದ್ದರೂ ಜನರ ಗೋಳು ಕೇಳುವವರಿಲ್ಲ’ ಎಂದು ನಗರಸಭೆ ಮಾಜಿ ಸದಸ್ಯ ಅಬ್ದುಲ್ ರೆಹಮಾನ ಸಾಕಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಅರ್ಕಟ ಗಲ್ಲಿಯಲ್ಲಿ ಗಟಾರಗಳು ತುಂಬಿ ತುಳುಕುತ್ತಿವೆ. ಮೂರು ತಿಂಗಳಿಂದ ನಗರಸಭೆಯ ಕಾರ್ಮಿಕರು ನಮ್ಮ ಓಣಿಗೆ ಬಂದಿಲ್ಲ. ಬೀದರ್‌ನಲ್ಲಿ ಮಳೆ ಜೋರು ಪಡೆದುಕೊಂಡಿಲ್ಲ. ಜೋರಾಗಿ ಮಳೆ ಬಂದರೆ ಮನೆಗಳಿಗೆ ಕೊಳಚೆ ನೀರು ನುಗ್ಗಲಿದೆ’ ಎಂದು ಅರ್ಕಟ್‌ ಗಲ್ಲಿಯ ನಿವಾಸಿ ಚಂದ್ರಕಾಂತ ಸ್ವಾಮಿ ಹೇಳುತ್ತಾರೆ.

ವಾರ್ಡ್‌ ಸಂಖ್ಯೆ 5ರಲ್ಲಿ ಕೊರೆಯಲಾಗಿರುವ ಕೊಳವೆಬಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT