ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ‘ಗಂಡು ಮಕ್ಕಳು ಹೆಣ್ಣಿಗೆ ಗೌರವ ಕೊಡಲಿ’

ಬೀದರ್‌ ನಗರದ ತಾಯಿ ಮಗುವಿನ ವೃತ್ತದಲ್ಲಿ ಮಹಿಳಾ ದಿನಾಚರಣೆ
Published 8 ಮಾರ್ಚ್ 2024, 15:53 IST
Last Updated 8 ಮಾರ್ಚ್ 2024, 15:53 IST
ಅಕ್ಷರ ಗಾತ್ರ

ಬೀದರ್‌: ವಿವಿಧ ಸಂಘಟನೆಗಳಿಂದ ನಗರದ ತಾಯಿ ಮಗುವಿನ ವೃತ್ತದಲ್ಲಿ ಶುಕ್ರವಾರ ಮಹಿಳಾ ದಿನ ಆಚರಿಸಲಾಯಿತು.

ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ಲೇಖಕಿಯರ ಸಂಘ, ಬಸವಕೇಂದ್ರ ಮಹಿಳಾ ಘಟಕ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದವರು ಸೇರಿ ಸಂಭ್ರಮದಿಂದ ಕಾರ್ಯಕ್ರಮ ಆಚರಿಸಿದರು.

ತಾಯಿ ಮಗುವಿನ ವೃತ್ತದ ಮೂರ್ತಿಗೆ ಹಾರ‌ ಹಾಕಿ, ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ, ಹೆಣ್ಣು ಜಗದ ಕಣ್ಣು, ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದು ಘೋಷಣೆಗಳನ್ನು ಕೂಗಿದರು.

ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಬಿ.ಜೆ. ಪಾರ್ವತಿ ವಿ. ಸೋನಾರೆ ಮಾತನಾಡಿ, ‘ಹೆಣ್ಣು ಇಂದಿನ ಸ್ಥಿತ್ಯಂತರ ಕಾಲಘಟ್ಟದಲ್ಲಿ ತುಂಬಾ ತೊಂದರೆಯಲ್ಲಿದ್ದಾಳೆ. ಹೆಣ್ಣನ್ನು ರಕ್ಷಿಸಿ ಎಂದು ಘೋಷಣೆ ಕೂಗುವ ಪರಿಸ್ಥಿತಿ ಎದುರಾಗಿದೆ. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಹೆಣ್ಣಿಗಾಗಿ ಯುದ್ಧವಾಗುವ ಕಾಲ ಬರುವುದು ದೂರವಿಲ್ಲ’ ಎಂದರು.

ಹೆಣ್ಣು ಮಕ್ಕಳನ್ನು ರಕ್ಷಿಸುವುದಷ್ಟೇ ಅಲ್ಲ ಗೌರವಿಸುವುದನ್ನು ಕೂಡ ನಾವು ನಮ್ಮ ಗಂಡು ಮಕ್ಕಳಿಗೆ ಕಲಿಸಬೇಕಾಗಿದೆ. ಈ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ್‌ ಮಾತನಾಡಿ, ‘1974ರಿಂದ ಮಹಿಳಾ ದಿನ ಆಚರಿಸಿಕೊಂಡು ಬರುತ್ತಿದ್ದೇವೆ. ಈ ನಡುವೆ ಅನೇಕ ಬದಲಾವಣೆಗಳಾಗಿವೆ. ಮಹಿಳೆಯರು ಈಗೀಗ ಆತ್ಮಹತ್ಯೆಗೆ ಕೊರಳೊಡ್ಡುತ್ತಿಲ್ಲ. ಧೈರ್ಯದಿಂದ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಪುರುಷನಿಗೆ ಸಮಾನವಾದ ಸ್ಥಾನಮಾನಗಳು ಆಕೆಗೆ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ತಂದೆ, ಅಣ್ಣ, ಗಂಡ ಮತ್ತು ಭಾಮೈದುನರು ಸಹಕಾರ ನೀಡುವ ಅವಶ್ಯಕತೆ ಇದೆ’ ಎಂದು ಹೇಳಿದರು.

ಬಸವ ಕೇಂದ್ರದ ಮಹಿಳಾ ಘಟಕದ ಅಧ್ಯಕ್ಷೆ ‌ವಿದ್ಯಾ ಬಲ್ಲೂರ ಮಾತನಾಡಿ, ‘ಎಲ್ಲಿ ಮಹಿಳೆಯರು ನೆಲೆಸಿದ್ದಾರೆ ಅಲ್ಲೆಲ್ಲಾ ದೇವತೆಗಳು ನೆಲೆಸಿದ್ದಾರೆ ಎಂಬ ಮಾತನ್ನು ನಾವೆಲ್ಲ ಕೇಳುತ್ತಲೇ ಬಂದಿದ್ದೇವೆ. ಆದರೆ ಇಷ್ಟು ಶತಮಾನಗಳು ಕಳೆದರೂ ಹೆಣ್ಣಿನ ಮೇಲೆ ಅನ್ಯಾಯ, ಅತ್ಯಾಚಾರಗಳು ನಿಂತಿಲ್ಲ. ವಿದ್ಯಾವಂತರೇ ಹೆಚ್ಚಿರುವ ಇವತ್ತಿನ ಸಮಾಜದಲ್ಲಿ ಹೆಣ್ಣನ್ನು ನಿಕೃಷ್ಟವಾಗಿ ಕಾಣುವ ಮನಸ್ಸುಗಳು ಹೆಚ್ಚುತ್ತಲೇ ಇವೆ’ ಎಂದರು.

ರೂಪಾ ಪಾಟೀಲ, ಜಯದೇವಿ ಯದ್ಲಾಪೂರೆ, ಶ್ರೇಯಾ ಮಹೇಂದ್ರಕರ್, ಮಹಾನಂದ ಎಸ್.ಪಾಟೀಲ, ಶ್ರೀದೇವಿ ಹೂಗಾರ, ಕೀರ್ತಿಲತಾ ಹೊಸಳ್ಳಿ, ಸ್ವರೂಪರಾಣಿ ನಾಗೂರೆ, ಮಂಗಲಾ ಭಾಗವತ್, ರೇಣುಕಾ ಮಠ್, ಶಿಲ್ಪಾ ಮಜಗೆ, ಲಕ್ಷ್ಮಿ ಗಾದಗಿ, ಮಹಿಳಾ ಸಫಾಯಿ ಕರ್ಮಚಾರಿಗಳು ಪಾಲ್ಗೊಂಡಿದ್ದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೀದರ್‌ ಜಿಲ್ಲಾ ಪೊಲೀಸ್‌ ಇಲಾಖೆಯ ಅಕ್ಕ ಪಡೆಯವರು ನಗರದಲ್ಲಿ ಶುಕ್ರವಾರ ಬೈಕ್‌ ಜಾಥಾ ನಡೆಸಿದರು
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೀದರ್‌ ಜಿಲ್ಲಾ ಪೊಲೀಸ್‌ ಇಲಾಖೆಯ ಅಕ್ಕ ಪಡೆಯವರು ನಗರದಲ್ಲಿ ಶುಕ್ರವಾರ ಬೈಕ್‌ ಜಾಥಾ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT